ADVERTISEMENT

ಬೀದರ್: ಕೆಲಸ ಮಾಡದಿದ್ರೆ ಬೇರೆ ಕಡೆ ಹೋಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 15:50 IST
Last Updated 13 ಜುಲೈ 2020, 15:50 IST
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್   

ಬೀದರ್‌: ‘ರೋಗಿಯೊಬ್ಬರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮೂರು ಬಾರಿ ನಿಮಗೆ ಕರೆ ಮಾಡಿದ್ದೇನೆ. ನೀವು ನನ್ನ ಮೊಬೈಲ್‌ ಕರೆಗಳನ್ನೇ ಸ್ವೀಕರಿಸುತ್ತಿಲ್ಲ. ನಿಮಗೆ ಜಿಲ್ಲೆಯಲ್ಲಿ ಜನ ಸೇವೆ ಮಾಡುವ ಮನಸ್ಸು ಇಲ್ಲದಿದ್ದರೆ ಮೊದಲು ಬೇರೆ ಕಡೆಗೆ ಹೋಗಿ..’

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು ಚರ್ಚಿಸಲು ಕರೆದಿದ್ದ ಜನಪ್ರತಿನಿಧಿಗಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ತರಾಟೆಗೆ ತೆಗೆದುಕೊಂಡ ಪರಿ ಇದು.

‘ಜನ ಸೇವೆ ಮಾಡಲು ನಿಮಗೆ ಒಳ್ಳೆಯ ಅವಕಾಶ ದೊರೆತಿದೆ. ಅದನ್ನೇ ಸರಿಯಾಗಿ ಬಳಸಿಕೊಳ್ಳದಿದ್ದರೆ ಏನು ಪ್ರಯೋಜನ’ ಎಂದು ಡಿಎಚ್‌ಒ ಅವರನ್ನು ಪ್ರಶ್ನಿಸಿದರು.

ADVERTISEMENT

‘ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯರ ಬಗ್ಗೆ ನಿತ್ಯ ಅನೇಕ ದೂರುಗಳು ಬರುತ್ತಿವೆ. ಕೋವಿಡ್‌ ನಿಯಂತ್ರಣ ಕಮಿಟಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಅವರೂ ಡಿಎಚ್‌ಒ ಅವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ, ‘ಡಿಎಚ್‌ಒ ಅವರಿಗೆ ಮೊಬೈಲ್‌ ಸ್ವೀಕರಿಸದಂತಹ ಮಹಾರೋಗ ಇದೆ. ಅವರ ಪ್ರವೃತ್ತಿಯಿಂದ ಜಿಲ್ಲೆಯ ಜನರಿಗೆ ಉತ್ತಮ ಸೇವೆ ಕೊಡಲು ಸಾಧ್ಯವಾಗುತ್ತಿಲ್ಲ. ಡಿಎಚ್‌ಒ ಅವರು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸಲಾಗದಿದ್ದರೆ ಏನು ಪ್ರಯೋಜನ’ ಎಂದು ಹರಿಹಾಯ್ದರು.

ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ‘ಡಾ.ವಿ.ಜಿ.ರೆಡ್ಡಿ ಅವರಿಗೆ ನಾನು ಅನೇಕ ಸಾರಿ ಫೋನ್‌ ಮಾಡಿದರೂ ಸ್ಪಂದಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಕರೆಗಳನ್ನೇ ಸ್ವೀಕರಿಸದಿದ್ದರೆ ಶಾಸಕರ ಗತಿ ಏನು? ಪ್ರಭು ಚವಾಣ್‌ ಅವರು ಸರ್ಕಾರದಲ್ಲಿದ್ದರೂ ಜಿಲ್ಲೆಯ ಜನರ ಹಿತ ದೃಷ್ಟಿಯಿಂದ ಮುಚ್ಚು ಮರೆ ಇಲ್ಲದೆ ಮಾತನಾಡಿದ್ದಾರೆ. ಸಚಿವರು ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳದೆ, ಕೆಲಸ ಮಾಡದ ಅಧಿಕಾರಿಗೆ ಎಚ್ಚರಿಕೆ ನೀಡಿದ್ದು ಮೆಚ್ಚುವಂಥದ್ದಾಗಿದೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ‘ಡಿಎಚ್‌ಒ ಅವರು ಚುನಾಯಿತ ಪ್ರತಿನಿಧಿಗಳ ಕರೆಗಳನ್ನೇ ಸ್ವೀಕರಿಸುತ್ತಿಲ್ಲ. ಇನ್ನು ಜನಸಾಮಾನ್ಯರ ಗತಿ ಏನು ಎನ್ನುವುದು ಅರ್ಥವಾಗುತ್ತಿಲ್ಲ’ ಎಂದರು.

ಜಿಲ್ಲಾಧಿಕಾರಿ ರಾಮಚಂದ್ರನ್‌ ಮಾತನಾಡಿ, ‘ನಾನು ಈಚೆಗಷ್ಟೇ ಜಿಲ್ಲೆಗೆ ಬಂದಿದ್ದೇನೆ. ಆರೋಗ್ಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಹುತೇಕ ಮಟ್ಟಿಗೆ ತಿಳಿದುಕೊಂಡಿದ್ದೇನೆ. ಚುನಾಯಿತ ಪ್ರತಿನಿಧಿಗಳ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ಇಂದಿನಿಂದಲೇ ಕೋವಿಡ್‌ ಸೋಂಕಿನ ಮಾಹಿತಿ ಹಂಚಿಕೊಳ್ಳಲಾಗುವುದು. ಹೆಚ್ಚುವರಿ ಜಿಲ್ಲಾಧಿಕಾರಿ ಮಾಹಿತಿ ಅಪ್‌ಡೇಟ್‌ ಮಾಡಲಿದ್ದಾರೆ. ಇನ್ನು ನಾನೇ ಆರೋಗ್ಯ ಇಲಾಖೆ ಮೇಲುಸ್ತುವಾರಿ ಮಾಡುವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.