ADVERTISEMENT

ಬೀದರ್‌ ಜಿಲ್ಲೆಯಲ್ಲಿ ಧಾರಾಕಾರ ಮಳೆ: ಹಲವೆಡೆ ಉಕ್ಕಿ ಹರಿದ ಹಳ್ಳಗಳು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 8:26 IST
Last Updated 6 ಸೆಪ್ಟೆಂಬರ್ 2021, 8:26 IST
ಕಮಲನಗರ ತಾಲ್ಲೂಕಿನ ಬಸನಾಳ ಗ್ರಾಮದ ರೈತ ಸದಾನಂದ ಪಾಟೀಲ ಅವರ ಹೊಲದಲ್ಲಿನ ಕೊಯ್ಲು ಮಾಡಿದ್ದ ಉದ್ದು, ಹೆಸರು ಮಳೆ ನೀರಿನ ಪಾಲಾಗಿರುವುದು
ಕಮಲನಗರ ತಾಲ್ಲೂಕಿನ ಬಸನಾಳ ಗ್ರಾಮದ ರೈತ ಸದಾನಂದ ಪಾಟೀಲ ಅವರ ಹೊಲದಲ್ಲಿನ ಕೊಯ್ಲು ಮಾಡಿದ್ದ ಉದ್ದು, ಹೆಸರು ಮಳೆ ನೀರಿನ ಪಾಲಾಗಿರುವುದು   

ಬೀದರ್‌: ಜಿಲ್ಲೆಯ ವಿವಿಧೆಡೆ ಭಾನುವಾರ ಬೆಳಗಿನ ಜಾವ ಧಾರಾಕಾರ ಮಳೆಯಾಗಿದೆ. ಬೀದರ್‌, ಔರಾದ್ ಹಾಗೂ ಕಮಲನಗರ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕೆಳಮಟ್ಟದ ಸೇತುವೆಗಳು ಮುಳುಗಿದ್ದವು. ಬೆಳಿಗ್ಗೆ 10 ಗಂಟೆಯ ನಂತರ ಮಳೆ ಕಡಿಮೆಯಾಗಿ ವಾಹನ ಸಂಚಾರ ಮತ್ತೆ ಆರಂಭವಾಗಿದೆ.

ಬೀದರ್ ತಾಲ್ಲೂಕಿನ ಸಿರ್ಸಿ(ಎ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಮಧ್ಯಭಾಗದಲ್ಲೇ ಮಣ್ಣು ಕೊಚ್ಚಿಕೊಂಡು ಹೋಗಿ ದೊಡ್ಡ ತಗ್ಗು ಬಿದ್ದಿದೆ.

ಸಿರ್ಸಿ(ಎ) ಗ್ರಾಮದಿಂದ ಬಾವಗಿ, ನೆಲವಾಳ, ಸಂಗೊಳಗಿ, ಬ್ಯಾಲಹಳ್ಳಿ, ಹಾಲಹಳ್ಳಿ, ಆಣದೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಮಳೆದ ಬಾರಿ ಮಣ್ಣು ಕೊಚ್ಚಿಕೊಂಡು ಹೋದಾಗ ಅಧಿಕಾರಿಗಳು ಲಾರಿಯಲ್ಲಿ ಮಣ್ಣು ಸುರಿದು ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಇದೀಗ ಮತ್ತೆ ಮಣ್ಣುಕೊಚ್ಚಿಕೊಂಡು ಹೋಗಿ ಮಧ್ಯದಲ್ಲಿ ಕಂದಕ ನಿರ್ಮಾಣವಾಗಿದೆ.

ADVERTISEMENT

‘ರಾತ್ರಿ ಈ ಮಾರ್ಗದಲ್ಲಿ ವಾಹನಗಳು ಬಂದರೆ ಅಪಘಾತ ಸಂಭವಿಸುವ ಅಪಾಯ ಇದೆ.ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸೇತುವೆ ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥ ರಾಜು ಕರೆಪ್ಪನೋರ್ ಆಗ್ರಹಿಸಿದ್ದಾರೆ.

ಬೀದರ್‌ ನಗರದಲ್ಲಿ ಗಟಾರುಗಳು ಉಕ್ಕಿ ಹರಿದು ರೋಟರಿ ಕನ್ನಡಾಂಬೆ ವೃತ್ತ, ಶರಣ ಹರಳಯ್ಯ ವೃತ್ತದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ವಾಹನಗಳ ಓಡಾಟ ಹಾಗೂ ಪಾದಚಾರಿಗಳ ಸಂಚಾರಕ್ಕೆ ಕೆಲ ಹೊತ್ತು ಅಡಚಣೆ ಉಂಟಾಯಿತು.

ಬೀದರ್‌ ತಾಲ್ಲೂಕಿನ ಬರೂರ ಗ್ರಾಮದಲ್ಲಿ ಅತಿ ಹೆಚ್ಚು 81 ಮಿ.ಮೀ ಮಳೆಯಾಗಿದೆ. ನಾಗೋರಾದಲ್ಲಿ 73 ಮಿ.ಮೀ, ಚಟ್ನಳ್ಳಿ, ಕಮಠಾಣದಲ್ಲಿ 67.5, ಚಟ್ನಳ್ಳಿ ಹಾಗೂ ಕಮಠಾಣ 64 ಮಿ.ಮೀ, ಔರಾದ್‌ ತಾಲ್ಲೂಕಿನ ಸಂತಪುರ ಹೋಬಳಿಯಲ್ಲಿ 71 ಮಿ.ಮೀ, ಭಾಲ್ಕಿ ತಾಲ್ಲೂಕಿನ ಅತ್ತರಗಾ, ಧೋಂಡಾಪುರದಲ್ಲಿ 65.5 ಮಿ.ಮೀ, ಕಮಲನಗರ ತಾಲ್ಲೂಕಿನ ಠಾಣಾಕುಶನೂರಲ್ಲಿ 66.5 ಮಿ.ಮೀ ಮಳೆಯಾಗಿದೆ.

ಕೆರೆಗಳಿಗೆ ಹೆಚ್ಚಿದ ನೀರು:

ಭಾಲ್ಕಿ: ತಾಲ್ಲೂಕಿನಾದ್ಯಂತ ವರುಣನ ಆರ್ಭಟ ಮುಂದುವರಿದಿದೆ. ಎರಡು ಮೂರು ದಿನಗಳ ಬಿಡುವು ನೀಡಿದ್ದ ಮಳೆ ಶನಿವಾರ ಮಧ್ಯಾಹ್ನದಿಂದ ಮತ್ತೆ ಆರಂಭಗೊಂಡು ಭಾನುವಾರ ಇಡೀ ದಿನ ಮಳೆ ಸುರಿಯಿತು.

ನಾಲ್ಕೈದು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ನಾವದಗಿ, ದಾಡಗಿ, ಏಣಕೂರು, ಮಾವಿನಹಳ್ಳಿ ಮುಂತಾದ ಕಡೆಗಳಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿತು.

ಮಳೆ ಹಾನಿ ಸಮೀಕ್ಷೆ ಇನ್ನೂ ಪ್ರಗತಿಯಲ್ಲಿ ಇರುವಾಗಲೇ ಎರಡನೇ ಬಾರಿಗೆ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಆಗಿದ್ದು, ಹಾನಿ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ಕಳೆದ 24 ಗಂಟೆಗಳಲ್ಲಿ ಎಡಬಿಡದೇ ಮಳೆ ಸುರಿದ ಪರಿಣಾಮ ಬಹುತೇಕ ಹಳ್ಳಕೊಳ್ಳ, ಚೆಕ್‌ಡ್ಯಾಂ, ತಗ್ಗು ಪ್ರದೇಶಗಳು ತುಂಬಿ ಹರಿಯುತ್ತಿವೆ.

ಕೆರೆಗಳಿಗೆ ಒಳ ಹರಿವು ಹೆಚ್ಚಾಗಿದೆ. ಕಟಾವಿಗೆ ಬಂದಿದ್ದ ಹೆಸರು ಬೆಳೆ ನೀರು ಪಾಲಾಗಿದೆ. ಕಾಯಿಕಟ್ಟಿದ ಸೋಯಾ ಅವರೆ ಬೆಳೆ, ತೊಗರಿ ಬೆಳೆಗಳು ರೋಗ ಬಾಧೆಗೆ ತುತ್ತಾಗುತ್ತಿವೆ. ತರಕಾರಿ, ತೋಟಗಾರಿಕೆ ಬೆಳೆಗಳು ನೀರಿನಲ್ಲಿ ಮುಳಗಡೆ ಕಂಡಿದ್ದು, ರೈತರು ಆತಂಕದಲ್ಲಿದ್ದು ಪರಿಹಾರಕ್ಕಾಗಿ ಸರ್ಕಾರದದತ್ತ ಮುಖ ಮಾಡಿದ್ದಾರೆ. ಭಾನುವಾರ ಸುರಿದ ಭಾರಿ ಮಳೆಗೆ ರೈತ ಶಿವಶಂಕರ ಕಲಾ ಎಂಬುವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿದ್ದ ಟೊಮೆಟೊ ಬೆಳೆ ನೀರಿನಲ್ಲಿ ಮುಳಗಡೆ ಕಂಡಿದೆ.ಈ ಹಿಂದೆ ಲಾಕ್‌ಡೌನ್ ಸಮಯದಲ್ಲಿ ಕಲ್ಲಂಗಡಿ, ನಂತರ ಟೊಮೆಟೊ ಬೆಳೆದಿದ್ದರು ಆದರೆ ಟೊಮೆಟೊ ರೋಗಕ್ಕೆ ತುತ್ತಾಗಿ ಕೈಸುಟ್ಟುಕೊಂಡಿದ್ದರು. ಈಗ ಮತ್ತೆ ಟೊಮೆಟೊ ಮಳೆಗೆ ಹಾಳಾಗಿದ್ದು ಸುಮಾರು ₹2 ಲಕ್ಷ ನಷ್ಟವಾಗಿದೆ. ಇದರಿಂದ ಯುವ ರೈತ ಶಿವಶಂಕರ ಕಲಾ ಅವರಿಗೆ ದಿಕ್ಕು ತೋಚದಂತಾಗಿದ್ದು, ಸರ್ಕಾರದ ನೆರವಿನತ್ತ ಮುಖ ಮಾಡಿದ್ದಾರೆ.

ಕೆರೆಯಂತಾದ ರಸ್ತೆಗಳು:

ಕಮಲನಗರ: ತಾಲ್ಲೂಕಿನಾದ್ಯಂತ ಶನಿವಾರ ಮಧ್ಯರಾತ್ರಿ ಏಕಾ ಏಕೀ ಶುರುವಾದ ಮಳೆ ಮೂರು ಗಂಟೆಗೂ ಹೆಚ್ಚು ಹೊತ್ತು ಕಮಲನಗರದಲ್ಲಿ ದಾಖಲೆಯ 80.08 ಮಿ.ಮೀ. ಮಳೆ ಸುರಿದು ಅವಾಂತರ ಸೃಷ್ಟಿಸಿತ್ತು. ರಾತ್ರಿ ಸುರಿದ ನಿರಂತರ ಸುರಿದ ಮಳೆಯಿಂದ ರಸ್ತೆಗಳೆಲ್ಲವೂ ಕೆರೆಯಂತಾಗಿದ್ದವು. ಬೆಳಕುಣಿ(ಬಿ) ಗ್ರಾಮದ ತಗ್ಗು ಸೇತುವೆ ಮೇಲಿಂದ ನೀರು ಹರಿದು ಹೋಗಿ ಸೇತುವೆ ಮೇಲೆ ರಂಧ್ರ ಬಿದ್ದಿದೆ. ವಾಹನ, ಬೈಕ್ ಸವಾರರು ಪರದಾಡುವಂತಾಯಿತು.

ದಾಬಕಾ ವಲಯ ಬಹುತೇಕ ಸೇತುವೆಗಳ ಮೇಲಿಂದ ನೀರು ಹರಿದು ಹೋಗುವುದರಿಂದ ರಸ್ತೆ ಯಾವುದೋ, ಚರಂಡಿ ಯಾವುದೋ ತಿಳಿಯದೇ ಜನ ಸೇತುವೆ ರಸ್ತೆ ದಾಟಲು ಹರಸಾಹಸ ಪಡಬೇಕಾಯಿತು. ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ವಾಗನಗೇರಾ-ಗಣೇಶಪುರ, ಖೇರ್ಡಾ-ದಾಬಕಾ(ಸಿ), ಗಂಗನಬಿಡ್-ದಾಬಕಾ ರಸ್ತೆಯಲ್ಲಿ ಸಾಕಷ್ಟು ನೀರು ಹರಿದು ಬಂದ ಪರಿಣಾಮ ಸಂಗ್ರಹಗೊಂಡು ನೀರು ಹೊಲಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟು ಮಾಡಿದೆ. ಡಿಗ್ಗಿ ಗ್ರಾಮದ ಪ್ರಮುಖ ರಸ್ತೆ ಮೇಲಿಂದ ಸಹ ಹಳ್ಳಕೊಳ್ಳದಂತೆ ನೀರು ಹರಿಯಿತು.ಮುಂಗಾರಿನ ಪ್ರಮುಖ ಬೆಳೆಗಳಾದ ಹೆಸರು, ಉದ್ದು ಬೆಳೆಯ ರಾಶಿ ತಾಲ್ಲೂಕಿನಾದ್ಯಂತ ಭರದಿಂದ ಸಾಗಿದ್ದು. ಈ ಮಳೆ ಸುರಿದ ಕಾರಣ ರಾಶಿಗೆ ಮತ್ತೆ ತೊಡಕು ಉಂಟು ಮಾಡಿದೆ.ಒಂದು ಎಕರೆ ಹೆಸರು ಮತ್ತು ಒಂದೂವರೆ ಎಕರೆ ಉದ್ದು ಶನಿವಾರ ಬೆಳಿಗ್ಗೆ ಕೊಯಿಲು ಮಾಡಲಾಗಿತ್ತು. ದಿಢೀರನೇ ಮಧ್ಯಾಹ್ನ 2 ಗಂಟೆಗೆ ಸುರಿದ ಮಳೆಯಿಂದ ಸಂಪೂರ್ಣ ಹಾಳಾಗಿ ಬೆಳೆ ಮಣ್ಣುಪಾಲಾಗಿದೆ. ಬೆಳೆ ವಿಮೆ ಕಂಪನಿ ಪರಿಹಾರ ಒದಗಿಸಬೇಕು ಎಂದು ಸದಾನಂದ ಪಾಟೀಲ ಆಗ್ರಹಿಸಿದ್ದಾರೆ.

ಔರಾದ್‌ ತಾಲ್ಲೂಕಿನ ಹಲವೆಡೆ ರಸ್ತೆ ಸಂಚಾರ ಸ್ಥಗಿತ:

ಔರಾದ್: ತಾಲ್ಲೂಕಿನ ವಿವಿಧೆಡೆ ಶನಿವಾರ ರಾತ್ರಿ ಉತ್ತಮ ಮಳೆಯಾಗಿದೆ. ಸಂತಪುರ ಹಾಗೂ ಠಾಣಾಕುಶನೂರ ಹೋಬಳಿಯಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಸಂತಪುರದಲ್ಲಿ 71 ಮಿ.ಮೀ ಹಾಗೂ ಠಾಣಾಕುಶನೂರಿನಲ್ಲಿ 65 ಮಿ.ಮೀ ಮಳೆಯಾಗಿದೆ.

ಮಳೆ ನೀರು ರಭಸದಿಂದ ಹರಿದ ಕಾರಣ ನಾಗೂರು ಬಳಿ ಬದಲಿ ರಸ್ತೆ ಕಿತ್ತು ಹೋಗಿದೆ. ಇದರಿಂದ ಸಂತಪುರ-ಠಾಣಾಕುಶನೂರ ನಡುವಣ ಸಂಪರ್ಕ ಕಡಿತವಾಗಿದೆ. ನಾಗೂರ ಬಳಿಯ ಸಣ್ಣ ಸೇತುವೆ ಮೇಲಿಂದ ನೀರು ಹರಿದು ಬೆಳಿಗ್ಗೆ ಕೆಲ ಹೊತ್ತು ಗ್ರಾಮದ ಸಂಪರ್ಕ ಕಡಿತವಾಗಿತ್ತು. ‘ಪ್ರತಿ ಮಳೆಗಾಲದಲ್ಲಿ ಈ ಸಮಸ್ಯೆ ಇದ್ದೇ ಇದೆ‌. ಯಾರೂ ಇದಕ್ಕೆ ಸ್ಪಂದಿಸುತ್ತಿಲ್ಲ’ ಎಂದು ನಾಗೂರ ನಿವಾಸಿ ಸಂತೋಷ ಮಸ್ಕಲೆ ಆಕ್ರೋಶ ಹೊರ ಹಾಕಿದ್ದಾರೆ.

ಸಂತಪುರ ಪರಿಶಿಷ್ಟರ ಕಾಲೊನಿಗೆ ನೀರು ನುಗ್ಗಿದೆ. ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಪದೇ ಪದೇ ಈ ಸಮಸ್ಯೆ ಕಾಡುತ್ತಿದೆ ಎಂದು ಅಲ್ಲಿಯ ನಿವಾಸಿಗಳು ದೂರಿದ್ದಾರೆ.

ಹೊಲಗಳಿಗೂ ನೀರು ನುಗ್ಗಿದೆ. ಕಟಾವಿಗೆ ಬಂದ ಹೆಸರು ಬೆಳೆಗೆ ಹಾನಿಯಾಗಿದೆ. ಇತರೆ ಬೆಳೆಗಳು ಕಂದು ಬಣ್ಣಕ್ಕೆ ತಿರುಗಿವೆ ಎಂದು ರೈತರು ತಿಳಿಸಿದರು.

ಜಮೀನಿನಲ್ಲಿ ನೀರು ಸಂಗ್ರಹ:

ಬಸವಕಲ್ಯಾಣ: ಎರಡು ದಿನಗಳಿಂದ ಆಗಾಗ ಧಾರಕಾರ ಮಳೆ ಸುರಿದ ಕಾರಣ ತಾಲ್ಲೂಕಿನಲ್ಲಿನ ಕೆಲ ಜಮೀನುಗಳಲ್ಲಿ ನೀರು ಸಂಗ್ರಹಗೊಂಡು ಬೆಳೆಗಳಿಗೆ ಹಾನಿಯಾಗಿದೆ.

ರಸ್ತೆ ಬದಿಯ ತಗ್ಗುಗಳಲ್ಲಿ ನೀರು ಸಂಗ್ರಹಗೊಂಡಿದ್ದು, ನಾಲೆಗಳಲ್ಲಿ ನೀರು ಹರಿದಿದೆ. ಚುಳಕಿನಾಲಾ ಜಲಾಶಯ ಹಾಗೂ ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ.

ಅಲ್ಲಲ್ಲಿ ಮನೆಗಳ ಗೋಡೆಗಳು ಕೂಡ ಕುಸಿದ ಬಗ್ಗೆ ಗೊತ್ತಾಗಿದೆ. ತಾಲ್ಲೂಕಿನ ನೀಲಕಂಠ ಗ್ರಾಮದ ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡದ ಛಾವಣಿ ಹಾಗೂ ಗೋಡೆ ಕುಸಿದಿದೆ. ಇಲ್ಲಿ ಗ್ರಾಮ ಸಭೆ ಹಾಗೂ ಇತರೆ ಸಭೆಗಳನ್ನು ಆಯೋಜಿಸಲಾಗುತ್ತಿತ್ತು. ಕಟ್ಟಡ ಕುಸಿದ್ದರಿಂದ ಒಳಗಡೆಯ ಪೀಠೋಪಕರಣಗಳಿಗೆ ಹಾನಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.