ADVERTISEMENT

ಅಮಾನತ್ತಾದ ಅಧಿಕಾರಿ ಕ್ಷಮೆ | ಹಿಂಬಡ್ತಿ ನೀಡಿ ಅಮಾನತು ರದ್ದಿಗೆ ಶಿಫಾರಸು: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 15:28 IST
Last Updated 18 ಜುಲೈ 2025, 15:28 IST
<div class="paragraphs"><p>ಈಶ್ವರ ಖಂಡ್ರೆ</p></div>

ಈಶ್ವರ ಖಂಡ್ರೆ

   

– ‍ಪ್ರಜಾವಾಣಿ ಚಿತ್ರ

ಬೀದರ್: ‘ಎಚ್ಎಂಟಿ ವಶದಲ್ಲಿನ ಅರಣ್ಯ ಭೂಮಿಯ ಡಿನೋಟಿಫಿಕೇಶನ್ ಹಾಗೂ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ಸಿಬಿಐಗೆ ಪತ್ರ ಬರೆದು ಅಮಾನತುಗೊಂಡಿರುವ ಐಎಫ್ಎಸ್ ಅಧಿಕಾರಿ ಆರ್. ಗೋಕುಲ್ ತಪ್ಪೊಪ್ಪಿಕೊಂಡು ಬೇಷರತ್ ಕ್ಷಮೆ ಕೋರಿದ್ದು, ಅವರಿಗೆ ಸಿಸಿಎಫ್ ಹುದ್ದೆಗೆ ಹಿಂಬಡ್ತಿ ನೀಡಿ ಅಮಾನತು ರದ್ದುಪಡಿಸಲು ಶಿಫಾರಸು ಮಾಡಲಾಗಿದೆ’ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ADVERTISEMENT

ಆರ್. ಗೋಕುಲ್ ಅಮಾನತು ಅಧಿಕೃತಗೊಳಿಸಲು ಕೇಂದ್ರ ಹವಾಮಾನ ಮತ್ತು ಪರಿಸರ ಸಚಿವಾಲಯ ಒಪ್ಪದೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದು ತಮ್ಮ ಗಮನಕ್ಕೆ ಬಂದಿರಲಿಲ್ಲ. ಆದರೆ, ಅಮಾನತು ಮಾಡಿದ 15 ದಿನಗಳ ಒಳಗಾಗಿ ಸವಿವರವಾದ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಲ್ಲ ಎಂಬ ತಾಂತ್ರಿಕ ಕಾರಣದ ಮೇಲೆ ಅಮಾನತು ಅಧಿಕೃತಗೊಳಿಸಲು ಈ ಹಂತದಲ್ಲಿ ಪರಿಗಣಿಸಲು ಬರುವುದಿಲ್ಲ ಎಂದು ಕೇಂದ್ರ ಹವಾಮಾನ ಮತ್ತು ಪರಿಸರ ಸಚಿವಾಲಯ ಹೇಳಿದೆ ಎಂದು ಈಗ ತಿಳಿದು ಬಂದಿದೆ ಎಂದು ಶುಕ್ರವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿ ಸಿಬಿಐಗೆ ಪತ್ರ ಬರೆದಿದ್ದರ ತಪ್ಪು ಒಪ್ಪಿಕೊಂಡು ಬೇಷರತ್ ಕ್ಷಮೆ ಕೋರಿ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಮಾನತು ರದ್ದುಪಡಿಸುವಂತೆ ಶಿಫಾರಸು ಮಾಡಲಾಗಿದೆ. ಗೋಕುಲ್ ಮಾಡಿರುವ ಸರಣಿ ತಪ್ಪು-ಒಪ್ಪುಗಳ ಹಿನ್ನೆಲೆಯಲ್ಲಿ ಹಾಲಿ ಎಪಿಸಿಸಿಎಫ್ ಆಗಿರುವ ಅವರಿಗೆ ಸಿಸಿಎಫ್ ಆಗಿ ಹಿಂಬಡ್ತಿ ನೀಡಿ, ಅಮಾನತು ರದ್ದುಪಡಿಸುವ ಬಗ್ಗೆ ಕ್ರಮ ವಹಿಸಲು ಶಿಫಾರಸು ಮಾಡಿರುವುದಾಗಿ ಹೇಳಿದ್ದಾರೆ.

ಎಚ್ಎಂಟಿ ವಶದಲ್ಲಿರುವ ₹14,300 ಕೋಟಿ ಮೌಲ್ಯದ ಅರಣ್ಯ ಭೂಮಿ 7 ಕೋಟಿ ಕನ್ನಡಿಗರ ಆಸ್ತಿಯಾಗಿದೆ. ಅದನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಇನ್ನೂ ಅಲ್ಲಿ 280 ಎಕರೆ ಭೂಮಿ ಅರಣ್ಯ ಸ್ವರೂಪದಲ್ಲೇ ಇದೆ. ಆದರೆ, ಇದು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಗೋಕುಲ್ ಸುಪ್ರೀಂಕೋರ್ಟ್ ಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯಾಯಪೀಠ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.