ಭಾಲ್ಕಿ ತಾಲ್ಲೂಕಿನ ವಾಂಝರಖೇಡಾ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳನ್ನು ಟ್ರಾಕ್ಟರ್ ಮೂಲಕ ಸಾಗಿಸುತ್ತಿರುವುದು
ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ವಾಂಝರಖೇಡಾ, ಹಲಸಿ ತೂಗಾಂವ, ಜಮಖಂಡಿ, ಮೆಹಕರ, ಅಂಬೆವಾಡಿ ಸೇರಿ ವಿವಿಧ ಗ್ರಾಮಗಳಲ್ಲಿ ಮರಳು ಅಕ್ರಮ ದಂಧೆ ಎಗ್ಗಿಲ್ಲದೆ ನಡೆದಿದೆ. ಮರಳು ತುಂಬಿದ ಟ್ರ್ಯಾಕ್ಟರ್‌ಗಳು ರಾಜಾರೋಷವಾಗಿ ಓಡಾಡುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್, ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಗ್ರಾ.ಪಂ ಪಿಡಿಒಗಳಿಗೂ ಅಕ್ರಮ ಮರಳು ಸಾಗಾಣಿಕೆ ಜಾಲದ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರವಿದೆ. ಆದರೆ ಅಕ್ರಮ ದಂಧೆಗೆ ಈವರೆಗೂ ಕಡಿವಾಣ ಹಾಕಿಲ್ಲ.
ಅಕ್ರಮವಾಗಿ ಮರಳು ಸಾಗಿಸುವ ಟ್ರ್ಯಾಕ್ಟರ್‌ಗಳಿಗೆ ನಂಬರ್ ಪ್ಲೇಟ್‌ಗಳಿಲ್ಲ. ಸಂಬಂಧಪಟ್ಟ ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಇಲಾಖೆ ಕಣ್ಮುಚ್ಚಿ ಕುಳಿತಿದೆಯೇ? ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿದೆ. ಈ ಸಂಬಂಧ ಅಧಿಕಾರಿಗಳಿಗೆ ಖಚಿತ ಮಾಹಿತಿ ನೀಡಿದರೂ ಕಾನೂನು ಕ್ರಮ ಜರುಗುತ್ತಿಲ್ಲ ಎಂಬುದು ಸ್ಥಳೀಯರು ದೂರಿದ್ದಾರೆ.
ಪಟ್ಟಣದ ರಸ್ತೆಗಳಲ್ಲಿ ಅತ್ಯಂತ ವೇಗವಾಗಿ ಚಲಿಸುವುದರಿಂದ ಪ್ರಯಾಣಿಕರಿಗೆ ಜೀವ ಭಯ ಉಂಟಾಗುತ್ತಿದೆ. ಟ್ರ್ಯಾಕ್ಟರ್‌ಗಳು ಸಂಚಾರದಿಂದ ನದಿ ಸಂಪರ್ಕ ಕಲ್ಪಿಸಿಕೊಡುವ ಬಹುತೇಕ ರಸ್ತೆಗಳು ಹಾಳಾಗಿವೆ. ಗ್ರಾಮದಲ್ಲಿ ನದಿ ಮೂಲಕ ಸಂಪರ್ಕ ಕಲ್ಪಿಸಿಕೊಟ್ಟ ನೀರಿನ ಕೊಳವೆಗಳು ಭಾರವಾದ ವಾಹನಗಳ ಸಂಚಾರದಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಹಗಲು-ರಾತ್ರಿ ಸಂಚರಿಸುತ್ತಿರುವ ಟ್ರ್ಯಾಕ್ಟರ್‌ಗಳ ಸದ್ದಿನಿಂದ ನದಿ ತೀರದ ಗ್ರಾಮಸ್ಥರ ನಿದ್ದೆಗೂ ಭಂಗ ಉಂಟಾಗಿದೆ.
ವಾಂಝರಖೇಡಾ ಗ್ರಾಮದ ಪಕ್ಕದಲ್ಲಿ ಹರಿಯುವ ಮಾಂಜ್ರಾ ನಡೆಯಿಂದ ರಾತ್ರಿಯಿಡೀ ಜೆಸಿಬಿ ಯಂತ್ರದ ಮೂಲಕ ಹಳ್ಳದ ಅಕ್ಕಪಕ್ಕದಲ್ಲಿ ಮರಳು ಸಂಗ್ರಹಿಸಿಟ್ಟು ದಿನವಿಡಿ ರಾಜಾರೋಷವಾಗಿ ಟ್ರ್ಯಾಕ್ಟರ್‌ಗಳಲ್ಲಿ ಸಾಗಾಣಿಕೆ ಮಾಡಲಾಗುತ್ತಿದೆ. ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ. ಆದರೆ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಥೇಚ್ಛವಾಗಿ ನದಿಯಲ್ಲಿ ಮರಳು ತೆಗೆಯುವುದರಿಂದ ಅಂತರ್ಜಲ ಕುಸಿಯುತ್ತದೆ. ಬೇಸಿಗೆಯಲ್ಲಿ ದನಕರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಲಿದೆ. ರೈತರಿಗೆ ತೊಂದರೆಯಾಗಲಿದೆ. ರೈತರು ಹಲವು ಬಾರಿ ಪೊಲೀಸರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಹಲಸಿ ತೂಗಾಂವ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಹೊರ ರಾಜ್ಯದವರು ಮಾಂಜ್ರಾ ನದಿಯ ಒಡಲು ಬಗೆಯುತ್ತಿದ್ದಾರೆ. ರಾಜ್ಯ ಸರ್ಕಾರ ಮರಳು ಅಕ್ರಮ ಸಾಗಾಣಿಕೆ ತಡೆಗೆ ಹೊಸ ಕಾಯಿದೆ ಜಾರಿಗೊಳಿಸಿದೆ. ಆದರೆ ಅಧಿಕಾರಿಗಳ ಅಪ್ರಾಮಾಣಿಕತೆಯಿಂದಾಗಿ ಮರಳು ಮಾಫಿಯಾಕ್ಕೆ ಕಡಿವಾಣ ಬಿದ್ದಿಲ್ಲ. ಅಕ್ರಮವಾಗಿ ಮರಳು ಸಂಗ್ರಹ, ಸಾಗಾಣಿಕೆ ಮಿತಿಮೀರಿದೆ. ಕೂಡಲೇ ಅಕ್ರಮವಾಗಿ ಮರಳು ಸಂಗ್ರಹಿಸಿದ ಸ್ಥಳ ಪರಿಶೀಲಿಸಬೇಕು. ಮರಳನ್ನು ಸರ್ಕಾರ ನಿಗದಿ ಪಡಿಸಿದ ದರದಲ್ಲಿಯೇ ಮಾರಾಟಕ್ಕೆ ಸೂಚನೆ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ದೂರು ನೀಡಿದರೂ ಕ್ರಮವಹಿಸದ ಅಧಿಕಾರಿಗಳು
ಭಾಲ್ಕಿ ತಾಲ್ಲೂಕಿನ ವಾಂಝರಖೇಡಾ ಗ್ರಾಮದ ಬಳಿಯ ಮಾಂಜ್ರಾ ನದಿಯಲ್ಲಿ ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಮರಳು ಸಾಗಾಣಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಸಂಬಂಧ ಗ್ರಾಮಸ್ಥರು, ಜಿಲ್ಲಾಧಿಕಾರಿ, ಹಿರಿಯ ಗಣಿ ಮತ್ತು ಭೂ ವಿಜ್ಞಾನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಶೀಲ್ದಾರ್, ಪಿಎಸ್ಐ ಅವರಿಗೆ ದೂರು ನೀಡಲಾಗಿದೆ. ಆದರೆ ಅಧಿಕಾರಿಗಳು ಈವರೆಗೆ ಕ್ರಮಕೈಗೊಂಡಿಲ್ಲ ಎಂದು ರೈತರಾದ ಸಿದ್ರಾಮ ಕಾಠೋನೆ, ರಾಹುಲ ಶ್ರೀಧರ ಬಗದುರೆ, ಶಿವಾಜಿ ಮದನುರೆ, ತುಕಾರಾಮ ಹುಲಸೂರೆ, ಲಖನ ಕೊಠಮಾಳೆ, ಸಚಿನ ತಡೋಳಗೆ, ರಾಜು ರೆಡ್ಡಿ, ಸಂಗಮೇಶ ಪಾಟೀಲ, ಮಚಿಂದ್ರಪ್ಪ ದೇಶಮುಖ, ವಿಲಾಸ ದುಮಾಳ, ಕೃಷ್ಣಾ ರೋಡೆ ಸೇರಿ ಹಲವು ದೂರುದಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಮರಳು ಅಕ್ರಮ ಸಾಗಾಣಿಕೆ ವಿಷಯ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಕ್ರಮ ಜರುಗಿಸಲಾಗುವುದುಮಲ್ಲಿಕಾರ್ಜುನ ವಡ್ಡನಕೇರಾ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.