ಬೀದರ್: ‘ದಾಸೋಹ ಭಾವನೆಯಿದ್ದರೆ ಶಿವನೊಲುಮೆಗೆ ಪಾತ್ರರಾಗಬಹುದು’ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ನಡೆದ 171ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗುರು ಬಸವಣ್ಣನವರು ವಿನಯ, ಕಿಂಕರತೆ, ನಿರಹಂಕಾರಿಗಳಾಗಿದ್ದರು. ಸಕಲರಲ್ಲಿ ದೇವರನ್ನು ಕಂಡವರು. ‘ಸದುವಿನಯವೇ ಸದಾಶಿವನೊಲುಮೆ’ ಎನ್ನುವ ನುಡಿಮುತ್ತು ತಮ್ಮ ವಚನದಲ್ಲಿ ನಿರೂಪಿಸಿದ್ದಾರೆ. ಹಾಗೆ ವ್ಯಕ್ತಿಯು ಅಹಂಕಾರ, ಸ್ವಾರ್ಥದಿಂದ ದೂರವಿರದ್ದರೆ ಉನ್ನತ ಸ್ಥಾನಕ್ಕೆ ಹೋಗಬಹುದು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಶಿವಕುಮಾರ ವಿ. ಉಪ್ಪೆ ಉದ್ಘಾಟಿಸಿ, ಶರಣರ ಸಾಂಗತ್ಯದಲ್ಲಿದ್ದುಕೊಂಡು ಶರಣರ ವಚನಗಳಂತೆ ನಡೆದರೆ ಜೀವನದಲ್ಲಿ ಯಶಸ್ಸು ಖಚಿತ ಎಂದು ಹೇಳಿದರು.
ಬಸವಕಲ್ಯಾಣದ ಬಸವ ಮಹಾಮನೆ ಟ್ರಸ್ಟ್ ಅಧ್ಯಕ್ಷ ಸಿದ್ದರಾಮ ಶರಣರು ಬೆಲ್ದಾಳ ಮಾತನಾಡಿ, ತಾಂತ್ರಿಕ ಜಗತ್ತಿನಲ್ಲಿ ಮೊಬೈಲ್ ಸಂಸ್ಕೃತಿಯಿಂದ ಪುಸ್ತಕ ಅಧ್ಯಯನ ಕಡಿಮೆಯಾಗಿದೆ. ಮೊಬೈಲ್ ಸಂಸ್ಕೃತಿಗೆ ಮಕ್ಕಳು ಜೀವ ಕಳೆದುಕೊಳ್ಳುತ್ತಿದ್ದಾರೆ. ಶರಣರ ತತ್ವಾದರ್ಶಗಳ ಅಡಿಯಲ್ಲಿ ಜೀವನ ನಡೆಸಿದರೆ ಸಾರ್ಥಕವಾಗುತ್ತದೆ ಎಂದರು.
ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿ ರಾಧಿಕಾ ವಚನ ಚಿಂತನೆ ಮಾಡಿದರು. ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ. ಎಸ್.ಬಿ ಬಿರಾದರ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಉಮಾಕಾಂತ ಮೀಸೆ ಹಾಜರಿದ್ದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು ದೇಶಭಕ್ತಿಗೀತೆ ಹಾಡಿದರು. ಮಹಾನಂದ– ಸಂಗಮೇಶ ಶೆಟಕಾರ ಗುರು ಪೂಜೆ ನೆರವೆರಿಸಿದರು. ವಚನಶ್ರೀ ಮತ್ತು ಚನ್ನಬಸಪ್ಪ ನೌಬಾದೆ ವಚನ ಗಾಯನ ನಡೆಸಿಕೊಟ್ಟರು. ಕುಮಾರಿ ಶಿವಾನಿ ಸ್ವಾಗತಿಸಿದರೆ, ರೂಪಾಲಿ ನಿರೂಪಿದರು. ಅರ್ಪಿತಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.