ADVERTISEMENT

ವಚನಗಳಿಂದ ಸದೃಢ ಸಮಾಜ ನಿರ್ಮಾಣ: ಸಾಹಿತಿ ರಮೇಶ್ ಮಠಪತಿ

ಮುಸ್ತಾಪುರದಲ್ಲಿ ವಚನ ವಿಜಯೋತ್ಸವ; ಪ್ರಭುದೇವ ಸ್ವಾಮೀಜಿಯಿಂದ 770 ಪ್ರವಚನಗಳ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:43 IST
Last Updated 23 ಜನವರಿ 2026, 8:43 IST
ಹುಲಸೂರ ತಾಲ್ಲೂಕಿನ ಮುಸ್ತಾಪುರ ಗ್ರಾಮದಲ್ಲಿ ವಚನ ವಿಜಯೋತ್ಸವ ನಿಮಿತ್ತ ಗ್ರಾಮಸ್ಥರು ಹಾಗೂ ಮಹಿಳೆಯರು ವಚನ ಸಾಹಿತ್ಯದ ಹೊತ್ತಿಗೆಗಳನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ನಡೆಸಿದರು
ಹುಲಸೂರ ತಾಲ್ಲೂಕಿನ ಮುಸ್ತಾಪುರ ಗ್ರಾಮದಲ್ಲಿ ವಚನ ವಿಜಯೋತ್ಸವ ನಿಮಿತ್ತ ಗ್ರಾಮಸ್ಥರು ಹಾಗೂ ಮಹಿಳೆಯರು ವಚನ ಸಾಹಿತ್ಯದ ಹೊತ್ತಿಗೆಗಳನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ನಡೆಸಿದರು   

ಹುಲಸೂರ: ತಾಲ್ಲೂಕಿನ ಮುಸ್ತಾಪುರ ಗ್ರಾಮದಲ್ಲಿ ಐದು ದಿನಗಳ ವಚನ ಜೀವನ ಪ್ರವಚನ ಹಾಗೂ ವಚನ ವಿಜಯೋತ್ಸವವನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ರಮೇಶ್ ಮಠಪತಿ, ‘ಹಳ್ಳಿಗಳಲ್ಲಿಯೇ ಪಂಚರಾತ್ರಿಯಂತೆ ಪ್ರವಚನಗಳನ್ನು ನಡೆಸುತ್ತ ಇಷ್ಟಲಿಂಗ ದೀಕ್ಷೆ ನೀಡುವ ಮೂಲಕ ವಚನಗಳ ಮಹತ್ವ ಸಾರುತ್ತಿರುವ ಪ್ರಭುದೇವ ಸ್ವಾಮೀಜಿ ಅವರ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ’ ಎಂದು ಹೇಳಿದರು.

‘ಕೇವಲ 60 ಮನೆಗಳಿರುವ ಅತಿ ಚಿಕ್ಕ ಗ್ರಾಮದಲ್ಲಿಯೂ ಐದು ದಿನಗಳ ಕಾಲ ಪ್ರವಚನಗಳನ್ನು ನಡೆಸಿರುವುದು ಅಪರೂಪದ ಸಾಧನೆ. ಜಾತಿ–ಮತ–ಪಂಥ, ಬಡವ–ಬಲ್ಲಿದ, ದೊಡ್ಡಊರು–ಚಿಕ್ಕಊರು ಎಂಬ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬರ ಮನದಾಳದಲ್ಲಿ ವಚನ ಬಿತ್ತುವ ಕಾರ್ಯ ಶ್ಲಾಘನೀಯ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಣಿಕಪ್ಪ ಗೋರನಾಳೆ, ‘ಇಂದಿನ ಮಾನವ ಭೌತಿಕ ಸಂಪತ್ತಿಗಿಂತ ಮಾನಸಿಕ ನೆಮ್ಮದಿಯ ಕೊರತೆಯಿಂದ ಬಳಲುತ್ತಿದ್ದಾನೆ. ಧರ್ಮಮಾರ್ಗದಲ್ಲಿ ನಡೆಯದಿರುವುದೇ ಇದಕ್ಕೆ ಕಾರಣ. ಇಷ್ಟಲಿಂಗಕ್ಕೆ ಮಹತ್ವ ನೀಡಿದರೆ ಮಾನಸಿಕ ಶಾಂತಿ ಲಭಿಸುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚನ್ನಬಸಪ್ಪ ಪತಂಗೆ, ‘ಅಂತರಂಗ ಹಾಗೂ ಬಹಿರಂಗ ಶುದ್ಧತೆಗೆ ಬಸವಣ್ಣನವರ ಸಪ್ತಸೂತ್ರದ ವಚನದಂತೆ ಬದುಕಬೇಕು. ಮಕ್ಕಳಲ್ಲಿ ವಚನ ಓದುವ ಹವ್ಯಾಸ ಬೆಳೆಸಲು ಪಾಲಕರು ಮುಂದಾಗಬೇಕು’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಲಿಂಗಾಯತ ಮಹಾಮಠದ ಪೀಠಾಧಿಪತಿ ಪ್ರಭುದೇವ ಸ್ವಾಮೀಜಿ, ‘ಜೀವನ ಅಶಾಶ್ವತವಾದುದರಿಂದ ಶಕ್ತಿ ಇರುವುದರಲ್ಲೇ ಲಿಂಗಪೂಜೆ, ಜಂಗಮಸೇವೆ ಮಾಡಬೇಕು. ಅರಿವು ಮೂಡಿಸುವ ಗುರುವಿನ ಗರಡಿಯಲ್ಲಿ ಪಳಗುವುದು ಅಗತ್ಯ’ ಎಂದರು.

‘ಲಿಂ. ಅಕ್ಕ ಅನ್ನಪೂರ್ಣತಾಯಿ ಅವರ ಸಂಕಲ್ಪದಂತೆ ನಾಡಿನಾದ್ಯಂತ ವಚನ ವಿಜಯೋತ್ಸವ ಆಚರಿಸಲಾಗುತ್ತಿದೆ. 770 ಪ್ರವಚನಗಳ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿ ಗ್ರಾಮದಲ್ಲಿ ಕನಿಷ್ಠ ಐದು ದಿನಗಳ ಪ್ರವಚನ, ದುಶ್ಚಟ ತ್ಯಾಗ, ಇಷ್ಟಲಿಂಗ ದೀಕ್ಷೆ ಹಾಗೂ ವಚನ ಸಾಹಿತ್ಯ ಮೆರವಣಿಗೆಯ ಮೂಲಕ ವಚನಗಳ ಮಹತ್ವ ಸಾರಲಾಗುತ್ತಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೋರ್ಟಾ ಗ್ರಾಮದ ನೀಲಮ್ಮನ ಬಳಗದ ಅಧ್ಯಕ್ಷೆ ವಿಜಯಲಕ್ಷ್ಮಿ ರಾಜೋಳೆ, ಧನ್ನೂರ ಕೆ. ಗ್ರಾಮದ ನೀಲಮ್ಮನ ಬಳಗದ ಅಧ್ಯಕ್ಷೆ ಸಂಗೀತಾ ಬಿರಾದಾರ, ಲಿಂಗಾಯತ ಸೇವಾದಳದ ಅಧ್ಯಕ್ಷ ಸುಪ್ರೀತ ಪತಂಗೆ, ಶರಣೆ ಗೋದಾವರಿ ತಾಯಿ, ಗ್ರಾಮದ ಹಿರಿಯರಾದ ದಯಾನಂದ ಪಾಟೀಲ, ಮಾರುತಿ ಪಾಟೀಲ, ರೇವಣಪ್ಪ ಪಾಟೀಲ, ಪ್ರಕಾಶ ಪಾಟೀಲ, ಲಹು ಜ್ಯಾಮದಾರ, ಬಾಲಾಜಿ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜ್ವಲ ಪತಂಗೆ ಕಾರ್ಯಕ್ರಮ ನಿರೂಪಿಸಿದರು. ವಚನ ವಿಜಯೋತ್ಸವದ ಅಂಗವಾಗಿ ಗ್ರಾಮಸ್ಥರು, ಮಕ್ಕಳು ಹಾಗೂ ತಾಯಂದಿರು ತಲೆಮೇಲೆ ವಚನಗ್ರಂಥ ಹೊತ್ತು ಭಕ್ತಿಭಾವದಿಂದ ಮೆರವಣಿಗೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.