ADVERTISEMENT

ಬಹಮನಿ ಕಾಲದ ಬೀದರ್‌ ಕೋಟೆ: ಪುರಾತನ ಲೋಹದ ಬಾಗಿಲಗಳ ದುರಸ್ತಿ

ಚಂದ್ರಕಾಂತ ಮಸಾನಿ
Published 13 ಅಕ್ಟೋಬರ್ 2018, 13:54 IST
Last Updated 13 ಅಕ್ಟೋಬರ್ 2018, 13:54 IST
ಬೀದರ್‌ನ ಕೋಟೆಯ ಶಾರ್ಜಾ ದರ್ವಾಜಾಕ್ಕೆ ಲೋಹದ ಬಾಗಿಲು ಅಳವಡಿಸಲಾಗಿದೆ
ಬೀದರ್‌ನ ಕೋಟೆಯ ಶಾರ್ಜಾ ದರ್ವಾಜಾಕ್ಕೆ ಲೋಹದ ಬಾಗಿಲು ಅಳವಡಿಸಲಾಗಿದೆ   

ಬೀದರ್: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು(ಎಎಸ್‌ಐ)ನಗರದಲ್ಲಿರುವ ಬಹಮನಿ ಸುಲ್ತಾನರ ಕಾಲದ ಕೋಟೆಯ ಲೋಹದ ಬಾಗಿಲನ್ನು ದುರಸ್ತಿ ಮಾಡಿ ಶಾರ್ಜಾ ದರ್ವಾಜಾಕ್ಕೆ ಅಳವಡಿಸುವ ಮೂಲಕ ಸ್ಮಾರಕದ ಮೆರಗನ್ನು ಹೆಚ್ಚಿಸಿದೆ. ಇನ್ನುಳಿದ ಎರಡು ಪ್ರವೇಶ ದ್ವಾರಗಳ ದುರಸ್ತಿಗೂ ಸಿದ್ಧತೆ ನಡೆಸಿದೆ.

ಸಾಗವಾನಿ, ಸಿಸಂ ಹಾಗೂ ಲೋಹದ ಪಟ್ಟಿಗಳನ್ನು ಬಳಸಿ 20 ಅಡಿ ಎತ್ತರದ ದ್ವಾರ ನಿರ್ಮಿಸಲಾಗಿದೆ. ದ್ವಾರದ ಹಿಂಬದಿಯ ಚಿಲಕ ಹಾಗೂ ಸರಪಳಿಗಳು ಇಂದಿಗೂ ಬಲಿಷ್ಠವಾಗಿವೆ.

ಮಣ್ಣಿನಲ್ಲಿ ಹೂತು ಹೋಗಿದ್ದ ಲೋಹದ ಪಟ್ಟಿಗಳಿರುವ ಬಾಗಿಲು ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಿರುವ ಕಾರಣ ಎಎಸ್‌ಐ ಅಧಿಕಾರಿಗಳು ಅದನ್ನು ದುರಸ್ತಿ ಪಡಿಸಿದ್ದಾರೆ.

ADVERTISEMENT

‘600 ವರ್ಷಗಳ ಹಿಂದಿನ ಈ ಬಾಗಿಲು 600 ಟನ್‌ ಭಾರ ಹೊಂದಿದೆ. ತುಕ್ಕು ಹಿಡಿದ ಜಾಗವನ್ನು ಸೂಕ್ಷ್ಮವಾಗಿ ಜೋಡಿಸಲಾಗಿದೆ. ₹ 1 ಲಕ್ಷ ಖರ್ಚು ಮಾಡಿ ಬಾಗಿಲ ಕೆಳಭಾಗದಲ್ಲಿ ಹೊಸದಾಗಿ ಲೋಹದ ಪಟ್ಟಿ ಜೋಡಿಸಿ ಅದಕ್ಕೆ ಬೇರಿಂಗ್‌ ಅಳವಡಿಸಿ ಬಾಗಿಲನ್ನು ಸುಲಭವಾಗಿ ತೆರೆಯಲು ಹಾಗೂ ಮುಚ್ಚಲು ಅನುಕೂಲವಾಗವಂತೆ ಮಾಡಲಾಗಿದೆ’ ಎಂದು ಎಎಸ್‌ಐ ಸಹಾಯಕ ಸಂರಕ್ಷಣಾಧಿಕಾರಿ ವಿನಾಯಕ ಶಿರಹಟ್ಟಿ ಹೇಳುತ್ತಾರೆ.

‘ದ್ವಾರಗಳು ಅಧಿಕ ಭಾರ ಇರುವ ಕಾರಣ ಕ್ರೇನ್‌ ಬಳಸಿ ಹೊರಗೆ ತೆಗೆದು ದುರಸ್ತಿ ಪಡಿಸಿ ಕ್ರೇನ್‌ ನೆರವಿನಿಂದ ಮತ್ತೆ ಜೋಡಿಸಲಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಇದೀಗ ಬಹಳ ಅಚ್ಚರಿಯಿಂದ ದ್ವಾರಗಳನ್ನು ನೋಡುತ್ತಿದ್ದಾರೆ’ ಎನ್ನುತ್ತಾರೆ ಅವರು.

‘ಎರಡನೇ ಹಂತದಲ್ಲಿ ಗುಂಬಜ್‌ ದರ್ವಾಜಾ ಹಾಗೂ ಮೂರನೇ ಹಂತದಲ್ಲಿ ದೆಹಲಿ ದರ್ವಾಜಾ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸುತ್ತಾರೆ.

ಬಹಮನಿ ಸುಲ್ತಾನರಿಗೆ ಗುಣಮಟ್ಟದ ಲೋಹದ ಬಳಕೆಯ ಬಗೆಗೆ ಚೆನ್ನಾಗಿ ತಿಳಿದಿತ್ತು. ವೈರಿಗಳು ಎಷ್ಟೇ ಬಲಿಷ್ಠವಾಗಿದ್ದರೂ ಬಾಗಿಲು ಮುರಿದು ಕೋಟೆಯೊಳಗೆ ಪ್ರವೇಶ ಮಾಡುವುದು ಸಾಧ್ಯವಿರಲಿಲ್ಲ ಎಂದು ಸಂಶೋಧಕರು ವಿವರಿಸುತ್ತಾರೆ.

‘ಬರೀದ್‌ ಶಾಹಿ ಆಡಳಿತ ಕೊನೆಗೊಂಡ ನಂತರ ಕೋಟೆಯನ್ನು ಆದಿಲ್‌ಶಾಹಿ ದೊರೆಗಳು ವಶಪಡಿಸಿಕೊಂಡಿದ್ದರು. ಆದಿಲ್ ಶಾಹಿ ಸೇನಾಧಿಪತಿ ಸಿದ್ಧಿ ಮರ್ಜಾನಾ ಆಡಳಿತ ನಡೆಸುತ್ತಿದ್ದಾಗ ಔರಂಗಜೇಬ್‌ ತನ್ನ ಬಲಿಷ್ಠ ಸೈನ್ಯದೊಂದಿಗೆ 40 ದಿನಗಳ ಕಾಲ ಬೀದರ್‌ ಕೋಟೆಗೆ ಮುತ್ತಿಗೆ ಹಾಕಿದರೂ ಸೈನಿಕರಿಗೆ ಕೋಟೆಯ ಬಾಗಿಲನ್ನು ಮುರಿಯಲು ಸಾಧ್ಯವಾಗಿರಲಿಲ್ಲ’ ಎಂದು ಇತಿಹಾಸ ತಜ್ಞ ಸಮದ್‌ ಭಾರತಿ ಹೇಳುತ್ತಾರೆ.

‘ಕಾಲಾಂತರದಲ್ಲಿ ನಿಜಾಮರು ಬೀದರ್‌ ಕೋಟೆಯನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಕೆಲವು ಬದಲಾವಣೆಗಳನ್ನು ಮಾಡಿದರು. ಶಾರ್ಜಾ ದರ್ವಾಜಾದಲ್ಲಿ ಬದಲಾದ ವಿನ್ಯಾಸ ಕಾಣಸಿಗುತ್ತದೆ. ಪ್ರವೇಶ ದ್ವಾರದ ವಿನ್ಯಾಸಗಳೂ ರಾಜ ಮನೆತನದ ಅವಧಿಯನ್ನು ತಿಳಿದುಕೊಳ್ಳಲು ನೆರವಾಗುತ್ತವೆ’ ಎಂದು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.