ADVERTISEMENT

ವಸತಿ ಯೋಜನೆ ಹಣ ಬಿಡುಗಡೆ ಮಾಡದಿದ್ದರೆ ಹೋರಾಟ: ಖಂಡ್ರೆ

ಭಾಲ್ಕಿ: ಕೆಪಿಸಿಸಿ ನೂತನ ಅಧ್ಯಕ್ಷ, ಕಾರ್ಯಾಧ್ಯಕ್ಷರ ಪದಗ್ರಹಣ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 9:25 IST
Last Updated 7 ಜೂನ್ 2020, 9:25 IST
ಭಾಲ್ಕಿಯ ಬಿಕೆಐಟಿ ಕಾಲೇಜಿನಲ್ಲಿ ನಡೆದ ಕೆಪಿಸಿಸಿ ನೂತನ ಅಧ್ಯಕ್ಷ, ಕಾರ್ಯಾಧ್ಯಕ್ಷರ ಪದಗ್ರಹಣ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿದರು
ಭಾಲ್ಕಿಯ ಬಿಕೆಐಟಿ ಕಾಲೇಜಿನಲ್ಲಿ ನಡೆದ ಕೆಪಿಸಿಸಿ ನೂತನ ಅಧ್ಯಕ್ಷ, ಕಾರ್ಯಾಧ್ಯಕ್ಷರ ಪದಗ್ರಹಣ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿದರು   

ಭಾಲ್ಕಿ: ಕ್ಷೇತ್ರ ಸೇರಿ ರಾಜ್ಯದಾದ್ಯಂತ ವಿವಿಧ ವಸತಿ ಯೋಜನೆಗಳ ಅಡಿ ಮಂಜೂರಾದ ಸುಮಾರು 3 ಲಕ್ಷ ಮನೆಗಳ ಬಾಕಿ ಹಣ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದರು.

ಪಟ್ಟಣದ ಬಿಕೆಐಟಿ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೆಪಿಸಿಸಿ ನೂತನ ಅಧ್ಯಕ್ಷರ ಹಾಗೂ ಕಾರ್ಯಧ್ಯಕ್ಷರ ಪದಗ್ರಹಣ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ಷೇತ್ರವನ್ನು ಗುಡಿಸಲು ಮುಕ್ತವನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯದಲ್ಲಿಯೇ ದಾಖಲೆ ರೀತಿಯಲ್ಲಿ ಮನೆ ಮಂಜೂರು ಮಾಡಿಸಿ ಅರ್ಹರಿಗೆ ಮುಟ್ಟಿಸುವ ಪ್ರಯತ್ನ ಮಾಡಲಾಗಿದೆ. ಆದರೇ ರಾಜಕೀಯ ಏಳಿಗೆ ಸಹಿಸದ ವಿರೋಧಿಗಳು ನನ್ನ ಹೆಸರಿಗೆ ಕಳಂಕ ತರಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. ವಸತಿ ಮನೆಗಳ ತನಿಖೆ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಕ್ಷೇತ್ರದ 8-10 ಸಾವಿರ ಅರ್ಹ ಫಲಾನುಭವಿಗಳ ಖಾತೆಗೆ ಇನ್ನೂ ಸುಮಾರು ₹150 ಕೋಟಿ ಸೇರಿ ರಾಜ್ಯದಲ್ಲಿ ವಸತಿ ಮನೆಗಳ ₹4 ಸಾವಿರ ಕೋಟಿ ಅಧಿಕ ಹಣ ಸರ್ಕಾರ ಫಲಾನುಭವಿಗಳ ಖಾತೆಗೆ ಜಮಾ ಮಾಡಬೇಕು.

ADVERTISEMENT

ಇಲ್ಲದಿದ್ದರೇ ಈ ಹಿಂದೆ ನಮ್ಮ ತಂದೆ ಭೀಮಣ್ಣ ಖಂಡ್ರೆ ಅವರು ಶಾಸಕರಿದ್ದ ಸಂದರ್ಭದಲ್ಲಿ ಬಿತ್ತನೇ ಬೀಜಕ್ಕಾಗಿ ಕ್ಷೇತ್ರದಿಂದ ನಡೆಸಿದ ಹೋರಾಟದ ಕ್ರಾಂತಿ ರಾಜ್ಯದಾದ್ಯಂತ ಸದ್ದು ಮಾಡಿತ್ತು. ವಸತಿ ಮನೆಗಳ ಹಣ ಬಿಡುಗಡೆ ಆಗದಿದ್ದರೇ ಅದೇ ರೀತಿಯಲ್ಲಿ ಫಲಾನುಭವಿಗಳು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಸಂದೇಶ ರವಾನಿಸಿದರು.

ಕೆಪಿಸಿಸಿ ನೂತನ ಅಧ್ಯಕ್ಷ, ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಬೆಂಗಳೂರಿನಲ್ಲಿ ಇದೇ 14 ರಂದು ಆಯೋಜಿಸಲಾಗಿದೆ. ರಾಜ್ಯದ ಎಲ್ಲ ಗ್ರಾ.ಪಂ, ನಗರ ಸ್ಥಳೀಯ ಸಂಸ್ಥೆಗಳು ಸೇರಿ 7800 ಕಡೆಗಳಲ್ಲಿ ಎಲ್ ಇಡಿ ಪರದೆಗಳ ಮೇಲೆ ಪದಗ್ರಹಣ ಕಾರ್ಯಕ್ರಮ ಏಕಕಾಲಕ್ಕೆ ವೀಕ್ಷಿಸಬಹುದಾಗಿದೆ. ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಸೇರಿ ಪದಗ್ರಹಣ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ವೀಕ್ಷಕ ಗುರುಶರಣ ಪಾಟೀಲ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವರಾಜ ಹಾಸನಕರ್, ಸದಸ್ಯ ಅಂಬಾದಾಸ ಕೋರೆ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವ್ಹಾಣ, ನಗರ ಘಟಕದ ಅಧ್ಯಕ್ಷ ಅಬ್ದುಲ್, ಪುರಸಭೆ ಸದಸ್ಯರಾದ ಬಸವರಾಜ ವಂಕೆ, ವಿಜಯಕುಮಾರ ರಾಜಭವನ, ಮಾಣಿಕಪ್ಪ ರೇಷ್ಮೆ, ತಾ.ಪಂ ಮಾಜಿ ಅಧ್ಯಕ್ಷ ಶಿವಕುಮಾರ ದೇಶಮುಖ, ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ವೈಜಿನಾಥ ಪಾಟೀಲ ಜ್ಯಾಂತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.