ಬೀದರ್: ನನೆಗುದಿಗೆ ಬಿದ್ದಿದ್ದ ನಗರದ ಹಳ್ಳದಕೇರಿ ಕೆರೆಯ ಮಗ್ಗುಲಲ್ಲಿರುವ ಗಣೇಶ ವಿಸರ್ಜನೆಯ ಹೊಂಡಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.
ಕಾಮಗಾರಿ ಕೊನೆಯ ಹಂತದಲ್ಲಿದ್ದು, ಗಣೇಶನ ಮೂರ್ತಿಗಳ ವಿಸರ್ಜನೆಗೂ ಮುನ್ನ ಸಂಪೂರ್ಣ ಕೆಲಸ ಮುಗಿಯಲಿದೆ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
100X100 ಅಡಿ ಸುತ್ತಳತೆಯ ಹೊಂಡ ನೆಲದಡಿಯಿಂದ 22 ಅಡಿ ಎತ್ತರದಲ್ಲಿದೆ. ನಾಲ್ಕೂ ಕಡೆಗಳಲ್ಲಿ ಸಂಪೂರ್ಣವಾಗಿ ಕಬ್ಬಿಣ, ಸಿಮೆಂಟ್, ಕಾಂಕ್ರೀಟ್ ಬಳಸಿ ಗೋಡೆ ನಿರ್ಮಿಸಲಾಗಿದೆ. ಈಗಾಗಲೇ ಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಯಾರಿಗೂ ಅಪಾಯ ಆಗದಂತೆ ಹೊಂಡದ ಸುತ್ತ ಐದು ಅಡಿ ಎತ್ತರದ ವರೆಗೆ ಲೋಹದ ಜಾಲರಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕೆಲಸವೂ ಭರದಿಂದ ನಡೆಯುತ್ತಿದೆ.
ನಗರದ ಗುಂಪಾ ರಿಂಗ್‌ರೋಡ್‌ನಿಂದ ಹೈದರಾಬಾದ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಿಂದ ಹೊಂಡದವರೆಗೆ ಸಿಸಿ ರಸ್ತೆ ನಿರ್ಮಿಸಲು ತಯಾರಿ ನಡೆದಿದೆ. 90 ಮೀಟರ್ ಉದ್ದ, 7 ಮೀಟರ್ ಅಗಲದ ಸಿಸಿ ರಸ್ತೆ, ಅದರ ಎರಡೂ ಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣವಾಗಲಿದೆ.
ಕಾಮಗಾರಿ ಸಂಪೂರ್ಣ ಪೂರ್ಣಗೊಂಡ ಹೊಂಡದಲ್ಲಿ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತದೆ. ಕ್ರೇನ್‌ಗಳ ಸಹಾಯದಿಂದ ಗಣಪತಿ ಮೂರ್ತಿಗಳನ್ನು ವಿಸರ್ಜಿಸಲು ಯೋಜಿಸಲಾಗಿದೆ.
ಹಳ್ಳದಕೇರಿ ಕೆರೆಯ ಸಮೀಪ ನಿರ್ಮಿತಿ ಕೇಂದ್ರದಿಂದ ಗಣೇಶನ ಮೂರ್ತಿಗಳ ವಿಸರ್ಜನೆ ಹೊಂಡ ನಿರ್ಮಿಸಲಾಗುತ್ತಿದೆ. ಗಣೇಶ ಉತ್ಸವಕ್ಕೂ ಮೊದಲೇ ಕಾಮಗಾರಿ ಮುಗಿಯಲಿದೆ. ಕೆಲಸ ಪೂರ್ಣಗೊಂಡ ನಂತರ ನಗರಸಭೆಗೆ ಹಸ್ತಾಂತರಿಸಲಾಗುವುದುಷಾ ಉಮರ್ ಖಾದ್ರಿ ಯೋಜನಾ ವ್ಯವಸ್ಥಾಪಕರು ನಿರ್ಮಿತಿ ಕೇಂದ್ರ
‘ಹೊರರಾಜ್ಯದ ಡಿಜೆಗಳಿಗಿಲ್ಲ ಅವಕಾಶ’
‘ಕರ್ಕಶ ಶಬ್ದ ಉಂಟು ಮಾಡುವ ಸೌಂಡ್ ಸಿಸ್ಟಂ ಹಾಗೂ ಡಿಜೆಗಳಿಗೆ ಅವಕಾಶ ಕಲ್ಪಿಸುವುದಿಲ್ಲ. ಜಿಲ್ಲೆಯ ಹೊರವಲಯದಲ್ಲೇ ಅವುಗಳನ್ನು ನಿಲ್ಲಿಸಲಾಗುವುದು’ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ. ಬೀದರ್ ಜಿಲ್ಲೆಯ ಕೆಲವು ಗಣೇಶ ಮಂಡಳಿಯವರು ಅತಿಹೆಚ್ಚು ವೆಚ್ಚ ಮಾಡಿ ಕರ್ಕಶ ಶಬ್ದ ಮಾಡುವ ಸೌಂಡ್ ಸಿಸ್ಟಂಗಳನ್ನು ಹೊರ ರಾಜ್ಯಗಳಿಂದ ಬುಕ್ ಮಾಡಿ ತರುತ್ತಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಅವುಗಳನ್ನು ಜಿಲ್ಲೆಯ ಹೊರ ವಲಯದಲ್ಲಿ ನಿಲ್ಲಿಸಲಾಗುವುದು. ಗಣೇಶ ಮಂಡಳಿಯವರು ಹಣ ಖರ್ಚು ಮಾಡಿ ನಷ್ಟ ಮಾಡಿಕೊಳ್ಳಬಾರದು. ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ.
ಹೊಂಡವೇಕೆ ನಿರ್ಮಾಣ?
ಪ್ರತಿ ವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ ಅಸಂಖ್ಯ ಗಣಪನ ಮೂರ್ತಿಗಳನ್ನು ಕೆರೆ ಕಟ್ಟೆಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ. ರಾಸಾಯನಿಕ ಮಿಶ್ರಿತ ಮೂರ್ತಿಗಳಿಂದ ನೀರು ಕಲುಷಿತವಾಗಿ ಜನ ಮತ್ತು ಜಾನುವಾರುಗಳ ಮೇಲೆ ದುಷ್ಪರಿಣಾಮವಾಗುತ್ತಿದೆ. ನಾನಾ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು 2022–23ನೇ ಸಾಲಿನಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷ ಬಾಬುವಾಲಿ ಅವರು ವಿಶೇಷ ಮುತುವರ್ಜಿ ವಹಿಸಿ ಎಲ್ಲರ ಒಪ್ಪಿಗೆ ಪಡೆದು ₹2 ಕೋಟಿ ಅನುದಾನ ಮೀಸಲಿಟ್ಟಿದ್ದರು. ಈಗ ಅದೇ ಅನುದಾನದ ಅಡಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು ನಿರ್ಮಿತಿ ಕೇಂದ್ರಕ್ಕೆ ಇದರ ಹೊಣೆ ವಹಿಸಲಾಗಿದೆ.
‘ಉದ್ಘಾಟನೆಗೆ ಸಚಿವರ ಒಪ್ಪಿಗೆ’
‘ನಾನು ಬಿಡಿಎ ಅಧ್ಯಕ್ಷನಿದ್ದಾಗ ₹2 ಕೋಟಿ ಮೀಸಲಿಟ್ಟಿದ್ದೆ. ಈಗ ಗಣೇಶ ವಿಸರ್ಜನೆ ಹೊಂಡ ಕಾಮಗಾರಿ ಮುಗಿಯುತ್ತಿರುವುದು ಸಂತಸದ ವಿಷಯ. ಈ ಸಂಬಂಧ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಸ್ಥಳೀಯ ಶಾಸಕರೂ ಆದ ಪೌರಾಡಳಿತ ಸಚಿವ ರಹೀಂ ಖಾನ್ ಅವರೊಂದಿಗೆ ಚರ್ಚಿಸಲಾಗಿದೆ. ಈ ಸಲ ಗಣೇಶನ ಮೂರ್ತಿಗಳ ವಿಸರ್ಜನೆಯೊಂದಿಗೆ ಇದನ್ನು ಉದ್ಘಾಟಿಸಬೇಕೆಂದು ಕೋರಲಾಗಿದ್ದು ಇಬ್ಬರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಗಣೇಶ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.