ADVERTISEMENT

ಗಣೇಶಮೂರ್ತಿ ವಿಸರ್ಜನೆ: ಅದ್ದೂರಿ ಮೆರವಣಿಗೆ; ಕುಣಿದು ಕುಪ್ಪಳಿಸಿದ ಯುವಕರು

ಗಣೇಶ ಮಂಡಳಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 6:47 IST
Last Updated 7 ಸೆಪ್ಟೆಂಬರ್ 2025, 6:47 IST
ಭಾಲ್ಕಿ ಪಟ್ಟಣದಲ್ಲಿ ಶನಿವಾರ ಗಣೇಶ ಮೂರ್ತಿ ವಿಸರ್ಜನೆ ನಿಮಿತ್ತ ನಡೆದ ಮೆರವಣಿಗೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿದರು
ಭಾಲ್ಕಿ ಪಟ್ಟಣದಲ್ಲಿ ಶನಿವಾರ ಗಣೇಶ ಮೂರ್ತಿ ವಿಸರ್ಜನೆ ನಿಮಿತ್ತ ನಡೆದ ಮೆರವಣಿಗೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿದರು   

ಭಾಲ್ಕಿ: ಹಳೆ ಪಟ್ಟಣ ಸೇರಿದಂತೆ ವಿವಿಧೆಡೆ ಗಣೇಶ ಮಂಡಳು ಪ್ರತಿಷ್ಠಾಪಿಸಲಾಗಿದ್ದ ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ಶನಿವಾರ ಸಡಗರ, ಸಂಭ್ರಮದೊಂದಿಗೆ ವಿಸರ್ಜಿಸಲಾಯಿತು.

ಗಣೇಶ ಮೂರ್ತಿಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಇರಿಸಿಕೊಂಡು ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಮಕ್ಕಳು, ಯುವಕರು, ಹಿರಿಯರು ಡಿಜೆ ಸೌಂಡ್‌ನಲ್ಲಿ ಮೊಳಗಿದ ಭಕ್ತಿಗೀತೆಗಳಿಗೆ, ಹಿಂದಿ ಚಲನಚಿತ್ರ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಪಟ್ಟಣದ ಹೊರವಲಯದ ನೀರು ಶುದ್ಧೀಕರಣ ಘಟಕದ ಬಳಿ ನಿರ್ಮಿಸಲಾಗಿರುವ ಕೃತಕ ಹೊಂಡದಲ್ಲಿ ಒಂದಾದ ಮೇಲೊಂದರಂತೆ ಗಣೇಶ ಮೂರ್ತಿಗಳನ್ನು ಕ್ರೇನ್ ಸಹಾಯದಿಂದ ವಿಸರ್ಜಿಸಲಾಯಿತು.

ADVERTISEMENT

ಪಟ್ಟಣದಲ್ಲಿ ಒಟ್ಟು 40 ಗಣೇಶ ಮೂರ್ತಿಗಳನ್ನು ಆಗಸ್ಟ್ 27ರಂದು ಪ್ರತಿಷ್ಠಾಪಿಸಲಾಗಿತ್ತು. ಕೆಲ ಗಣೇಶ ಮಂಡಳಿಯವರು 5ನೇ ದಿನಕ್ಕೆ, ಇನ್ನೂ ಕೆಲವರು 9ನೇ ದಿನಕ್ಕೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದ್ದರು. ಆದರೆ, ಶನಿವಾರ ಸುಮಾರು 25ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿವಿಧ ಮಂಡಳಿಯವರು ವಿಸರ್ಜಿಸಿದರು ಎಂದು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ ತಿಳಿಸಿದರು.

ಪ್ರತಿನಿತ್ಯ ಎಲ್ಲ ಗಣೇಶ ಮಂಡಳಿ ವತಿಯಿಂದ ಪೂಜೆ, ಆರತಿ ಜರುಗಿದವು. ಶುಕ್ರವಾರ ಬಹುತೇಕ ಗಣೇಶ ಮಂಡಳಿಗಳ ವತಿಯಿಂದ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಶನಿವಾರವೂ ಕೂಡ ಕೆಲ ಗಣೇಶ ಮಂಡಳಿಯವರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.

ವ್ಯಾಪಕ ಪೊಲೀಸ್ ಬಂದೋಬಸ್ತ್

ಗಣೇಶ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಗಣೇಶ ವಿಸರ್ಜನೆ ಶಾಂತಿಯುತವಾಗಿ ನಡೆಯಿತು ಎಂದು ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.