ADVERTISEMENT

ಬೀದರ್‌ | ಗಣೇಶನ ಮೂರ್ತಿಗಳ ವಿಸರ್ಜನೆ: ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 6:49 IST
Last Updated 1 ಸೆಪ್ಟೆಂಬರ್ 2025, 6:49 IST
ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಶಾಸಕ ಡಾ.‌ಶೈಲೇಂದ್ರ ಕೆ. ಬೆಲ್ದಾಳೆ ಅವರು ಗಣೇಶ ಮಹಾಮಂಡಳದ ಪದಾಧಿಕಾರಿಗಳ ಜೊತೆಗೆ ಡಾನ್ಸ್ ಮಾಡಿದರು
ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಶಾಸಕ ಡಾ.‌ಶೈಲೇಂದ್ರ ಕೆ. ಬೆಲ್ದಾಳೆ ಅವರು ಗಣೇಶ ಮಹಾಮಂಡಳದ ಪದಾಧಿಕಾರಿಗಳ ಜೊತೆಗೆ ಡಾನ್ಸ್ ಮಾಡಿದರು   

ಬೀದರ್‌: ನಗರದಲ್ಲಿ ಭಾನುವಾರ ರಾತ್ರಿ ಗಣೇಶನ ಮೂರ್ತಿಗಳ ವಿಸರ್ಜನೆಯ ಭವ್ಯ ಮೆರವಣಿಗೆ ಶ್ರದ್ಧಾ, ಭಕ್ತಿ ಹಾಗೂ ವಿಜೃಂಭಣೆಯ‌ ನಡುವೆ ಆರಂಭಗೊಂಡಿತು.

ನಗರದ ವಿವಿಧ ಗಣೇಶ ಮಂಡಳಿಯವರು ಅಲಂಕರಿಸಿದ ವಾಹನದಲ್ಲಿ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಮೆರವಣಿಗೆ ಮಾಡಿದರು. ಭಗವಾ ಧ್ವಜಗಳನ್ನು ಬೀಸಿದರು. ಗಣಪತಿಗೆ ಜೈಕಾರಗಳನ್ನು ಹಾಕಿದರು. ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರು. ಡಿಜೆ ಸದ್ದಿಗೆ ಭಕ್ತಿಯಿಂದ ಮೈಮರೆತು ಹೆಜ್ಜೆ ಹಾಕಿದರು.

ಸಮಯ ಪರಿಪಾಲನೆ ಮಾಡಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದರೂ ಬೆರಳಣಿಕೆಯ ಮೂರ್ತಿಗಳು ಮಾತ್ರ ಸಂಜೆ ಮೆರವಣಿಗೆ ಆರಂಭಿಸಿದವು. ಅವುಗಳಷ್ಟೇ ರಾತ್ರಿ ಹತ್ತು ಗಂಟೆಗೆ ಬಸವೇಶ್ವರ ವೃತ್ತ ತಲುಪಿದವು. ಜನ ರಸ್ತೆಯ ಎರಡೂ ಬದಿ ಹಾಗೂ ಕಟ್ಟಡಗಳ ಮೇಲೆ ಕುಳಿತುಕೊಂಡು ಮೆರವಣಿಗೆ ವೀಕ್ಷಿಸಿದರು.

ADVERTISEMENT

ಬೀದರ್‌ನಲ್ಲಿ ಭಾನುವಾರ ರಾತ್ರಿ ಗಣೇಶನ ಮೂರ್ತಿಗಳ ವಿಸರ್ಜನೆಯ ಮೆರವಣಿಗೆಯಲ್ಲಿ ಅಪಾರ ಜನ ಪಾಲ್ಗೊಂಡಿದ್ದರು 

ರಾತ್ರಿ 10ಗಂಟೆ ದಾಟಿದರೂ ನಗರದ ಬಹುತೇಕ ಪ್ರಮುಖ ಗಣೇಶನ ಮೂರ್ತಿಗಳು ಬಸವೇಶ್ವರ ವೃತ್ತ ಬಳಿಯೂ ಬರಲಿಲ್ಲ. ಮೆರವಣಿಗೆ ನೋಡಲು ಮಾರ್ಗದುದ್ದಕ್ಕೂ ಜನಜಾತ್ರೆ ಇತ್ತು. ಸಾರ್ವಜನಿಕ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.

ವಿವಿಧ ಬಡಾವಣೆಗಳು ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಗಳನ್ನು ಮಧ್ಯಾಹ್ನದಿಂದ ಸಂಜೆ ತನಕ ಬಡಾವಣೆಗಳಲ್ಲಿಯೇ ಮೆರವಣಿಗೆ ಮಾಡಿದರು. ಬಳಿಕ ಅನ್ನ ದಾಸೋಹ ಮಾಡಿದರು. ಲಕ್ಷ್ಮಿಪೂಜೆಯ ಸಂಭ್ರಮವೂ ಎಲ್ಲೆಡೆ ಮನೆ ಮಾಡಿತು. ಬಂಧು ಬಾಂಧವರು, ಸ್ನೇಹಿತರನ್ನು ಮನೆಗೆ ಕರೆದು, ಸಿಹಿ ಉಣಿಸಿ ಕಳಿಸಿದರು.

ಸಚಿವರಿಂದ ಮೆರವಣಿಗೆಗೆ ಚಾಲನೆ

ಬೀದರ್‌ನ ಓಲ್ಡ್‌ ಸಿಟಿಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಪ್ರಥಮ ಪೂಜೆ ನೆರವೇರಿಸಿದರು. ಆನಂತರ ಗಣೇಶ ಮಹಾಮಂಡಳದ‌ ಪದಾಧಿಕಾರಿಗಳ ಜತೆ ಸಂಗೀತಕ್ಕೆ‌ ಹೆಜ್ಜೆ ಹಾಕಿದರು. ಬಳಿಕ ನಗರದ ಚೌಬಾರದ ಬಾಲ ಗಂಗಾಧರ ತಿಲಕ್‌ ವೇದಿಕೆಯಲ್ಲಿ ಪೂಜೆ ನೆರವೇರಿಸಿ ಮೆರವಣಿಗೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿಘ್ನ ನಿವಾರಕ ಎಲ್ಲರಿಗೂ ಒಳಿತು ಮಾಡಲಿ. ನಾಡಿನಲ್ಲಿ ಸುಭಿಕ್ಷೆ ನೆಲೆಸಲಿ. ಎಲ್ಲರೂ ಶಾಂತಿ ಹಾಗೂ ಸೌಹಾರ್ದದಿಂದ ಬದುಕಲು ಗಣೇಶ ಉತ್ಸವ ಪ್ರೇರಣೆಯಾಗಲಿ ಎಂದರು. ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಜಿಪಂ ಸಿಇಒ ಡಾ. ಗಿರೀಶ್‌ ಬದೋಲೆ ಎಸ್ಪಿ ಪ್ರದೀಪ್‌ ಗುಂಟಿ ಗಣೇಶ ಮಹಾಮಂಡಳದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಗಾದಗಿ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಮುಖಂಡರಾದ ಬಂಡೆಪ್ಪ ಕಾಶೆಂಪುರ್ ರಘುನಾಥರಾವ್ ಮಲ್ಕಾಪುರೆ ಈಶ್ವರ ಸಿಂಗ್ ಠಾಕೂರ್ ನಂದಕಿಶೋರ ವರ್ಮಾ ದೀಪಕ್ ವಾಲಿ ಶಿವಶರಣಪ್ಪ ವಾಲಿ ಡಾ. ರಜನೀಶ ವಾಲಿ ಸೋಮಶೇಖರ ಪಾಟೀಲ ಗಾದಗಿ ಶಶಿಧರ ಹೊಸಳ್ಳಿ ಚಂದ್ರಶೇಖರ ಗಾದಾ ಸೂರ್ಯಕಾಂತ ಶೆಟಕಾರ್ ಮತ್ತಿತರರು ಇದ್ದರು.

ಬೀದರ್‌ನಲ್ಲಿ ಭಾನುವಾರ ರಾತ್ರಿ ಗಣೇಶನ ಮೂರ್ತಿಗಳ ವಿಸರ್ಜನೆಯ ಮೆರವಣಿಗೆಯಲ್ಲಿ ಅಪಾರ ಜನ ಪಾಲ್ಗೊಂಡಿದ್ದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.