
ಹುಲಸೂರ: ‘ಮಾನವನ ಬದುಕು ಸಂಪತ್ತಿನಿಂದ ಕೂಡಿದ್ದರೂ ಶಾಂತಿ ಇಲ್ಲದಂತಾಗಿದೆ. ಸಿರಿ ಸಂಪದ ಗಳಿಸಲು ಉಳಿಸಲು ಮತ್ತು ಕುಡಿಯಲು ಸೇದಲು ಬೇಕಾದಷ್ಟು ಸಮಯವಿದೆ. ಆದರೆ ಆಧ್ಯಾತ್ಮ ಸಾಧನೆಗೆ ಮತ್ತು ಭಗವಂತನ ಸ್ಮರಣೆಗೆ ಮಾತ್ರ ಸಮಯ ಇಲ್ಲದಂತಾಗಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮೇಹಕರ ಕಟ್ಟಿಮನಿ ಹಿರೇಮಠದ ಸಭಾಂಗಣದಲ್ಲಿ ಬುಧವಾರ ತಮ್ಮ 35ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಭೌತಿಕ ಜೀವನ ಸಮೃದ್ಧಗೊಂಡರೆ ಸಾಲದು. ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕಾಗಿದೆ. ಸತ್ಯ ಸುಂದರ ಸಂಸ್ಕೃತಿಯ ಅರಿವಿನಿಂದ ಮನುಷ್ಯನ ಬದುಕು ಬಲಗೊಳ್ಳಬೇಕು. ಸಕಲ ಜೀವಾತ್ಮರಿಗೂ ಒಳಿತನ್ನು ಬಯಸಿದ ವೀರಶೈವ ಧರ್ಮ ಉಗಮ, ಉತ್ಥಾನ, ಪುನರುತ್ಥಾನ ಮತ್ತು ಜಾಗೃತಿ ಎಂದು ನಾಲ್ಕು ಹಂತಗಳಲ್ಲಿ ಬೆಳೆದು ಬಂದಿರುವುದನ್ನು ಮರೆಯಬಾರದು. ಮಾನವೀಯ ಸಂಬಂಧಗಳನ್ನು ಬೆಳೆಸುವ ಶಕ್ತಿ ಧರ್ಮಕ್ಕಿದೆ ಎಂದು ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ’ ಎಂದರು.
ನೇತೃತ್ವ ವಹಿಸಿದ್ದ ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಬೆಂಕಿಯಲ್ಲಿ ಸುಡುತ್ತಿದ್ದರೂ ಚಿನ್ನ ಕಪ್ಪಾಗದೇ ಹೊಳೆಯುತ್ತದೆ. ಸಜ್ಜನರ ಸತ್ಪುರುಷರ ಬಾಳು ಸಹ ಹಾಗೆಯೇ. ಒಳ್ಳೆಯವರನ್ನು ನಿಂದಿಸುವವರು ಆಗಸಕ್ಕೆ ಉಗುಳಿದಂತೆ ನಿಷ್ಪಲವಾಗುತ್ತದೆ. ಅರ್ಥವಿಲ್ಲದ ಬದುಕು ಆಚರಣೆ ಇಲ್ಲದ ಜೀವನ, ಹೃದಯ ಸಾಮರಸ್ಯ ಇಲ್ಲದ ನಡೆ ಮನುಷ್ಯನಲ್ಲಿ ಇರಬಾರದು’ ಎಂದರು.
ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಧರ್ಮ ಸಮಾರಂಭ ಉದ್ಘಾಟಿಸಿದರು. ಶ್ರೀನಿವಾಸ ಸರಡಗಿಯ ರೇವಣಸಿದ್ದೇಶ್ವರ ಶಿವಾಚಾರ್ಯರು, ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯರು, ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯರು, ಹಲಬುರ್ಗಾ ಹಾವಗಿ ಲಿಂಗೇಶ್ವರ ಶಿವಾಚಾರ್ಯರು, ಮಾದನ ಹಿಪ್ಪರಗಿ ಶಾಂತವೀರ ಶಿವಾಚಾರ್ಯರು ಸೇರಿದಂತೆ ವಿವಿಧ 25ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡು ಗೌರವ ಸಲ್ಲಿಸಿದರು. ಸಮಾರಂಭದಲ್ಲಿ ಗೋರ್ಟಾದ ರೇವಣಸಿದ್ದಯ್ಯ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಪೀಠಾರೋಹಣ ವರ್ಧಂತಿ ಅಂಗವಾಗಿ 35 ದೀಪಗಳನ್ನು ಪ್ರಜ್ವಲಿಸಲಾಯಿತು.
ಪ್ರಶಸ್ತಿ ಪ್ರದಾನ: ಬೀದರ್‌ನ ಬಿ.ಎಸ್.ಕುದುರೆ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ, ಗಣಪತರಾವ್ ಖೂಬಾ ಅವರಿಗೆ ಸಾಧನಾ ಸಹ್ಯಾದ್ರಿ ಪ್ರಶಸ್ತಿ, ಶಿವಶರಣಪ್ಪ ವಾಲಿ ಅವರಿಗೆ ಸುದ್ದಿ ಸುಧಾಕರ ಪ್ರಶಸ್ತಿ, ಜಮೀರಾಬಾದನ ಅಲ್ಲಾಡಿ ವೀರೇಶಂ ಅವರಿಗೆ ದಾನ ವಿಶಾರದ ಪ್ರಶಸ್ತಿ, ಕಲಬುರಗಿಯ ಶಿವಶರಣಪ್ಪ ಸಿರಿ ಇವರಿಗೆ ಗುರುಭಕ್ತಿ ಶಿರೋಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಸವಕಲ್ಯಾಣದ ರಾಜಶ್ರೀ ದಿಲೀಪಸ್ವಾಮಿ ಭಕ್ತಿ ಗೀತೆ ಹಾಡಿದರು. ತ್ರಿಪುರಾಂತಕ ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸ್ವಾಗತಿಸಿದರು. ಮೆಹಕರ ಸಿದ್ದವೀರಸ್ವಾಮಿ ರೇವಣಸಿದ್ದಯ್ಯ ಹಿರೇಮಠ ಹಾಗೂ ಬಸವಕಲ್ಯಾಣದ ರಮೇಶ ರಾಜೋಳೆ ನಿರೂಪಿಸಿದರು.
ವರ್ಧಂತಿ ನಿಮಿತ್ತ ರಂಭಾಪುರಿ ಶ್ರೀ ಮಂಗಲ ಸ್ನಾನ ಪೂರೈಸಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ನಂತರ ಗ್ರಾಮದ ಹನುಮಾನ್ ದೇವಸ್ಥಾನದಿಂದ ಮೇಹಕರ ಹಿರೇಮಠದವರೆಗೆ ಶ್ರೀಗಳ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಕುಂಭ ಹೊತ್ತ , ಆರತಿ ಹಿಡಿದ ಸುಮಂಗಲೆಯರು, ಮಹಿಳಾ ಭಜನಾ ಮಂಡಳಿ ಇನ್ನಿತರ ಕಲಾ ತಂಡಗಳು ಪಾಲ್ಗೊಂಡು ಉತ್ಸವಕ್ಕೆ ಮೆರುಗು ತಂದವು.
ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಮೆಹಕರ ಗ್ರಾಮದಲ್ಲಿ ಬುಧವಾರ ಕಟ್ಟಿಮನಿ ಹಿರೇಮಠದ ಸಭಾಂಗಣದಲ್ಲಿ ತಮ್ಮ 35ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ರಂಭಾಪುರಿ ಶ್ರೀ ಆಶೀರ್ವಚನ ನೀಡಿದರು.
ಪೋಟೋ ಶೀರ್ಷಿಕೆ: ಮೆಹಕರ ಹಿರೇಮಠದ ಸಭಾಂಗಣದಲ್ಲಿ ತಮ್ಮ 35ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಶ್ರೀಗಳ ಅಡ್ಡಪ
ಲ್ಲಕ್ಕಿ ಮಹೋತ್ಸವ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.