ADVERTISEMENT

ಗೀತಾ, ಲಕ್ಷ್ಮಣರಾವ್ ವಿಶ್ವಾಸಮತಕ್ಕೆ ಸೋಲು

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಆದೇಶ

ಚಂದ್ರಕಾಂತ ಮಸಾನಿ
Published 2 ಡಿಸೆಂಬರ್ 2020, 15:37 IST
Last Updated 2 ಡಿಸೆಂಬರ್ 2020, 15:37 IST
ಬೀದರ್‌ನಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ –ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ಒಗ್ಗೂಡಿ ಬಂದಿದ್ದ ಕಾಂಗ್ರೆಸ್ ಬಂಡಾಯ, ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು
ಬೀದರ್‌ನಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ –ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ಒಗ್ಗೂಡಿ ಬಂದಿದ್ದ ಕಾಂಗ್ರೆಸ್ ಬಂಡಾಯ, ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು   

ಬೀದರ್: ಕಲಬುರ್ಗಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಕರೆದಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಗೆ ತಡೆಯಾಜ್ಞೆ ನೀಡುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಹಾಗೂ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ ಪರವಾಗಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕಲಬುರ್ಗಿ ಹೈಕೋರ್ಟ್‌ ವಜಾಗೊಳಿಸಿದೆ. ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಿದೆ.

ಜಿಲ್ಲಾ ಪಂಚಾಯಿತ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ವಿಶ್ವಾಸ ಮತ ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ತೆರವಾದ ಹುದ್ದೆಗಳಿಗೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯದರ್ಶಿಗೆ ಪತ್ರ ಕಳಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೂ ಪತ್ರದ ಪ್ರತಿಯನ್ನು ಕಳಿಸಿಕೊಟ್ಟಿದ್ದಾರೆ.

ಪ್ರಾದೇಶಿಕ ಆಯುಕ್ತ ಎನ್‌.ವಿ. ಗುರುಪ್ರಸಾದ ಸಮ್ಮುಖದಲ್ಲಿ ಅಕ್ಟೋಬರ್‌ 23ರಂದು ಜಿಲ್ಲಾ ಪಂಚಾಯಿತಿ ಸದಸ್ಯರ ವಿಶೇಷ ಸಭೆ ಕರೆಯಲಾಗಿತ್ತು. ಹಾಲಿ ಅಧ್ಯಕ್ಷೆ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ ಕಾರಣ ಅವರ ವಿರುದ್ಧದ ಅವಿಶ್ವಾಸ ಸಭೆಯ ನಡುವಳಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನವೆಂಬರ್ 30 ರಂದು ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.

ADVERTISEMENT

ಅವಿಶ್ವಾಸ ಸಭೆಯಲ್ಲಿ ಒಟ್ಟು 34 ಸದಸ್ಯರ ಪೈಕಿ 24 ಸದಸ್ಯರು ಹಾಜರಾಗಿದ್ದರು. 23 ಸದಸ್ಯರು ಅಧ್ಯಕ್ಷೆ ವಿರುದ್ಧ
ಮತ ಚಲಾಯಿಸಿದ್ದರು. ತಟಸ್ಥವಾಗಿ ಒಂದು ಮತವೂ ಚಲಾವಣೆಯಾಗಿಲ್ಲ. ಹೀಗಾಗಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಅಂಗೀಕರಿಸಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ತೆರವಾಗಿದೆ ಎಂದು ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.

ಗೋಪ್ಯ ಮತದಾನ ನಡೆದ ಕಾರಣ ಯಾವ ಸದಸ್ಯರು ಯಾರ ಪರವಾಗಿ ಅಥವಾ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎನ್ನುವುದು ಗೊತ್ತಾಗಲಿಲ್ಲ. ಅವಿಶ್ವಾಸ ಮಂಡನೆ ಸಭೆಯಿಂದ ಹೊರಗೆ ಬಂದ ಸದಸ್ಯರು ಹಾಲಿ ಅಧ್ಯಕ್ಷೆ–ಉಪಾಧ್ಯಕ್ಷರ ವಿರುದ್ಧ ಒಮ್ಮತದಿಂದ ಮತ ಚಲಾಯಿಸಿದ್ದೇವೆ ಎಂದು ಕಾಂಗ್ರೆಸ್‌ನ ವಿಜಯಕುಮಾರ ಪಾಟೀಲ ಗಾದಗಿ ಹಾಗೂ ಭಾರತಬಾಯಿ ಶೇರಿಕಾರ ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

ಬಹುಮತ ಸಾಬೀತು ಪಡಿಸಲು 17 ಸದಸ್ಯರ ಬೆಂಬಲ ಬೇಕಿತ್ತು. ಬಿಜೆಪಿಯ 11 ಹಾಗೂ ಜೆಡಿಎಸ್‌ನ ಮೂವರು ಸದಸ್ಯರು ಗೀತಾ ಚಿದ್ರಿ ವಿರುದ್ಧ ಬಂಡಾಯ ಎದ್ದಿದ್ದ ಕಾಂಗ್ರೆಸ್‌ ಸದಸ್ಯರನ್ನು ಬೆಂಬಲಿಸಿದ್ದರು.

ಕಾಂಗ್ರೆಸ್‌ ಬಂಡಾಯ ಸದಸ್ಯರೇ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ನೇತೃತ್ವ ವಹಿಸಿಕೊಂಡಿದ್ದರು. ಬೀದರ್ ಜಿಲ್ಲಾ ಪಂಚಾಯಿತಿ 34 ಸಂಖ್ಯಾ ಬಲ ಹೊಂದಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಸದಸ್ಯರ ಸಂಖ್ಯೆ 19 ಇದ್ದರೂ ಒಂದೂವರೆ ವರ್ಷದ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಮೂವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ನಂತರ ವಿಜಯಕುಮಾರ ಪಾಟೀಲ ಗಾದಗಿ ಹಾಗೂ ಅಫ್ರೋಜ್‌ ಖಾನ್‌ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಯಿತು. ‌

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಆರಂಭದಿಂದಲೂ ಪೈಪೋಟಿ ನಡೆದಿದೆ. ಹಗ್ಗ ಜಗ್ಗಾಟದಲ್ಲಿ ಭಾರತಬಾಯಿ ಶೇರಿಕಾರ ಮೊದಲ ಅವಕಾಶ ದೊರಕಿತ್ತು. ಕಾಂಗ್ರೆಸ್‌ ವರಿಷ್ಠರು ನಡೆಸಿದ್ದ ಸಂಧಾನದ ಪ್ರಕಾರ ಎರಡನೇ ಅವಧಿಗೆ ಗೀತಾ ಚಿದ್ರಿ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು.

ಕರಾರು ಅವಧಿ ಮುಗಿದ ಮೇಲೆ ಅಧ್ಯಕ್ಷೆ ಭಾರತಬಾಯಿ ಹಾಗೂ ಉಪಾಧ್ಯಕ್ಷ ಪ್ರಕಾಶ ಪಾಟೀಲ ಸ್ಥಾನ ಬಿಟ್ಟುಕೊಡಲು ಹಿಂದೇಟು ಹಾಕಿದ್ದರು. ಹೀಗಾಗಿ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಅತೃಪ್ತ ಸದಸ್ಯರ ಮನವಿ ಮೇರೆಗೆ ಅವರಿಗೆ ವಿಶ್ವಾಸಮತ ಸಾಬೀತು ಪಡಿಸಲು ಸೂಚಿಸಲಾಗಿತ್ತು. ಭಾರತಬಾಯಿ ಹಾಗೂ ಪ್ರಕಾಶ ಪಾಟೀಲ ಬಹುಮತ ಸಾಬೀತು ಪಡಿಸಲು ವಿಫಲರಾಗಿದ್ದರು. ನಂತರ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಭಾರತಬಾಯಿ, ಪ್ರಕಾಶ ಪಾಟೀಲ ಹಾಗೂ ಪ್ರಿಯಾ ಠಾಕೂರ್‌ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿತ್ತು. ನಂತರ ಗೀತಾ ಚಿದ್ರಿ ಅವರು ಬಿಜೆಪಿ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಬಿಜೆಪಿ ಸದಸ್ಯರು ಕಾಂಗ್ರೆಸ್‌ ಸದಸ್ಯರ ಒಡಕನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಧ್ಯಕ್ಷ– ಉ‍ಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು ತೆರೆಮರೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

‘ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷರ ಆಯ್ಕೆ ವಿಷಯದಲ್ಲಿ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದ್ದಾರೆ.

ದ್ವಿಸದಸ್ಯ ಪೀಠಕ್ಕೆ ಅರ್ಜಿ: ನಾಳೆ ವಿಚಾರಣೆ

ಬೀದರ್‌: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಅವಧಿ ನಿಗದಿ ವಿಷಯದಲ್ಲಿ ಸರ್ಕಾರದ ಆದೇಶದಲ್ಲೇ ಗೊಂದಲ ಇರುವ ಕಾರಣ ಜಿಲ್ಲಾ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷೆ ಗೀತಾ ಚಿದ್ರಿ ಕಲಬುರ್ಗಿ ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.

30 ತಿಂಗಳ ಅವಧಿ ಮುಗಿಯುವ ಮೊದಲೇ ಅಧ್ಯಕ್ಷರ ಚುನಾವಣೆ ನಡೆಸುವ ಸರ್ಕಾರದ ಆದೇಶ ಗೊಂದಲದಿಂದ ಕೂಡಿದೆ. ಮೊದಲ ಅವಧಿಯ ಅಧ್ಯಕ್ಷರು 30 ತಿಂಗಳ ಅವಧಿ ಪೂರ್ಣಗೊಳಿಸಿದ್ದಾರೆ. ಎರಡನೇ ಅವಧಿಯ ಅಧ್ಯಕ್ಷರಿಗೂ ಅವಕಾಶ ಕಲ್ಪಿಸಿಕೊಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಡಿ.2ರಂದು ಅರ್ಜಿ ದಾಖಲಿಸಲಾಗಿದೆ. ಪೀಠವು ಡಿಸೆಂಬರ್ 4ರಂದು ಅರ್ಜಿ ವಿಚಾರಣೆ ನಡೆಸಲಿದೆ ಎಂದು ಗೀತಾ ಚಿದ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.