
ಹುಲಸೂರ: ‘ಗಡಿನಾಡಿನ ಜನರಿಗೆ ಬೆಳಕಾಗಿದ್ದ ಹಾಗೂ ಬದುಕಿಗೆ ಶಿಸ್ತು–ಮೌಲ್ಯ ತುಂಬಿದವರು ಲಿಂ.ಬಸವಕುಮಾರ ಶಿವಯೋಗಿಗಳು’ ಎಂದು ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಲಿಂ.ಬಸವಕುಮಾರ ಶಿವಯೋಗಿಗಳ ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವ–ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಡೆದ ಷಟಸ್ಥಲ ಧ್ವಜಾರೋಹಣ ಹಾಗೂ ಮೆರವಣಿಗೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಉಲ್ಲೇಖವಾಗಿರುವ 770 ಶರಣರಲ್ಲಿ ಅಲ್ಲಮಪ್ರಭು ಹಾಗೂ ಲದ್ದೆಯ ಸೋಮಣ್ಣ ಶರಣರು, ಹುಲಸೂರಿನ ಬೀದಿಗಳಲ್ಲಿ ನಡೆದಾಡಿದ್ದಾರೆ. 4000 ವರ್ಷಗಳ ಇತಿಹಾಸವಿರುವ ಈ ನೆಲ ಲಿಂಗತತ್ವ ಮತ್ತು ಅಧ್ಯಾತ್ಮವನ್ನು ಮೈಗೂಡಿಸಿಕೊಂಡು ಧಾರ್ಮಿಕ ಪಥವಾಗಿದೆ. ಇಂತಹ ಪುಣ್ಯಭೂಮಿಯಲ್ಲಿ ಸುವರ್ಣ ಮಹೋತ್ಸವ ಆಚರಣೆ ನಮಗೆ ಹೆಮ್ಮೆಯಾಗಿದೆ’ ಎಂದು ಹೇಳಿದರು.
ಸಾಯಗಾಂವ ವಿರಕ್ತ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಪೂಜ್ಯರು ಕೇವಲ ಸಂತನಲ್ಲ. ಈ ಭಾಗದ ಜನರ ಬದುಕಿನ ದಾರಿ ತೋರಿದ ದೀಪ. ಜನಮನದಲ್ಲಿ ಅವರ ಹೆಸರು ಉಚ್ಚರಿಸಿದಾಗಲೇ ಭಕ್ತಿ ಕಣ್ಣೀರಾಗಿ ಹರಿದು ಬರುತ್ತಿದೆ. ಅದೇ ಈ ಸುವರ್ಣ ಮಹೋತ್ಸವದ ಸಾರ್ಥಕತೆ’ ಎಂದು ಹೇಳಿದರು.
ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಗೆ ಶಾಸಕ ಶರಣು ಸಲಗರ ಚಾಲನೆ ನೀಡಿ ಮಾತನಾಡಿ, ‘ಲಿಂ.ಬಸವಕುಮಾರ ಶಿವಯೋಗಿಗಳು ಗಡಿಭಾಗದ ಜನರ ಆತ್ಮಶಕ್ತಿ. ಸಂಕಷ್ಟದ ಸಮಯದಲ್ಲಿ ಅವರ ನಾಮಸ್ಮರಣೆ ಜನರಿಗೆ ಧೈರ್ಯ ನೀಡಿದೆ. ಕಳೆದ ವರ್ಷ ಅತಿವೃಷ್ಟಿಯಿಂದ ಕಂಗೆಟ್ಟ ರೈತರು ಹಾಗೂ ಜನಸಾಮಾನ್ಯರು ಪೂಜ್ಯರ ಕೃಪೆಯಿಂದ ಮತ್ತೆ ನಿಂತುಕೊಳ್ಳುವ ಶಕ್ತಿ ಪಡೆದಿದ್ದಾರೆ. ಮುಂದಿನ ದಿನಗಳಲ್ಲೂ ಅವರ ಆಶೀರ್ವಾದ ರಾಜ್ಯವನ್ನು ರಕ್ಷಿಸಲಿ’ ಎಂದರು.
ಮೊದಲು ಗುರುಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ನಡೆದ ಷಟಸ್ಥಲ ಧ್ವಜಾರೋಹಣವನ್ನು ಹಿರಿಯ ನಾಗರಿಕ ಶ್ರೀಮಂತರಾವ ಜಾನಬಾ ನೆರವೇರಿಸಿದರು.
ಪಟ್ಟಣದ ಬೀದಿಗಳು ಭಕ್ತಿಯ ದೀಪಗಳಾಗಿ ರೂಪುಗೊಂಡಿದ್ದವು. ಜಾತಿ–ಧರ್ಮಗಳ ಭೇದವಿಲ್ಲದೆ ಭಕ್ತರು ತಮ್ಮ ಮನೆಗಳ ಮುಂದೆ ರಂಗೋಲಿ ಬಿಡಿಸಿ, ಲಿಂ. ಬಸವಕುಮಾರ ಶಿವಯೋಗಿಗಳ ಭಾವಚಿತ್ರ ಸ್ಥಾಪಿಸಿ ಪೂಜೆ ಸಲ್ಲಿಸಿದರು.
ಗುರು ಬಸವೇಶ್ವರ ಪ್ರೌಢಶಾಲೆಯ ಆವರಣದಿಂದ ಆಲಂಕರಿಸಿದ ರಥದಲ್ಲಿ ಪೂಜ್ಯರ ಪ್ರತಿಮೆ ಹಾಗೂ ವಚನ ಸಾಹಿತ್ಯದೊಂದಿಗೆ ಮೆರವಣಿಗೆ ಆರಂಭವಾಯಿತು. ಅಲ್ಲಮಪ್ರಭು ಶೂನ್ಯಪೀಠ ಅನುಭವ ಮಂಟಪದವರೆಗೆ ನಡೆದ ಈ ಪಯಣದಲ್ಲಿ ಅಘೋರಿ ನೃತ್ಯ, ಗೊಂಬೆ ವೇಷಧಾರಿಗಳ ನೃತ್ಯ, ಕೋಲಾಟ, ಡೊಳ್ಳು ಕುಣಿತ, ವೀರಗಾಸೆ ನೃತ್ಯಗಳು ಭಕ್ತಿಯ ಜ್ವರವನ್ನು ಹೆಚ್ಚಿಸಿದವು. ಡಿಜೆ ಹಾಡುಗಳಿಗೆ ಯುವಕರ ಹೆಜ್ಜೆಗಳು ಪುಜ್ಯರ ಸ್ಮರಣೆಯಲ್ಲೇ ಲಯಗೊಂಡವು.
ಗುರು ಬಸವೇಶ್ವರ ವಿರಕ್ತ ಮಠ ಸಾಯಗಾಂವದ ಶಿವಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಮೆರವಣಿಗೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ದೀಪಾರಾಣಿ ಧರ್ಮೇಂದ್ರ ಭೋಸ್ಲೆ ವಹಿಸಿದ್ದರು. ಉಪಾಧ್ಯಕ್ಷೆ ಮೀರಾಬಾಯಿ ರಣಜೀತ ಗಾಯಕವಾಡ ಉಪಸ್ಥಿತರಿದ್ದರು. ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಬಿ. ಪಾಟೀಲ ಭಾಗವಹಿಸಿ ಭಕ್ತಿಭಾವಕ್ಕೆ ಸಾಕ್ಷಿಯಾದರು.
ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ ಹಳೆ ಬಸವೇಶ್ವರ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಇದು ಪೂಜ್ಯರ ಮಾನವಸೇವೆಯ ಸಂದೇಶಕ್ಕೆ ನೈಜ ನಮನವಾಗಿದೆ.
ಜಿ.ಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಜಿ.ಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷೆ ಲತಾ ಹಾರಕುಡೆ, ಶರಣ ಸಾಹಿತ್ಯ, ವಚನ ಸಾಹಿತ್ಯ, ಜಾನಪದ ಸಾಹಿತ್ಯ ಪರಿಷತ್‌ಗಳ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಹರಿದು ಬಂದ ಸಾವಿರಾರು ಭಕ್ತರು ಈ ಭಕ್ತಿಸಾಗರದಲ್ಲಿ ಒಂದಾದರು. ರಾಜಪ್ಪ ಹೊನ್ನಾಡೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.