ADVERTISEMENT

ಬಸವಕಲ್ಯಾಣ–ನಾಂದೆಡ್ ಬಸ್ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 5:36 IST
Last Updated 26 ಡಿಸೆಂಬರ್ 2025, 5:36 IST

ಹುಲಸೂರ: ಕೆಕೆಆರ್‌ಟಿಸಿಯ ಬಸವಕಲ್ಯಾಣ–ನಾಂದೆಡ ನೇರ ಬಸ್‌ ಸೇವೆಯನ್ನು ಯಾವುದೇ ಖಚಿತ ಕಾರಣವಿಲ್ಲದೆ ಏಕಾಏಕಿ ಸ್ಥಗಿತಗೊಳಿಸಿದ್ದರಿಂದ ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮೂರು ವರ್ಷಗಳ ಹಿಂದೆ ಗಡಿಭಾಗದ ಜನರ ಅನುಕೂಲಕ್ಕಾಗಿ ಬಸವಕಲ್ಯಾಣ ಘಟಕದಿಂದ ಈ ಬಸ್‌ ಆರಂಭಿಸಲಾಗಿತ್ತು. ಬಸವಕಲ್ಯಾಣದಿಂದ ಹೊರಟು ಹುಲಸೂರು, ಜವಳಗಾ, ಸಾಯಗಾವ, ಮೇಹಕರ, ಅಳವಯಿ, ವಳಂಡಿ, ದೇವಣಿ, ಉದಗಿರಿ, ಅಹಮದಪುರ, ಲೋಹ ಮಾರ್ಗವಾಗಿ ಮಧ್ಯಾಹ್ನ ನಾಂದೆಡ ತಲುಪುತ್ತಿದ್ದ ಈ ಬಸ್‌, ಸಂಜೆ ಅದೇ ಮಾರ್ಗವಾಗಿ ವಾಪಸ್‌ ಬರುತ್ತಿತ್ತು.  

ಇತ್ತೀಚೆಗೆ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಬಸ್‌ ಸೇವೆ ಸ್ಥಗಿತಗೊಂಡಿರುವುದನ್ನು ಪ್ರಯಾಣಿಕರು ತೀವ್ರವಾಗಿ ಖಂಡಿಸಿದ್ದಾರೆ. ಪ್ರಯಾಣಿಕರ ಪರದಾಟವನ್ನು ಗಮನಿಸಿದ ಬೀದರ ಸಂಸದ ಸಗರ ಖಂಡ್ರೆ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗಾರ ಅವರು ದೂರವಾಣಿ ಮೂಲಕ ಸಾರಿಗೆ ಅಧಿಕಾರಿಗಳಿಗೆ ಬಸ್‌ ಪುನರಾರಂಭಿಸುವಂತೆ ಸೂಚಿಸಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮದ ಪ್ರಮುಖರಾದ ಗುಂಡಪ್ಪ ಗಂದಗೆ ಪ್ರಜಾವಾಣಿ ಗೆ ತಿಳಿಸಿದ್ದಾರೆ.

ADVERTISEMENT

ಈ ಕುರಿತು ಕೆಲ ಪ್ರಯಾಣಿಕರು ಹಿರಿಯ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಪರ್ಮಿಟ್ ಸೇರಿದಂತೆ ಇತರೆ ಕಾರಣಗಳನ್ನು ಮುಂದಿಟ್ಟು ‘ಯಾವುದೇ ಕಾರಣಕ್ಕೂ ಬಸ್‌ ಸೇವೆ ಪುನರಾರಂಭಿಸಲು ಸಾಧ್ಯವಿಲ್ಲ’ ಎಂದು ಉತ್ತರಿಸಿರುವುದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ. ತಕ್ಷಣ ಬಸ್‌ ಸೇವೆ ಪುನರಾರಂಭಿಸದಿದ್ದರೆ ರಸ್ತೆ ತಡೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.