ADVERTISEMENT

ಹುಮನಾಬಾದ್ ಅಭಿವೃದ್ಧಿಗೆ ₹10 ಕೋಟಿ: ಡಾ.‌ಸಿದ್ದಲಿಂಗಪ್ಪ ಪಾಟೀಲ

ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 4:37 IST
Last Updated 22 ಸೆಪ್ಟೆಂಬರ್ 2025, 4:37 IST
ಹುಮನಾಬಾದ್ ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಡಾ ಸಿದ್ದಲಿಂಗಪ್ಪ ಪಾಟೀಲ ಮಾತನಾಡಿದರು
ಹುಮನಾಬಾದ್ ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಡಾ ಸಿದ್ದಲಿಂಗಪ್ಪ ಪಾಟೀಲ ಮಾತನಾಡಿದರು   

ಹುಮನಾಬಾದ್: ‘ಪಟ್ಟಣದಲ್ಲಿನ ಪ್ರಮುಖ ರಸ್ತೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹10 ಕೋಟಿ ಅನುದಾನ ನೀಡುತ್ತೇನೆ’ ಎಂದು ಶಾಸಕ ಡಾ.‌ಸಿದ್ದಲಿಂಗಪ್ಪ ಪಾಟೀಲ ಹೇಳಿದರು.‌

ಪಟ್ಟಣದ ಪುರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ವರೆಗಿನ ರಸ್ತೆ, ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಹೀಗಾಗಿ ಪುರಸಭೆಯಿಂದ ಪ್ರಸ್ತಾವನೆ ನೀಡಿದರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನ ನೀಡುತ್ತೇನೆ’ ಎಂದು ಭರವಸೆ ನೀಡಿದರು.

‘ಹುಮನಾಬಾದ್ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಿಂದ ತಾಲ್ಲೂಕಿನ ಸಿಂಧನಕೇರಾ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗುತ್ತಿದೆ. ಯಾವ ಕಾರಣಕ್ಕಾಗಿ ಸರಿಯಾಗಿ ಕಸ ವಿಲೇವಾರಿ ಮಾಡುವುದಕ್ಕೆ ಆಗುತ್ತಿಲ್ಲ’ ಎಂದು ಶಾಸಕ ಹಾಗೂ ಪರಿಷತ್ ಸದಸ್ಯರು ಪ್ರಶ್ನಿಸಿದರು.

ಈ ಕುರಿತು ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.‌

ಪ್ರಕರಣ ದಾಖಲಿಸಿ: ‘ಪುರಸಭೆ ಸೇರಿದಂತೆ ಯಾರ ಅನುಮತಿ ಇಲ್ಲದೆ ಪಟ್ಟಣದಲ್ಲಿ ಏರಟೆಲ್ ಕಂಪನಿಯವರು ಸುಮಾರು 14 ಕಿಮೀ ಕ್ಕಿಂತಲೂ ಹೆಚ್ಚು ವೈರ್ ಹಾಕಿದ್ದಾರೆ. ಪಟ್ಟಣದಲ್ಲಿ ನಡೆಯುತ್ತಿರುವ ಅಮೃತ ಯೋಜನೆ ಕಾಮಗಾರಿಯ ಗುತ್ತಿಗೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ನೀರಿನ ಪೈಪ್‌ಲೈನ್‌ನಲ್ಲಿ ಈ ವೈರ್ ಹಾಕುತ್ತಿದ್ದಾರೆ ಹೀಗಾಗಿ ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ರಸ್ತೆಗಳನ್ನು ಅಗೆದು ವೈರ್ ಹಾಕಿರುವವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು’ ಎಂದು ಶಾಸಕ, ಪರಿಷತ್ ಸದಸ್ಯರು ಕಿಡಿಕಾರಿದರು

ಪುರಸಭೆ ಸದಸ್ಯ ವಿಜಯಕುಮಾರ್ ದುರ್ಗಾದ , ಸದಸ್ಯೆ ಭೀಮಬಾಯಿ ಭೀಮರೆಡ್ಡಿ ತಮ್ಮ ವಾರ್ಡ್‌ಗಳ ಸಮಸ್ಯೆ ಹೇಳಿಕೊಂಡರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಪಾರ್ವತಿ ಶೇರಿಕರ್, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಉಪಾಧ್ಯಕ್ಷ ಮುಕ್ರಂ ಜಾ, ಮುಖ್ಯಾಧಿಕಾರಿ ವನಿತಾಬಾಯಿ, ಸದಸ್ಯರಾದ ಅಫ್ಸರ್ ಮಿಯ್ಯಾ, ರಮೇಶ ಕಲ್ಲೂರ್, ಸುನೀಲ ಪಾಟೀಲ, ಬಾಷಿದ್, ವೀರೇಶ್ ಸೀಗಿ, ಸತ್ಯವತಿ ಮಠಪತಿ, ಧನಲಕ್ಷ್ಮಿ, ಅನೀಲ ಪಲ್ಲಹರಿ, ದತ್ತು ಪರೀಟ್ ಇದ್ದರು.‌

ಹುಮನಾಬಾದ್ ಚಿಟಗುಪ್ಪ ಹಳ್ಳಿಖೇಡ್ ಬಿ. ಪುರಸಭೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸಚಿವರ ಗಮನಕ್ಕೆ ತರಲಾಗುವುದು
ಡಾ. ಸಿದ್ದಲಿಂಗಪ್ಪ ಪಾಟೀಲ ಶಾಸಕ 
ಹುಮನಾಬಾದ್ ಕ್ಷೇತ್ರದ ಮೂರು ಪುರಸಭೆಯಲ್ಲಿ ಅಧಿಕಾರಿಗಳ ಮತ್ತು ಪೌರಕಾರ್ಮಿಕರ ಹುದ್ದೆಗಳು ಖಾಲಿ ಇವೆ. ಭರ್ತಿ ಮಾಡುವಂತೆ ಸಚಿವರ ಭೇಟಿ ಮಾಡಿ ಮನವಿ ಮಾಡಲಾಗುವುದು
ಭೀಮರಾವ್ ಪಾಟೀಲ ವಿಧಾನ ಪರಿಷತ್ ಸದಸ್ಯ
ಅಮೃತ ಯೋಜನೆ ಕಾಮಗಾರಿ ನಡೆದ ತಕ್ಷಣ ರಸ್ತೆಗಳನ್ನು ಮುಚ್ಚಬೇಕು.‌ ಬಹುತೇಕ ಕಡೆ ರಸ್ತೆ ಅಗಿದು ಬಿಟ್ಟಿದ್ದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ
ಪಾರ್ವತಿ ಶೇರಿಕರ್ ಪುರಸಭೆ ಅಧ್ಯಕ್ಷೆ 

‘ವರ್ಷದಿಂದ ಮೋಟಾರ್ ದುರಸ್ತಿ ಮಾಡಿಸಿಲ್ಲ ಏಕೆ’

ಹುಮನಾಬಾದ್ ಪಟ್ಟಣದಲ್ಲಿ ಪದೇ ಪದೇ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ.‌ ಪುರಸಭೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಪ್ರಶ್ನಿಸಿದರು. ಕಾರಂಜಾ ಜಲಾಶಯದ ಪಂಪ್‌ಸೆಟ್‌ನಲ್ಲಿ ಎಷ್ಟು ಮೋಟಾರ್ ಇವೆ‌ ಎಂದು ಶಾಸಕ ಡಾ ಸಿದ್ದಲಿಂಗಪ್ಪ ಪಾಟೀಲ ಕೇಳಿದಾಗ ಎಂಜಿನಿಯರ್ ವಾಜೀದ್ ಪ್ರತಿಕ್ರಿಯಿಸಿ ‘ಹುಡಗಿ ಪಂಪ್‌ಸೆಟ್‌ನಲ್ಲಿ 400 ಎಚ್.‌ಪಿ. ಮೋಟಾರ್ ಎರಡು ಇವೆ.‌ ಅದರಲ್ಲಿ ಒಂದು ಕೆಟ್ಟು ಹೋಗಿದೆ ಎಂದು ತಿಳಿಸಿದರು. ಇದಕ್ಕೆ ಭೀಮರಾವ್ ಪಾಟೀಲ ಪ್ರತಿಕ್ರಿಯಿಸಿ ‘ಪುರಸಭೆಯಲ್ಲಿ ಸಾಕಷ್ಟು ಅನುದಾನ ಇದೆ. ನಿಮ್ಮಿಂದಾಗಿ ಶಾಸಕರಿಗೆ ಮತ್ತು ನಮಗೆ ಕೆಟ್ಟ ಹೆಸರು ಬರುತ್ತಿದೆ. ಸಮಸ್ಯೆ ಬಗ್ಗೆ ಪುರಸಭೆಯ‌ ಎಲ್ಲ ಸದಸ್ಯರಿಗೂ ಗೊತ್ತಿದ್ದರೂ ಯಾರು ತಲೆಕೆಡಿಸಿಕೊಳ್ಳುವುದಿಲ್ಲ ಹೀಗಾದರೆ ಹೇಗೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.