ADVERTISEMENT

ಪಂಚ ಗ್ಯಾರಂಟಿ ಯೋಜನೆಗಳ ಸಭೆ | ಅಧಿಕಾರಿಗಳ ಗೈರು: ಸದಸ್ಯರಿಂದಲೇ ಅಪಸ್ವರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:46 IST
Last Updated 14 ಆಗಸ್ಟ್ 2025, 5:46 IST
ಹುಲಸೂರ ತಾಪಂ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಪ್ರಮುಖರು
ಹುಲಸೂರ ತಾಪಂ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಪ್ರಮುಖರು   

ಹುಲಸೂರ: ಪಂಚ ಗ್ಯಾರಂಟಿ ಯೋಜನೆಗಳ ಸಭೆ ಹೆಸರಿಗೆ ಮಾತ್ರ ನಡೆಯುತ್ತಿವೆ. ಇದರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ. ಇಲ್ಲಿಯವರೆಗೆ ನಾಲ್ಕು ಪ್ರಗತಿ ಪರಿಶೀಲನಾ ಸಭೆ ನಡೆಸಿದರೂ ಈ ಹಿಂದಿನ ಸಮಸ್ಯೆಗಳೆ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ನಡೆದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ತಾಪಂ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು. ಹಳೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ತಾಲ್ಲೂಕಿನಲ್ಲಿ 8902 ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ ಎಂದು ಆಹಾರ ಸರಬರಾಜು ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಪಡಿತರ ಚೀಟಿ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಡಿ ಪಡೆದ ಆಹಾರ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಅಧಿಕಾರಿಗಳು ಜಾಗೃತರಾಗಿರಬೇಕು ಎಂದು ಸದಸ್ಯರು ತಿಳಿಸಿದರು.

ADVERTISEMENT

ಗೃಹ ಜ್ಯೋತಿ ಯೋಜನೆಯಡಿ 7779 ಕುಟುಂಬಗಳು ಲಾಭ ಪಡೆಯುತ್ತಿವೆ ಎಂದು ಜೆಸ್ಕಾಂ ಉಪವಿಭಾಗ ಅಧಿಕಾರಿಗಳು ತಿಳಿಸಿದರು. ಗ್ರಾಮಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ಹಳ್ಳಿಯ ಜನರಿಗೆ ಶಕ್ತಿ ಯೋಜನೆಯ ಪ್ರಯೋಜನ ದೊರಕುತ್ತಿಲ್ಲ. ತೋಗಲೂರು, ಮಿರಖಲ್ ಸೇರಿದಂತೆ ಹಲವು ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸುವಂತೆ ಬಸ್ ಡಿಪೋ ಮ್ಯಾನೇಜರ್ ಅವರಿಗೆ ಗ್ಯಾರಂಟಿ ಯೋಜನೆಗಳ ಸದಸ್ಯರು ಮನವಿ ಮಾಡಿದರು.

ತಹಶೀಲ್ದಾರ್ ಶಿವಾನಂದ ಮೆತ್ರೆ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷೆ ಲತಾ ಹಾರಕುಡೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಸಿದ್ರಾಮ ಕಾಮಣ್ಣ, ಸದಸ್ಯರಾದ ಸತೀಶ ಗಾಯಕವಾಡ, ವೆಂಕಟೇಶ ಗುತ್ತೆದಾರ, ಪ್ರಶಾಂತ ಪಾಟೀಲ್, ತ್ರಿಬಂಕ ಜವಾಯಿ, ವಿನಾಯಕ ಪವಾರ, ಈಶ್ವರ ಮೇತ್ರೆ, ಶಿವಕುಮಾರ ಕೋಳೆ, ಮಹೇಶ ಪಾಟೀಲ್, ಭಾಗವತ ಪುಂಡೆ, ಬಾಲಾಜಿ ಸೂರ್ಯವಂಶಿ ಉಪಸ್ಥಿತರಿದ್ದರು.

ಸಾಮಾಜಿಕ ಕಾರ್ಯಕರ್ತ ನಟರಾಜ ಆದೇಪ್ಪ ಮಾತನಾಡಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅಧಿಕಾರಿಗಳು ಗೈರು ಇರುವುದು ಅವರ ಇಲಾಖೆಯ ಯೋಜನೆಗಳ ಮಾಹಿತಿ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗೈರು ಇರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಭೆಯಲ್ಲಿ ಚರ್ಚೆ ನಡೆದಿತ್ತು ಆದರೆ ಇಲ್ಲಿಯವರೆಗೆ ಯಾವುದೇ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ. ಈ ಕುರಿತು ಮಾಹಿತಿ ನೀಡಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.