ADVERTISEMENT

ವಿಶ್ವ ಜಾನಪದ ಸಮ್ಮೇಳನಕ್ಕೆ ₹5 ಕೋಟಿ ಕೊಡಿ: ಕೆ.ಸತ್ಯಮೂರ್ತಿ

ಜಿಲ್ಲಾ ಮಟ್ಟದ ದ್ವಿತೀಯ ಜಾನಪದ ಸಮ್ಮೇಳನದಲ್ಲಿ ಆರು ನಿರ್ಣಯ; ಕಲಾವಿದರ ಮಾಸಾಶನ ₹4 ಸಾವಿರಕ್ಕೆ ಹೆಚ್ಚಿಸಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 1:32 IST
Last Updated 9 ಫೆಬ್ರುವರಿ 2021, 1:32 IST
ಬೀದರ್‌ನಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಜಾನಪದ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ನಾಟ್ಯಶ್ರೀ ನೃತ್ಯಾಲಯದ ವಿದ್ಯಾರ್ಥಿಗಳು ಜಾನಪದ ನೃತ್ಯ ಪ್ರದರ್ಶಿಸಿದರು
ಬೀದರ್‌ನಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಜಾನಪದ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ನಾಟ್ಯಶ್ರೀ ನೃತ್ಯಾಲಯದ ವಿದ್ಯಾರ್ಥಿಗಳು ಜಾನಪದ ನೃತ್ಯ ಪ್ರದರ್ಶಿಸಿದರು   

ಬೀದರ್: ಇಲ್ಲಿಯ ಕರ್ನಾಟಕ ಸಾಹಿತ್ಯ ಸಭಾಂಗಣದಲ್ಲಿ ಭಾನುವಾರ ನಡೆದ ಜಿಲ್ಲಾ ಜನಪದ ಸಾಹಿತ್ಯ ಉತ್ಸವ ಹಾಗೂ ಜಿಲ್ಲಾ ದ್ವಿತೀಯ ಜಾನಪದ ಸಮ್ಮೇಳನದಲ್ಲಿ ಆರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಜಾನಪದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ರಾಯಭಾರಿಯಾಗಿರುವ ಬೀದರ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಾನಪದ ಭವನಕ್ಕೆ ಸ್ಥಳಾವಕಾಶದ ಜತೆಗೆ ಅನುದಾನ ಮಂಜೂರು ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ರಾಣಿ ಸತ್ಯಮೂರ್ತಿ ನೇತೃತ್ವದಲ್ಲಿ ನಡೆದ ಸಮ್ಮೇಳನದಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯವನ್ನು ಕೆ.ಸತ್ಯಮೂರ್ತಿ ಮಂಡಿಸಿದರೆ, ಭಾಗ್ಯಶ್ರೀ ಗುರುಮೂರ್ತಿ ಅನುಮೋದಿಸಿದರು.

ಬೀದರ್‌ನಲ್ಲಿ ಆಯೋಜಿಸಲು ಉದ್ದೇಶಿಸಿರುವ ವಿಶ್ವ ಜಾನಪದ ಸಮ್ಮೇಳನಕ್ಕೆ ರಾಜ್ಯ ಸರ್ಕಾರ ₹5 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎನ್ನುವ ನಿರ್ಣಯ ಅಂಗೀಕರಿಸಲಾಯಿತು. ಇದಕ್ಕೆ ಅಕ್ಕಮಹಾದೇವಿ ಮಹಿಳಾ ಬ್ಯಾಂಕ್ ಅಧ್ಯಕ್ಷೆ ಡಾ.ನೀಲಗಂಗಾ ಹೆಬ್ಬಾಳೆ ಸೂಚಿಸಿದರೆ, ಸರಸ್ವತಿ ಶಿಕ್ಷಣ ಸಮಿತಿಯ ಅಧ್ಯಕ್ಷ ಪ್ರೊ.ಎಸ್.ಬಿ ಬಿರಾದಾರ ಅನುಮೋದಿಸಿದರು.

ADVERTISEMENT

ವಿವಿಧ ವಸತಿ ಯೋಜನೆಗಳಾದ ರಾಜೀವ್ ಗಾಂಧಿ, ಅಂಬೇಡ್ಕರ್, ಬಸವ ವಸತಿ ಯೋಜನೆಗಳಲ್ಲಿ ಶೇಕಡ 10 ನಿವೇಶನಗಳನ್ನು ಜಾನಪದ ಕಲಾವಿದರಿಗೆ ಮಂಜೂರು ಮಾಡಬೇಕು ಎನ್ನುವ ಗೊತ್ತುವಳಿಯನ್ನು ಸಾಹಿತಿ ಎಸ್.ಎಂ.ಜನವಾಡಕರ್ ಮಂಡಿಸಿದರೆ, ಪೂಣ್ಯವತಿ ವಿಸಾಜಿ ಅನುಮೋದಿಸಿದರು.

ರಾಜ್ಯ ಸರ್ಕಾರ ಜಾನಪದ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ₹2 ಸಾವಿರದಿಂದ ₹4 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಜಾನಪದ ಪರಿಷತ್ ಮಹಿಳಾ ವಿಭಾಗದ ಜಿಲ್ಲಾ ಘಟಜದ ಅಧ್ಯಕ್ಷೆ ಮಲ್ಲಮ್ಮ ಸಂತಾಜಿ ಸೂಚಿಸಿದರೆ, ಸಹಾರ್ದಾ ರೂಡ್ ಸೆಟ್ ಸಂಸ್ಥೆಯ ನಿರ್ದೇಶಕ ಸುಬ್ರಮಣ್ಯ ಪ್ರಭು ಅನುಮೋದಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಜಾನಪದ ಸಂಘ, ಸಂಸ್ಥೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ವಿಶೇಷ ಅನುದಾನ ನೀಡುವಂತೆ ಸಮ್ಮೇಳನದ ಮುಖಾಂತರ ಮಂಡಳಿಗೆ ಆಗ್ರಹಿಸಲಾಯಿತು. ಇದಕ್ಕೆ ಬಸವರಾಜ ಮೂಲಗೆ ಸೂಚಿಸಿದರೆ, ಪದ್ಮಾ ಶೆಟಕಾರ ಅನುಮೋದನೆ ನೀಡಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದ್ರಕ್ಕೆ ಈಗಾಗಲೇ ಬೀದರ್‌ನಲ್ಲಿ ನಿವೇಶನ ದೊರೆತಿದೆ. ಇದಕ್ಕೆ ಸರ್ಕಾರ ₹5 ಕೋಟಿ ಅನುದಾನ ಕೊಡಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಜಾನಪದ ಪರಿಷತ್ ನಗರ ಘಟಕದ ಸದಸ್ಯ ಧನರಾಜ ಅಣಕಲೆ ಪ್ರಸ್ತಾಪಿಸಿದರು. ಬಿ.ವಿ. ಭೂಮರೆಡ್ಡಿ ಕಾಲೇಜಿನ ಉಪನ್ಯಾಸಕಿ ಡಾ.ಮಹಾನಂದಾ ಮಡಕಿ ಬೆಂಬಲ ಸೂಚಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ನಿರ್ಣಯ ಮಂಡಿಸಿದರು.

ಸಾಹಿತಿಗಳಾದ ಎಂ.ಜಿ ದೇಶಪಾಂಡೆ, ಚಂದ್ರಪ್ಪ ಹೆಬ್ಬಾಳಕರ್, ಮಾನಶೆಟ್ಟಿ ಬೆಳಕೇರಿ, ಕರ್ನಾಟಕ ಸಾಹಿತ್ಯ ಸಂಘ ಟ್ರಸ್ಟ್ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ, ಕಾರ್ಯದರ್ಶಿ ಪ್ರೊ.ಎಸ್.ಬಿ ಬಿರಾದಾರ, ಅಖಿಲ ಭಾರತಿಯ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ, ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಲುಂಬಿಣಿ ಗೌತಮ, ಶಿವಯ್ಯ ಸ್ವಾಮಿ ಉಪಸ್ಥಿತರಿದ್ದರು.

ಜಾನಪದ ಪರಿಷತ್ ದಕ್ಷಿಣ ವಿಭಾಗದ ಅಧ್ಯಕ್ಷ ರಾಜಕುಮಾರ ಮಡಕಿ ಸ್ವಾಗತಿಸಿದರು. ಸುನೀತಾ ಬಿಕ್ಲೆ ನಿರೂಪಿಸಿದರು. ಚನ್ನಬಸವ ಕಾಮಣ್ಣ ವಂದಿಸಿದರು.

‘ಜಾನಪದ ಸಾಹಿತ್ಯ ಉಳಿಸಿ’
ಬೀದರ್: ‘
ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಯಿಂದ ವಿಶ್ವ ಜಾನಪದ ಸಾಹಿತ್ಯದ ಉಗಮವಾಗಿದೆ. ಅಳಿವಿನಂಚಿನಲ್ಲಿರುವ ಜಾನಪದ ಸಾಹಿತ್ಯ ಉಳಿಸುವ ಕಾರ್ಯ ನಡೆಯಬೇಕು’ ಎಂದು ಯುವ ಸಾಹಿತಿ ನಾಗಯ್ಯ ಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾ ಮಟ್ಟದ ದ್ವಿತೀಯ ಜಾನಪದ ಸಮ್ಮೇಳನದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಜಾನಪದ ಸಾಹಿತ್ಯದಲ್ಲಿ ವಿಜ್ಞಾನ, ಅಧ್ಯಾತ್ಮ ಹಾಗೂ ನೈತಿಕ ಮೌಲ್ಯಗಳ ಪ್ರತಿಪಾದನೆ ಕಾಣಬಹುದಾಗಿದೆ. ಇಂದಿನ ಮಕ್ಕಳಿಗೆ ಬಾಲ್ಯದಿಂದಲೇ ಜಾನಪದದ ಮಹತ್ವ ತಿಳಿಸಿಕೊಡುವ ಕೆಲಸವನ್ನು ಪಾಲಕರು ಮಾಡಬೇಕು’ ಎಂದರು ಹೇಳಿದರು.

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರಾಧ್ಯಾಪಕಿ ಡಾ.ಶ್ರೇಯ ಮಹೇಂದ್ರಕರ್ ಮಾತನಾಡಿ, ‘ಜನಪದದಲ್ಲಿ ಪುರಾಣ. ಗಾದೆ, ಒಗಟು, ಒಡಪು ಹಾಗೂ ಕಲೆ ಇದೆ’ ಎಂದರು.

ಸಾಹಿತಿ ಬಸವರಾಜ ಮೂಲಗೆ, ಶ್ರೀಕಾಂತ ಬಿರಾದಾರ, ಮಹಿಳಾ ಸಾಹಿತಿ ಶೈಲಜಾ ಹುಡಗೆ, ಸ್ವರೂಪಾ ಪಾಟೀಲ ಮಾತನಾಡಿದರು.

ಕವಿಗಳಾದ ರಮೇಶ ಸಲಗರ, ಲಕ್ಷ್ಮಣರಾವ್ ಕಾಂಚೆ, ಶಿವರಾಜ ಮೇತ್ರೆ, ಸಂಗಮೇಶ್ವರ ಮುರ್ಕೆ, ನಾಗಮ್ಮ ಭಂಗರಗಿ, ಓಂಕಾರ ಪಾಟೀಲ, ಅರವಿಂದ ಕುಲಕರ್ಣಿ, ರವಿದಾಸ ಕಾಂಬಳೆ, ಭಕ್ತಿ ಪಾಟೀಲ, ಪ್ರಾರ್ಥನಾ ಮೊದಲಾದವರು ಸ್ವರಚಿತ ಕವನ ವಾಚನ ಮಾಡಿದರು.

ಮಲ್ಲಮ್ಮ ಸಂತಾಜಿ ಸ್ವಾಗತಿಸಿದರು. ಮೀರಾ ಖೇಣಿ ನಿರೂಪಿಸಿದರು. ಗಂಗಮ್ಮ ಫುಲೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.