ADVERTISEMENT

ಪರಿಶ್ರಮದಿಂದ ಗುರಿ ಸಾಧನೆ ಸಾಧ್ಯ: ಎಸ್.ಪಿ ಡೆಕ್ಕಾ ಕಿಶೋರಬಾಬು

ಕಾರ್ಯಾಗಾರದಲ್ಲಿ ಎಸ್.ಪಿ ಡೆಕ್ಕಾ ಕಿಶೋರಬಾಬು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 13:59 IST
Last Updated 7 ಫೆಬ್ರುವರಿ 2022, 13:59 IST
ಬೀದರ್‌ನ ಐ.ಎಂ.ಎ ಹಾಲ್‍ನಲ್ಲಿ ಶಿಕ್ಷಕರ ಸಿಇಟಿ, ಟಿಇಟಿ ಕುರಿತು ಸ್ಪರ್ಧಾ ಸಂಕಲ್ಪ ಅಕಾಡೆಮಿ ಹಮ್ಮಿಕೊಂಡಿದ್ದ ಉಚಿತ ಕಾರ್ಯಾಗಾರದಲ್ಲಿ ಅಕಾಡೆಮಿಯ ಮುಖ್ಯಸ್ಥ ನಾಗಯ್ಯ ಸ್ವಾಮಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು ಅವರಿಗೆ ಸ್ಮರಣಿಕೆಯಾಗಿ ಕೃತಿ ನೀಡಿದರು
ಬೀದರ್‌ನ ಐ.ಎಂ.ಎ ಹಾಲ್‍ನಲ್ಲಿ ಶಿಕ್ಷಕರ ಸಿಇಟಿ, ಟಿಇಟಿ ಕುರಿತು ಸ್ಪರ್ಧಾ ಸಂಕಲ್ಪ ಅಕಾಡೆಮಿ ಹಮ್ಮಿಕೊಂಡಿದ್ದ ಉಚಿತ ಕಾರ್ಯಾಗಾರದಲ್ಲಿ ಅಕಾಡೆಮಿಯ ಮುಖ್ಯಸ್ಥ ನಾಗಯ್ಯ ಸ್ವಾಮಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು ಅವರಿಗೆ ಸ್ಮರಣಿಕೆಯಾಗಿ ಕೃತಿ ನೀಡಿದರು   

ಬೀದರ್: ಪರಿಶ್ರಮದಿಂದ ಮಾತ್ರ ಜೀವನದ ಗುರಿ ತಲುಪಲು ಸಾಧ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು ಹೇಳಿದರು.

ಸ್ಪರ್ಧಾ ಸಂಕಲ್ಪ ಅಕಾಡೆಮಿ ವತಿಯಿಂದ ಇಲ್ಲಿಯ ಕೆ.ಇ.ಬಿ ರಸ್ತೆಯಲ್ಲಿ ಇರುವ ಐ.ಎಂ.ಎ ಹಾಲ್‍ನಲ್ಲಿ ಆಯೋಜಿಸಿದ್ದ ಶಿಕ್ಷಕರ ಸಿಇಟಿ, ಟಿಇಟಿ ಕುರಿತ ಉಚಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಪಠ್ಯಕ್ರಮದ ಜತೆಗೆ ನಿತ್ಯ ದಿನಪತ್ರಿಕೆಗಳನ್ನು ಓದಬೇಕು. ಪ್ರಚಲಿತ ವಿದ್ಯಮಾನಗಳನ್ನೂ ಅರಿಯಬೇಕು ಎಂದು ತಿಳಿಸಿದರು.

ADVERTISEMENT

ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಗಳ ಕೊರತೆ ಇತ್ತು. ಇದೀಗ ಅನೇಕ ಸಂಸ್ಥೆಗಳು ತರಬೇತಿ ನೀಡುತ್ತಿವೆ ಎಂದರು.
ಸ್ಪರ್ಧಾ ಸಂಕಲ್ಪ ಅಕಾಡೆಮಿಯು ಶಿಕ್ಷಕರ ಸಿಇಟಿ, ಟಿಇಟಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಗುಣಮಟ್ಟದ ತರಬೇತಿ ನೀಡುತ್ತಿದೆ. ಈ ಭಾಗದ ಅಭ್ಯರ್ಥಿಗಳು ಅಕಾಡೆಮಿಯ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಕಾರ್ಯಾಗಾರ ಉದ್ಘಾಟಿಸಿದ ಚಿಂತಕಿ ಗೀತಾ ಶೀಲವಂತ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ತರಬೇತಿ ಅವಶ್ಯಕವಾಗಿದೆ ಎಂದು ತಿಳಿಸಿದರು.

ಸದ್ಯ ಪೈಪೋಟಿಯ ಯುಗ ಇದೆ. ಹೀಗಾಗಿ ಸ್ಪರ್ಧೆಗೆ ಅಣಿಯಾಗುವುದು ಅನಿವಾರ್ಯವಾಗಿದೆ. ಸ್ಪರ್ಧಾ ಸಂಕಲ್ಪ ಅಕಾಡೆಮಿಯು ಈ ದಿಸೆಯಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ ಎಂದು ನುಡಿದರು.

ಅಕಾಡೆಮಿಯ ಮುಖ್ಯಸ್ಥ ನಾಗಯ್ಯ ಸ್ವಾಮಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲು ಅಕಾಡೆಮಿ ಆರಂಭಿಸಲಾಗಿದೆ ಎಂದು ತಿಳಿಸಿದರು.

ಅಕಾಡೆಮಿಯು ಉಚಿತ ಕಾರ್ಯಾಗಾರಗಳ ಮೂಲಕ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳ ಕನಸು ನನಸಾಗಿಸಲು ಶ್ರಮಿಸುತ್ತಿದೆ ಎಂದು ಹೇಳಿದರು.

ಅಕಾಡೆಮಿಯ ಮನೋಜಕುಮಾರ ಬುಕ್ಕಾ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಸಂಜಯ ಮಾನೂರೆ, ಹಣಮಂತರಾವ್ ಪಾಟೀಲ, ಸುರೇಶ ಗೋಖಲೆ, ಮಲ್ಲಿಕಾರ್ಜುನ ಸಿಂದಗೇರಾ, ಶಶಿಕಾಂತ ಜೋಶಿ, ವೀರಭದ್ರಯ್ಯ ಸ್ವಾಮಿ, ದಯಾನಂದ ಗಡ್ಡೆ, ರಮೇಶ ಪವಾರ್, ರಾಮಣ್ಣ ಕುಂಬಾರ, ಸಂತೋಷ ತಂಬಾಕೆ, ಗಣಪತಿ ಸಿದ್ಧೇಶ್ವರ, ಹೇಮಾ ಕಂದಗೂಳೆ, ಅನಿಲ್ ಮಚಕುರಿ, ಪೂಜಾ ಪಟ್ನೆ, ಪ್ರದೀಪ್ ಅವರು ಶಿಕ್ಷಕರ ಸಿಇಟಿ, ಟಿಇಟಿ ಕುರಿತು ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಶಿಬಿರಾರ್ಥಿ ಪ್ರಿಯಾಂಕ ಮಲ್ಕಾಪುರ ಮತ್ತಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಗುಂಡಮ್ಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.