
ಹುಲಸೂರ: ದೇವರು ಸರ್ವಾಂತರ್ಯಾಮಿ ಹಾಗೂ ಸರ್ವಶಕ್ತ. ಪರಮಾತ್ಮನನ್ನು ಅರಿಯಬೇಕಾದರೆ ಮಾನವನ ಮನಸ್ಸು ನಿರ್ಮಲವಾಗಿರಬೇಕು. ತಿಳಿಯಾದ ನೀರಿನಲ್ಲಿ ಮುಖ ಪ್ರತಿಬಿಂಬಿಸುವಂತೆ, ಶುದ್ಧ ಮನಸ್ಸಿನಲ್ಲಿ ಮಾತ್ರ ದೇವಭಾವ ನೆಲೆಸುತ್ತದೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಗೋರಟಾ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಆಯೋಜಿಸಿದ್ದ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
‘ಮಾನವನ ನಿಜವಾದ ಶೃಂಗಾರ ಭೌತಿಕ ಆಭರಣಗಳಲ್ಲಿಲ್ಲ, ಅದು ಶರಣರ ಸಂಗದಲ್ಲಿದೆ. ಕಣ್ಣುಗಳಿಂದ ಗುರು–ಹಿರಿಯರನ್ನು ನೋಡುವುದು, ಕಿವಿಗಳಿಂದ ಶರಣರ ಅನುಭವದ ವಚನಗಳನ್ನು ಕೇಳುವುದು, ಕೈಗಳಿಂದ ಸತ್ಪಾತ್ರಕ್ಕೆ ದಾಸೋಹ ಮಾಡುವುದು, ಕಾಲುಗಳಿಂದ ಸತ್ಯದ ದಾರಿಯಲ್ಲಿ ನಡೆಯುವುದೇ ಜೀವನದ ನಿಜವಾದ ಶೃಂಗಾರ’ ಎಂದರು.
ಪರುಷಕಟ್ಟೆ ಚನ್ನಬಸವಣ್ಣ ಮಾತನಾಡಿ, ‘ಜೀವನ ಪಾವನವಾಗಬೇಕಾದರೆ ಮನಸ್ಸು ಹೇಳಿದಂತೆ ನಾವು ನಡೆಯಬಾರದು, ನಾವು ಹೇಳಿದಂತೆ ಮನಸ್ಸು ನಡೆಯಬೇಕು. ಹೊಗಳಿಕೆಗೆ ಮನಸ್ಸು ಹಿಗ್ಗಿ ಅಹಂಕಾರ ಹೆಚ್ಚುತ್ತದೆ. ಸತ್ಯವನ್ನು ವಿರೋಧಿಸುವ ಸ್ವಭಾವವೇ ಮನಸ್ಸಿನ ದೌರ್ಬಲ್ಯವಾಗಿದ್ದು, ಅದನ್ನು ನಿಯಂತ್ರಿಸಿದಾಗ ಮಾತ್ರ ಆತ್ಮೋನ್ನತಿ ಸಾಧ್ಯ’ ಎಂದರು.
ಓಂಕಾರ ಬಿರಾದಾರ ಉದ್ಘಾಟಿಸಿದರು. ಜೈಕುಮಾರ ಬಿರಾದಾರ ಧ್ವಜಾರೋಹಣ ನೆರವೇರಿಸಿದರು. ಧನ್ನುರಾ (ಕೆ) ಗ್ರಾಮದ ನೀಲಮ್ಮನ ಬಳಗದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶರಣೆ ಸಂಗೀತಾ ಶಿಖರೇಶ್ವರ ಬಿರಾದಾರ ಹಾಗೂ ಬಳಗದ ಸದಸ್ಯರನ್ನು ಸನ್ಮಾನಿಸಲಾಯಿತು.
ಶರಣ ರಾಜಕುಮಾರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವಿಜಯಲಕ್ಷ್ಮಿ ರಾಜೋಳೆ, ಗಂಗಮ್ಮ ಚಂದ್ರಶೇಖರ ಜಗಶೆಟ್ಟೆ, ನೀಲಾವತಿ ದತ್ತಾತ್ರಿ ಜಗಶೆಟ್ಟಿ ,ಗೋದಾವರಿ ರಾಜೋಳೆ, ಬಾಬುರಾವ ರಾಜೋಳೆ, ಚಂದ್ರಕಾಂತ ಕಣಜೆ, ಸುಭಾಶ ಪತಂಗೆ, ಶಿವರಾಜ ಕನಕಟ್ಟೆ, ಶ್ರೀಮಂತಪ್ಪ ರಾಜೇಶ್ವರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.