ADVERTISEMENT

11 ವರ್ಷಗಳಲ್ಲಿ ಬಲಿಷ್ಠ ಭಾರತಕ್ಕೆ ಅಡಿಪಾಯ: ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 12:41 IST
Last Updated 10 ಜೂನ್ 2025, 12:41 IST
   

ಬೀದರ್‌: ‘ಕಳೆದ 11 ವರ್ಷಗಳ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಬಲಿಷ್ಠ ಭಾರತಕ್ಕೆ ಗಟ್ಟಿ ಅಡಿಪಾಯ ಹಾಕುವ ಕೆಲಸ ಮಾಡಿದೆ’ ಎಂದು ಬಿಜೆಪಿ ಮುಖಂಡರೂ ಆದ ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ತಿಳಿಸಿದರು.

2047ರಲ್ಲಿ ವಿಕಸಿತ ಭಾರತ ಮಾಡುವುದು ಮೋದಿಯವರ ಗುರಿ. ಕಳೆದ 11 ವರ್ಷಗಳಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಇದರಲ್ಲಿ ರಾಮಮಂದಿರ ನಿರ್ಮಾಣ, ತ್ರಿವಳಿ ತಲಾಖ್‌, ಸಿಸಿಎ ಜಾರಿ, ಇಡೀ ದೇಶಕ್ಕೆ ಜಿಎಸ್‌ಟಿ ತೆರಿಗೆ ಪದ್ಧತಿ, ಸರ್ಜಿಕಲ್‌ ಸ್ಟ್ರೈಕ್‌, ಎನ್‌ಇಪಿ ಜಾರಿ, ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ, ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದು, ಆಪರೇಷನ್‌ ಸಿಂಧೂರ ಪ್ರಮುಖವಾದವುಗಳು ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಬಡತನ ನಿರ್ಮೂಲನೆ, ಸ್ವಸ್ಥ ಭಾರತ, ಪ್ರತಿಯೊಬ್ಬರಿಗೂ ಸೂರು, ಮೂಲಸೌಕರ್ಯ ಹೆಚ್ಚಳ, ಉಡಾನ್‌ ಯೋಜನೆಯಡಿ ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಿಸಿ, ಪ್ರತಿಯೊಬ್ಬರಿಗೂ ವಿಮಾನ ಪ್ರಯಾಣದ ಕನಸು ನನಸು ಮಾಡಿದ್ದಾರೆ. ರೈಲು ನಿಲ್ದಾಣಗಳನ್ನು ಏರ್‌ಪೋರ್ಟ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. 2014ರಲ್ಲಿ 2 ಟ್ರಿಲಿಯನ್‌ ಡಾಲರ್‌ ಇದ್ದ ಭಾರತದ ಆರ್ಥಿಕತೆ ಈಗ 4.2 ಟ್ರಿಲಿಯನ್‌ಗೆ ಹೆಚ್ಚಾಗಿದೆ. 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಭಾರತದ ಆರ್ಥಿಕತೆ ತಲುಪಿದೆ. ಶೀಘ್ರದಲ್ಲೇ 3ನೇ ಸ್ಥಾನಕ್ಕೆ ತಲುಪಲಿದೆ. ಇದೆಲ್ಲ ಸಾಧ್ಯವಾದದ್ದು ಮೋದಿಯವರ ಧೀಮಂತ ನಾಯಕತ್ವದಿಂದ ಎಂದು ಹೇಳಿದರು.

ADVERTISEMENT

ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆಂತರಿಕ ಹಾಗೂ ಬಾಹ್ಯ ಸುರಕ್ಷತೆಯ ಬಗ್ಗೆ ಅನುಮಾನಗಳಿದ್ದವು. ಈಗ ಆಂತರಿಕ ಹಾಗೂ ಬಾಹ್ಯ ಶತ್ರುಗಳಿಂದ ದೇಶ ಸುರಕ್ಷಿತವಾಗಿದೆ. ದೇಶ ಮೊದಲು ಎಂಬ ಭಾವನೆಯೊಂದಿಗೆ ಮೋದಿ ಸರ್ಕಾರವು ಹಲವಾರು ಯೋಜನೆಗಳನ್ನು ಘೋಷಿಸಿ, ಜಾರಿಗೆ ತಂದಿದೆ ಎಂದರು.

81 ಕೋಟಿ ಜನರಿಗೆ ಅನ್ನ ಯೋಜನೆ, 11 ವರ್ಷಗಳಲ್ಲಿ 4 ಕೋಟಿ ಜನರಿಗೆ ಪಕ್ಕಾ ಮನೆ, ಹಿರಿಯ ನಾಗರಿಕರಿಗೆ ಆಯುಷ್ಮಾನ್‌ ಯೋಜನೆ ವಿಸ್ತರಣೆ, 10.50 ಕೋಟಿ ಮನೆಗಳಿಗೆ ಅನಿಲ ಸಂಪರ್ಕ, 11 ಸಾವಿರ ರೈತರಿಗೆ ವಾರ್ಷಿಕ ₹3.34 ಲಕ್ಷ ಕೋಟಿ ನೇರ ಖಾತೆಗೆ ಜಮೆ ಮಾಡಿ, ಅವರ ಆದಾಯ ಹೆಚ್ಚಿಸಲು ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಜಿ ಮುಳೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಮುಖಂಡರಾದ ಬಾಬುವಾಲಿ, ಮಾಧವ ಹಸುರೆ, ಜಗನ್ನಾಥ ಸಿರಕಟನಳ್ಳಿ, ಬಸವರಾಜ ಪವಾರ ಹಾಜರಿದ್ದರು.

‘ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿಎಂ ಕರೆಸಿದೆ’

‘ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಜನ ಅಮಾಯಕರು ಸಾವನ್ನಪ್ಪಿರುವ ಪ್ರಕರಣದಿಂದ ಕಾಂಗ್ರೆಸ್‌ ಹೈಕಮಾಂಡ್‌ಗೆ ನಾಚಿಕೆಯಾಗಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ನವದೆಹಲಿಗೆ ಕರೆಸಿಕೊಂಡಿದೆ’ ಎಂದು ಬಿಜೆಪಿ ಮುಖಂಡ ಭಗವಂತ ಖೂಬಾ ಟೀಕಿಸಿದರು.

ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್‌ ಸರ್ಕಾರ ಬಹಳ ಬೇಜವಾಬ್ದಾರಿತನದಿಂದ ಆಡಳಿತ ನಡೆಸುತ್ತಿದೆ. ಕಾಲ್ತುಳಿತ ಪ್ರಕರಣದ ಕುರಿತು ಸಿಎಂ, ಡಿಸಿಎಂ ಲಜ್ಜೆಗೆಟ್ಟ ಹೇಳಿಕೆ ನೀಡಿದ್ದಾರೆ. ಇವರ ಪ್ರತಿಷ್ಠೆಗಾಗಿ ಅಮಾಯಕರ ಜೀವಗಳು ಹೋಗಿವೆ. ಆದರೆ, ಇಬ್ಬರು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ. ಇಬ್ಬರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

‘ಮೃತರ ಕುಟುಂಬಕ್ಕೆ ಒಂದು ತಿಂಗಳ ವೇತನ’

‘ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸಾವನ್ನಪ್ಪಿದ 11 ಜನರ ಕುಟುಂಬಗಳಿಗೆ ಎಲ್ಲ ಬಿಜೆಪಿ ಶಾಸಕರು ಒಂದು ತಿಂಗಳ ವೇತನ ನೀಡಲು ನಿರ್ಧರಿಸಲಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿಯೂ ಆದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ತಿಳಿಸಿದರು.

ಐಪಿಎಲ್‌ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ತಂಡಗಳು ಕೂಡ ಪರಿಹಾರ ನೀಡಬೇಕು. ಸರ್ಕಾರ ತಲಾ ₹25 ಲಕ್ಷ ಪರಿಹಾರ ಘೋಷಿಸಿದೆ. ಅದನ್ನು ₹1 ಕೋಟಿಗೆ ಹೆಚ್ಚಿಸಬೇಕು. ಈ ಘಟನೆ ಇಡೀ ರಾಜ್ಯಕ್ಕೆ ಕಪ್ಪು ಚುಕ್ಕೆ. ಘಟನೆಯನ್ನು ಸರಿಯಾಗಿ ನಿಭಾಯಿಸದ ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

‘ಜಿಲ್ಲಾ ಕಾಂಗ್ರೆಸ್‌ ಸುಡುವ ಮನೆ’

‘ಬೀದರ್‌ ಜಿಲ್ಲಾ ಕಾಂಗ್ರೆಸ್‌ ಸುಡುವ ಮನೆ ಆಗಿದೆ. ಅದು ಅವರ ಆಂತರಿಕ ವಿಚಾರವಾಗಿದ್ದು, ಅದರ ಬಗ್ಗೆ ಹೆಚ್ಚು ಮಾತನಾಡಲಾರೆ. ಆದರೆ, ಉಸ್ತುವಾರಿ ಸಚಿವರು ಅನುದಾನ ಸಮಾನವಾಗಿ ಹಂಚಿಕೆ ಮಾಡುತ್ತಿಲ್ಲ’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಆರೋಪಿಸಿದರು.

ಕಾಂಗ್ರೆಸ್‌ ಪಕ್ಷದ ಶಾಸಕರಿಗೆ ₹20 ಕೋಟಿ ಅನುದಾನ ಹಂಚಿಕೆ ಮಾಡಿದ್ದಾರೆ. ಬಿಜೆಪಿ ಶಾಸಕರಿಗೆ ₹5 ಕೋಟಿ ಅನುದಾನ ನೀಡಿದ್ದಾರೆ. ಎಲ್ಲ ಶಾಸಕರಿಗೂ ಕನಿಷ್ಠ ₹30 ಕೋಟಿ ನೀಡಬೇಕು ಎಂದು ಒತ್ತಾಯಿಸಿದರು.

‘ಪ್ರತಿ ಬೂತ್‌ಗೆ ಐದು ಸಸಿ’

ಕೇಂದ್ರ ಸರ್ಕಾರ 11 ವರ್ಷಗಳು ಪೂರೈಸಿರುವುದು ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಪಕ್ಷದಿಂದ ಪ್ರತಿ ಬೂತ್‌ನಲ್ಲಿ ಐದು ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ತಿಳಿಸಿದರು.

ಜೂನ್‌ 5ರಿಂದ ಸಸಿ ನೆಡುವ ಅಭಿಯಾನ ಆರಂಭಿಸಲಾಗಿದೆ. ಬೀಜದ ಉಂಡೆಗಳನ್ನು ಬಿತ್ತುವ ಕಾರ್ಯ ನಡೆಯುತ್ತಿದೆ. ಜೂನ್‌ 21ರಂದು ಯೋಗ ದಿನಾಚರಣೆ, ಜೂನ್‌ 23ರಂದು

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಬಲಿದಾನ ದಿನ, ಜೂನ್‌ 25ರಂದು ತುರ್ತು ಪರಿಸ್ಥಿತಿ ಕರಾಳ ದಿನ ಆಚರಿಸಲಾಗುವುದು ಎಂದರು.

‘ದೇಶವ್ಯಾಪಿ ಅಭಿಯಾನ’

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 11 ವರ್ಷಗಳಲ್ಲಿ ಮಾಡಿರುವ ಸಾಧನೆಗಳನ್ನು ಜನತೆಗೆ ತಿಳಿಸಲು ಜೂನ್‌ 9ರಿಂದ 21ರ ವರೆಗೆ ದೇಶವ್ಯಾಪಿ ಅಭಿಯಾನ ಹಮ್ಮಿಕೊಂಡಿದೆ’ ಎಂದು ಬಿಜೆಪಿ ಮುಖಂಡ ಅಮರನಾಥ ಪಾಟೀಲ ವಿವರಿಸಿದರು.

ಈ ಅಭಿಯಾನವು ವಿಕಸಿತ ಭಾರತದ ಅಮೃತ ಕಾಲ ಮತ್ತು ಸೇವೆ, ಸುಶಾಸನ, ಬಡವರ ಕಲ್ಯಾಣ ಕುರಿತಾಗಿ ಇರುತ್ತದೆ. ‘ಭಾರತ ನನ್ನ ಅನುಭವ’ ಕುರಿತು ಡಿಜಿಟಲ್ ಸ್ಪರ್ಧೆ ಆಯೋಜಿಸಲಾಗಿದೆ. ನಮೋ ಆ್ಯಪ್‌ನಲ್ಲಿ ನೋಂದಣಿ ಮಾಡಿಸಬಹುದು. ಕಿರು ವಿಡಿಯೋ, ಬ್ಲಾಗ್, ರಸಪ್ರಶ್ನೆ ಸ್ಪರ್ಧೆ ಕೂಡ ಏರ್ಪಡಿಸಲಾಗಿದೆ ಎಂದರು.

ಕಾಲ್ತುಳಿತ ಪ್ರಕರಣ: ಮೃತರ ಕುಟುಂಬಕ್ಕೆ ಬಿಜೆಪಿ ಶಾಸಕರ ಒಂದು ತಿಂಗಳ ವೇತನ ನೀಡಲಾಗುತ್ತಿದೆ: ಡಾ.ಬೆಲ್ದಾಳೆ

ಬೀದರ್: ಇತ್ತಿಚೀಗೆ ಬೆಂಗಳೂರು ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ಆ.ಸಿ.ಬಿ ತಂಡದ ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತದಲ್ಲಿ ಮರಣ ಹೊಂದಿದ ೧೧ ಜನರ ಕುಟುಂಬದವರಿಗೆ ಭಾರತೀಯ ಜನತಾ ಪಕ್ಷದ ಶಾಸಕರ ಒಂದು ತಿಂಗಳ ವೇತನ ಪರಿಹಾರ ರೂಪದಲ್ಲಿ ನೀಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ತಿಳಿಸಿದರು.

ಈಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿಎಂ ಹಾಗೂ ಡಿಸಿಎಂಗಳ ಮಧ್ಯೆ ಸಮನ್ವಯದ ಕೊರತೆ ಇದ್ದು ಇವರಿಬ್ಬರಲ್ಲಿ ಗೃಹ ಸಚಿವ ಡಾ.ಪರಮೇಶ್ವರ ಅವರು ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಪ್ರಕರಣದ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು ಎಂದ ಆಗ್ರಹಿಸಿದರು.

ಕಾಲ್ತುಳಿತ ಪ್ರಕರಣಕ್ಕೆ ಸಂಬAಧಿಸಿದAತೆ ವಿಶೇಷ ಅಧಿವೇಷನ ಕರೆಯಬೇಕು. ಆರ್.ಸಿ.ಬಿ ತಂಡದ ಎಲ್ಲಾ ಕ್ರಿಕೇಟ್ ಆಟಗಾರರು  ತಮಗೆ ಬಂದ ಹಣದಲ್ಲಿ ಮೃತರ ಕುಟುಂಬಕ್ಕೆ ಧನ ಸಹಾಯ ಮಾಡಬೇಕು ಎಂದು ಬೆಲ್ದಾಳೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.