ADVERTISEMENT

ಗ್ರಾಮ ವಾಸ್ತವ್ಯ: ಉಜಳಂಬದಲ್ಲಿ ಮನೆ ಮಾಡಿದ ಸಂಭ್ರಮ

ಚಂದ್ರಕಾಂತ ಮಸಾನಿ
Published 24 ಜೂನ್ 2019, 20:00 IST
Last Updated 24 ಜೂನ್ 2019, 20:00 IST
ಬಸವಕಲ್ಯಾಣ ತಾಲ್ಲೂಕಿನ ಉಜಳಂಬದಲ್ಲಿ ಪೆಂಡಾಲ್‌ ಹಾಕುವ ಕಾರ್ಯ ನಡೆದಿದೆ
ಬಸವಕಲ್ಯಾಣ ತಾಲ್ಲೂಕಿನ ಉಜಳಂಬದಲ್ಲಿ ಪೆಂಡಾಲ್‌ ಹಾಕುವ ಕಾರ್ಯ ನಡೆದಿದೆ   

ಬೀದರ್: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜೂನ್ 27 ರಂದು ವಾಸ್ತವ್ಯ ಮಾಡಲಿರುವ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗಡಿ ಗ್ರಾಮ ಉಜಳಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಮುಖ್ಯಮಂತ್ರಿ ತಂಗಲಿರುವ ಶಾಲಾ ಕೊಠಡಿಯಲ್ಲಿನ ಹಳೆಯ ಶೌಚಾಲಯ ನವೀಕರಿಸಲಾಗಿದೆ. ಹೊಸ ಕಮೋಡ್‌ ಹಾಕಲಾಗಿದೆ. ಅಧಿಕಾರಿಗಳಿಗೂ ಮೂರು ಪ್ರತ್ಯೇಕ ಶೌಚಾಲಯಗಳನ್ನು ಕಟ್ಟಲಾಗಿದೆ. ಶಾಲಾ ಗೋಡೆಯ ಮೇಲೆ ಚಿತ್ರ ಬಿಡಿಸುವ ಕಾರ್ಯ ಭರದಿಂದ ಸಾಗಿದೆ. ಗ್ರಾಮಸ್ಥರು ಕುತೂಹಲದಿಂದ ಎಲ್ಲವನ್ನೂ ವೀಕ್ಷಿಸುತ್ತಿದ್ದಾರೆ.

ಶಾಲಾ ಕಟ್ಟಡ, ರಾಜೀವ್ ಗಾಂಧಿ ಸೇವಾ ಕೇಂದ್ರ, ಪಶು ಚಿಕಿತ್ಸಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಣ್ಣಬಣ್ಣ ಬಳಿಯಲಾಗಿದೆ. ಗ್ರಾಮಕ್ಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಮಂಜೂರು ಮಾಡಲಾಗಿದೆ. ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಬದಲಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆದಿದೆ.

ADVERTISEMENT

ಗ್ರಾಮದ ಎಲ್ಲ ಓಣಿಗಳಲ್ಲೂ ಕಾಂಕ್ರಿಟ್‌ ರಸ್ತೆ ಹಾಗೂ ಗಟಾರ ನಿರ್ಮಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು 15 ದಿನಗಳಿಂದ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ.

ಗ್ರಾಮದಲ್ಲಿನ ಸರ್ಕಾರಿ ಕನ್ನಡ, ಮರಾಠಿ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ನೆಲಸಮಗೊಳಿಸಲಾಗಿದೆ. 2014, 2017 ಹಾಗೂ 2018ರ ಅವಧಿಯಲ್ಲಿ ಮಂಜೂರಾಗಿದ್ದ ಎಂಟು ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ದಂಡು ನಿತ್ಯ ಗ್ರಾಮಕ್ಕೆ ಭೇಟಿ ಕೊಟ್ಟು ಪರಿಶೀಲಿಸುತ್ತಿದೆ.

ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅವರ ಮೂಲಕ ಅಭಿವೃದ್ಧಿಗಾಗಿ ಸಲ್ಲಿಸಿದ್ದ 25 ಬೇಡಿಕೆಗಳಲ್ಲಿ ಬಹುತೇಕ ಈಡೇರುವ ಹಂತದಲ್ಲಿವೆ. ಸಚಿವರು ಜೂನ್ 17ರಂದು ಗ್ರಾಮಕ್ಕೆ ಭೇಟಿ ನೀಡಿದ ದಿನವೇ ರೈತ ಸಂತೆ ನಿರ್ಮಾಣಕ್ಕೆ ₹ 1 ಕೋಟಿ ಮಂಜೂರು ಮಾಡಿದ್ದಾರೆ. ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವ ಕಾರಣ ಗ್ರಾಮಸ್ಥರು ಸಂತಸದಲ್ಲಿದ್ದಾರೆ.

ಮಳೆ ಬಂದರೂ ಮುಖ್ಯಮಂತ್ರಿ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಪೆಂಡಾಲ್‌ ನಿರ್ಮಿಸಲಾಗುತ್ತಿದೆ. ಮೂರು ಸಾವಿರ ಜನ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅಂದು ಸುಮಾರು ಐದು ಸಾವಿರ ಜನ ಸೇರುವ ನಿರೀಕ್ಷೆ ಇದೆ.

ಮುಖ್ಯಮಂತ್ರಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಅನುಕೂಲವಾಗುವಂತೆ ಜಿಲ್ಲಾ ಆಡಳಿತ 10 ಕೌಂಟರ್‌ಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿದೆ. ಇವುಗಳ ಮೇಲುಸ್ತುವಾರಿಯನ್ನು ತಹಶೀಲ್ದಾರರಿಗೆ ವಹಿಸಿದೆ.

ಕಾರ್ಯಕ್ರಮಕ್ಕೆ ಬರುವ ಮಕ್ಕಳಿಗೆ ಹಾಲು ಮತ್ತು ಬಿಸ್ಕತ್ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಹೆಣ್ಣುಮಕ್ಕಳಿಗೆ ಅಗತ್ಯ ವ್ಯವಸ್ಥೆ ಮಾಡಲು 15 ಜನ ಅಂಗನವಾಡಿ ನೌಕರರನ್ನು ಸ್ವಯಂ ಸೇವಕರನ್ನಾಗಿ ನಿಯೋಜಿಸಲಾಗಿದೆ.

ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಇಲ್ಲಿ ಹೆರಿಗೆ ಹಾಗೂ ಸಂತಾನ ಶಕ್ತಿ ನಿಯಂತ್ರಣ ಶಸ್ತ್ರಚಿಕಿತ್ಸಾ ವಿಭಾಗ ಆರಂಭಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಎಚ್‌ಕೆಆರ್‌ಡಿಬಿಯಿಂದ ₹ 25 ಲಕ್ಷ ಮಂಜೂರಾಗುವ ನಿರೀಕ್ಷೆ ಇದೆ. ಗ್ರಾಮಸ್ಥರು ಪೊಲೀಸ್‌ ಠಾಣೆ ಕೇಳಿದ್ದಾರೆ. ಅಪರಾಧ ಸಂಖ್ಯೆ ಕಡಿಮೆ ಇರುವ ಕಾರಣ ಪೊಲೀಸ್ ಉಪ ಠಾಣೆ ಸ್ಥಾಪನೆಯಾಗುವ ಸಾಧ್ಯತೆ ಇದೆ.

‘ಉಜಳಂಬ ಹಾಗೂ ಸುತ್ತಲಿನ ಗ್ರಾಮಗಳ ಮಕ್ಕಳು ಮಹಾರಾಷ್ಟ್ರದ ಉಮರ್ಗಾ ಹಾಗೂ ಬಸವಕಲ್ಯಾಣಕ್ಕೆ ಶಿಕ್ಷಣ ಪಡೆಯಲು ಹೋಗುತ್ತಿದ್ದಾರೆ. ಉಜಳಂಬದಲ್ಲಿ ಗುಣಮಟ್ಟದ ಶಿಕ್ಷಣ ದೊರಕುವಂತಾಗಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾ ಆಡಳಿತ 8 ಎಕರೆ ಜಾಗ ಹಾಗೂ ಗ್ರಾಮಸ್ಥರ ಮನವಿಯಂತೆ ಎಸ್‌.ಸಿ,ಎಸ್‌.ಟಿ. ಹಾಸ್ಟೆಲ್‌ಗೆ 6 ಎಕರೆ ಜಾಗ ಗುರುತಿಸಿದೆ’ ಎಂದು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಹೇಳುತ್ತಾರೆ.

*
ಉಜಳಂಬದಲ್ಲಿ ಒಂದು ವಾರದ ಅವಧಿಯಲ್ಲಿ ₹ 30 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಗ್ರಾಮಕ್ಕೆ ಇನ್ನಷ್ಟು ಸೌಲಭ್ಯಗಳು ದೊರಕಲಿವೆ.
-ಎಚ್‌.ಆರ್.ಮಹಾದೇವ,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.