
ಬಸವಕಲ್ಯಾಣ: ‘ಸಮತಾವಾದಿಗಳಾದ ಶರಣ ಹರಳಯ್ಯ ಮತ್ತು ಗುರು ರವಿದಾಸ ಮಹಾರಾಜ ಅವರು ಸಮಗಾರ ಸಮಾಜದ ದೊಡ್ಡ ಕೊಡುಗೆ. ಅವರ ತತ್ವವನ್ನು ಪಾಲಿಸಬೇಕು’ ಎಂದು ಶರಣ ಲಿಂಗವಂತ ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ ಹೇಳಿದ್ದಾರೆ.
ನಗರದ ಶರಣ ಹರಳಯ್ಯ ವೃತ್ತದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಶರಣ ಹರಳಯ್ಯ ಮತ್ತು ರವಿದಾಸ ಮಹಾರಾಜ ಜಯಂತಿಯಲ್ಲಿ ಅವರು ಮಾತನಾಡಿದರು.
‘ಹರಳಯ್ಯನವರ ಮಗನ ಅಂತರಜಾತಿಯ ಮದುವೆಯ ಕಾರಣವೇ ಕಲ್ಯಾಣಕ್ರಾಂತಿ ಘಟಿಸಿತು. ಗುರು ರವಿದಾಸ ಮಹಾರಾಜರು ದೋಹೆ ಬರೆದು ಸಮಾಜದ ಅಂಕುಡೊಂಕನ್ನು ತಿದ್ದಿದ್ದಾರೆ. ಅವರ ದೋಹೆಗಳು ಸಿಖ್ಖರ ಗುರುಗ್ರಂಥಸಾಹೀಬ್‌ದಲ್ಲಿ ಸೇರಿಸಿರುವುದು ಹೆಮ್ಮೆಯ ಸಂಗತಿ’ ಎಂದರು.
ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ‘ಸಂತರು, ಶರಣರು, ಸತ್ಪುರುಷರು ಸಮಾಜ ಸುಧಾರಣೆಗೆ ಪ್ರಯತ್ನಿಸಿದ್ದಾರೆ’ ಎಂದರು.
ಉಪನ್ಯಾಸಕ ಶಿವಶರಣಪ್ಪ ಹುಗ್ಗೆಪಾಟೀಲ, ಸಮಗಾರ ಸಮಾಜ ಸಂಘದ ತಾಲ್ಲೂಕು ಅಧ್ಯಕ್ಷ ಶಿವಾಜಿರಾವ್ ಕಾಂಬಳೆ, ರಮೇಶ ಪಹಾರೆ, ಚಂದ್ರಕಲಾತಾಯಿ, ಸಂಜೀವಕುಮಾರ ಜಾಧವ, ಸೂರ್ಯಕಾಂತ ಟೀಕೆಕರ್, ಗೋಪಾಲ ಸೂರ್ಯವಂಶಿ, ಮೀನಾ ಜಾಧವ, ಲಲಿತಾ ವಾಘಮಾರೆ ಮಾತನಾಡಿದರು. ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ಡಾ.ಸುಜಾತಾ ಸಂಜೀವ ಜಾಧವ ಅವರನ್ನು ಸನ್ಮಾನಿಸಲಾಯಿತು.
ಮಾದಾರ ಚನ್ನಯ್ಯ ಪೀಠದ ಚಿತ್ರಮ್ಮ ತಾಯಿ, ಹಡಪದ ಸಮಾಜದ ಜಿಲ್ಲಾಧ್ಯಕ್ಷ ದತ್ತಾತ್ರಿ ಬಾಂದೇಕರ್, ಸುಭಾಷ ಹಮೀಲಪುರೆ, ರಾಜೀವ ಟೀಳೆ, ಸೂರ್ಯಕಾಂತ ಕಾಂಬಳೆ, ಗೌತಮ ಜಾಧವ, ಮಧುಕರ ಹಮೀಲಪುರೆ, ಮೋಹನ ಕಾಂಬಳೆ, ಭರತ ವಾಘಮಾರೆ, ನಿವೃತ್ತ ಯೋಧ ಶಂಕರರಾವ್, ಜೈಹಿಂದ್ ಜಾಧವ, ಸುಧಾಕರ ಗೋಖಲೆ, ಗುಲಾಬರಾವ್, ರಾಜಕುಮಾರ ಜಾಧವ, ರಮೇಶ ಕಾಂಬಳೆ, ರಾಜೀವ ಶಿಂಧೆ, ಉತ್ತಮ ಕಾಂಬಳೆ, ಪಿಂಟು ಕಾಂಬಳೆ, ಮನೋಹರ ಮತ್ತಿತರರು ಪಾಲ್ಗೊಂಡಿದ್ದರು.
ಗಮನಸೆಳೆದ ಮೆರವಣಿಗೆ
ಜಯಂತಿ ಅಂಗವಾಗಿ ಶರಣ ಹರಳಯ್ಯ ಮತ್ತು ಗುರು ರವಿದಾಸ ಮಹಾರಾಜ ಅವರ ಭಾವಚಿತ್ರಗಳನ್ನು ಸಾರೋಟಿನಲ್ಲಿ ಇಟ್ಟು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಬ್ಯಾಂಡ್ ಬಾಜಾ ಡಿಜೆ ಇತರೆ ವಾದ್ಯ ಮೇಳಗಳು ಪಾಲ್ಗೊಂಡಿದ್ದವು. ಸಮಾಜ ಕಾರ್ಯಕರ್ತರು ತಲೆಮೇಲೆ ಭಗವಾ ಟೊಪ್ಪಿಗೆ ಕೊರಳಿಗೆ ಪಟ್ಟಿ ಹಾಕಿಕೊಂಡಿದ್ದರು. ಮೆರವಣಿಗೆಯುದ್ದಕ್ಕೂ ಉತ್ಸಾಹದಿಂದ ಕುಣಿದರು. ವೇಷಧಾರಿ ಮಕ್ಕಳು ಇದ್ದರು. ಶರಣ ಹರಳಯ್ಯ ವೃತ್ತವನ್ನು ಸಿಂಗರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.