ADVERTISEMENT

ಬಸವಕಲ್ಯಾಣ: ನಗರಸಭೆಯಿಂದ ಅಕ್ರಮ ಕಟ್ಟಡ ನೆಲಸಮ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 6:06 IST
Last Updated 5 ಆಗಸ್ಟ್ 2025, 6:06 IST
ಬಸವಕಲ್ಯಾಣದ ಸಸ್ತಾಪುರಬಂಗ್ಲಾ ಆಟೊನಗರದಲ್ಲಿ ಸೋಮವಾರ ನಗರಸಭೆಯ ಜೆಸಿಬಿ ಯಂತ್ರದಿಂದ ಅಕ್ರಮ ಕಟ್ಟಡದ ಕಂಬವನ್ನು ನೆಲಸಮಗೊಳಿಸಲಾಯಿತು
ಬಸವಕಲ್ಯಾಣದ ಸಸ್ತಾಪುರಬಂಗ್ಲಾ ಆಟೊನಗರದಲ್ಲಿ ಸೋಮವಾರ ನಗರಸಭೆಯ ಜೆಸಿಬಿ ಯಂತ್ರದಿಂದ ಅಕ್ರಮ ಕಟ್ಟಡದ ಕಂಬವನ್ನು ನೆಲಸಮಗೊಳಿಸಲಾಯಿತು   

ಬಸವಕಲ್ಯಾಣ: ನಗರದ ಸಸ್ತಾಪುರ ಬಂಗ್ಲಾ ಆಟೊ ನಗರದಲ್ಲಿನ ಸರ್ವೆ ನಂ. 115/2ರಲ್ಲಿ ನಿರ್ಮಿಸಿದ್ದ ಅಕ್ರಮ ಕಟ್ಟಡವನ್ನು ನಗರಸಭೆಯಿಂದ ಸೋಮವಾರ ನೆಲಸಮಗೊಳಿಸಲಾಯಿತು.

ಉದ್ಯಾನಕ್ಕಾಗಿ ಮೀಸಲಿಟ್ಟಿರುವ ಈ ಸ್ಥಳದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದರು. ಚಾವಣಿ ಹಾಕುವುದು ಮಾತ್ರ ಬಾಕಿಯಿತ್ತು. ನಗರಸಭೆ ಆಯುಕ್ತ ರಾಜೀವ ಬಣಕಾರ ಅವರು ಸಿಬ್ಬಂದಿಯೊಂದಿಗೆ ಬಂದು ಇಲ್ಲಿ ಕಟ್ಟಿರುವ ಗೋಡೆಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸಿದರು. ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಆಗಸ್ಟ್ 2ರಂದು ಪೌರಾಯುಕ್ತರು ಜಾಗ ತೆರವಿಗೆ ಸ್ಥಳಕ್ಕೆ ಹೋಗಿದ್ದಾಗ ಕೆಲವರು ಅಡ್ಡಿಪಡಿಸಿದ್ದರಿಂದ ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.

ಸಾಮಾನ್ಯರಿಗೆ ಸಂಕಟ: ನಗರದಲ್ಲಿನ ಕೆಲವರಿಗೆ ಸರ್ಕಾರಿ ಜಾಗ ಕಬಳಿಸುವ ಹಪಹಪಿಯಿದೆ. ಅದನ್ನು ಜನಸಾಮಾನ್ಯರಿಗೆ ಮಾರಾಟ ಮಾಡುವುದರಿಂದ ಅಂತಹವರು ಸಂಕಟ ಅನುಭವಿಸುವಂತಾಗಿದೆ. ಮನೆ ಮತ್ತು ಅಂಗಡಿಗಾಗಿ ಜಾಗ ಖರೀದಿಸುವಾಗ 40 ವರ್ಷದ ಹಿಂದಿನ ದಾಖಲೆಗಳನ್ನು ಪರಿಶೀಲಿಸಿ, ನಿವೇಶನ ಖರೀದಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ' ಎಂದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಶರಣು ಸಲಗರ ಅವರು ಸುದ್ದಿಗಾರಿಗೆ ತಿಳಿಸಿದರು.

ADVERTISEMENT

‘ಉದ್ಯಾನದ ಜಾಗ ತೆರವುಗೊಳಿಸಿರುವ ಪೌರಾಯುಕ್ತರ ಕ್ರಮ ಶ್ಲಾಘನೀಯವಾಗಿದೆ. ಈ ಜಮೀನು ₹ 5 ಕೋಟಿ ಮೌಲ್ಯದ್ದಾಗಿದೆ. 20 ಅಂಗಡಿಗಳನ್ನು ನಿರ್ಮಿಸಲಾಗಿತ್ತು. ಎಷ್ಟೇ ಪ್ರಭಾವಿ ವ್ಯಕ್ತಿಯಿದ್ದರೂ ಈ ರೀತಿಯ ಅತಿಕ್ರಮಣ ನಡೆಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ. ಸರ್ಕಾರ ಯಾವುದೇ ಇದ್ದರೂ ಇಂತಹದಕ್ಕೆ ಆಸ್ಪದ ನೀಡುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.