ADVERTISEMENT

ಹುಮನಾಬಾದ್: ಮರಳು ಅಕ್ರಮ ಸಾಗಾಣಿಕೆಗಿಲ್ಲ ಕಡಿವಾಣ

ನಿಗದಿಗಿಂತ ಹೆಚ್ಚು ಮರಳು ತುಂಬುವ ವಾಹನಗಳು; ರಸ್ತೆ ಹಾಳು

ಪ್ರಜಾವಾಣಿ ವಿಶೇಷ
Published 3 ಜನವರಿ 2026, 6:16 IST
Last Updated 3 ಜನವರಿ 2026, 6:16 IST
ಹುಮನಾಬಾದ್ ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಮರಳು ತುಂಬಿದ ಲಾರಿ ನಿಂತಿರುವುದು
ಹುಮನಾಬಾದ್ ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಮರಳು ತುಂಬಿದ ಲಾರಿ ನಿಂತಿರುವುದು   

ಹುಮನಾಬಾದ್: ತಾಲ್ಲೂಕಿನಲ್ಲಿ ನಿಗದಿತ ತೂಕಕ್ಕಿಂತ ಹೆಚ್ಚಿನ ಸರಕು ಸಾಗಿಸುವ ಭಾರಿ ವಾಹನಗಳು ಸಾರ್ವಜನಿಕರಿಗೆ ತೊಂದರೆ ಮತ್ತು ಅಪಾಯಕ್ಕೆ ಕಾರಣವಾಗುತ್ತಿವೆ.

ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಒಳ ರಸ್ತೆ ಮತ್ತು ತಾಲ್ಲೂಕಿನ ಲಾಲಧರಿ ಮುಖಾಂತರ ಚಿಟಗುಪ್ಪ ಪಟ್ಟಣಕ್ಕೆ ಭಾರಿ ಪ್ರಮಾಣದ ಮರಳು ತುಂಬಿದ ಟ್ರಕ್‌ಗಳು ಸಂಚರಿಸುವುದು ಸಾಮಾನ್ಯವಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮರಳು ಸಾಗಿಸುವ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಸಾರಿಗೆ ಇಲಾಖೆ ನಿಯಮಗಳನ್ನು ಉಲ್ಲಂಘಿಸಿ ವಾಹನಗಳು ಗಣನೀಯವಾಗಿ ಹೆಚ್ಚಿನ ತೂಕವನ್ನು ಹೊರುತ್ತಿವೆ.

19ಟನ್ ಸಾಮರ್ಥ್ಯದ ಟಿಪ್ಪರ್ 35-40 ಟನ್ ಸರಕನ್ನು ಹೊರಬಹುದು. ಆದರೆ ಈ ಭಾರೀ ತೂಕವು ಟಿಪ್ಪರ್‌ನಿಂದ  ರಸ್ತೆಗಳನ್ನು ಹಾಳಾಗುವುದಲ್ಲದೆ ಚಾಲಕರ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡಿ ಅಪಘಾತಗಳ ಅಪಾಯ ಹೆಚ್ಚಿಸುತ್ತಿವೆ. ನಿಗದಿಗಿಂತಲೂ ಹೆಚ್ಚು ತುಂಬುವುದರಿಂದ ರಸ್ತೆಗಳ ಮೇಲೆ ಮರಳು ಚೆಲ್ಲುವುದರಿಂದ ದ್ವಿಚಕ್ರ ವಾಹನಗಳು ಜಾರಿ ಬೀಳುವ ಸಂಭವ ಇದೆ.

ADVERTISEMENT

ತಾಲ್ಲೂಕಿನಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ರಾತ್ರಿ ಪೂರ್ತಿ ಮರಳು ಅಕ್ರಮ ಸಾಗಾಟ ನಡೆಯುತ್ತದೆ. ಬೆಳಗಾಗುವಷ್ಟರಲ್ಲಿ ಏನೂ ಆಗೇ ಇಲ್ಲಿ ಎನ್ನುವಂತೆ ಪರಿಸ್ಥಿತಿ ನೆಲೆಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಕೃಪಾಶೀರ್ವಾದದಿಂದಲೇ ಅಕ್ರಮ ನಡೆಯುತ್ತಿದೆ ಎಂಬ ಅನುಮಾನ ಜನರದ್ದು.

ರಾತ್ರಿ ವೇಳೆ ಲಾರಿ ಮತ್ತು ಟ್ರ್ಯಾಕ್ಟರ್‌ಗಳ ಆರ್ಭಟ ಕಾಣಿಸುತ್ತದೆ. ಎಲ್ಲೆಂದರಲ್ಲಿ ಜನರಿಗೆ ಕಾಣುವ ಮರಳು ತುಂಬಿದ ಲಾರಿ ಮತ್ತು ಟ್ರಾಕ್ಟರ್‌ಗಳು ಅಧಿಕಾರಿಗಳ ಕಣ್ಣಿಗೆ ಏಕೆ ಬೀಳುವುದಿಲ್ಲ ಎಂಬ ಅಚ್ಚರಿಯ ಪ್ರಶ್ನೆ ಜನರದ್ದು.

ಸರಕು ಸಾಗಣೆಯ ಬಾರಿ ವಾಹನಗಳು ಬೇಕಾಬಿಟ್ಟಿಯಾಗಿ ಹೆಚ್ಚಿನ ಸರಕನ್ನು ಸಾಗಿಸುತ್ತವೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಜನರಿಗೆ ತೊಂದರೆಯಾಗುತ್ತಿದೆ ಎಂದು ದ್ವಿಚಕ್ರ ವಾಹನ ಸವಾರ ಕೈಲಾಸ ಮೇಟಿ ಬೇಸರ ವ್ಯಕ್ತಪಡಿಸಿದರು.

ಚಿಟಗುಪ್ಪದಲ್ಲೂ ಅಕ್ರಮ: ಚಿಟಗುಪ್ಪ ತಾಲ್ಲೂಕಿನಲ್ಲೂ ರಾಜಾರೋಷವಾಗಿ ಮರಳು ಅಕ್ರಮ ಸಾಗಣೆ ನಡೆಯುತ್ತಿದ್ದರೂ ತಾಲ್ಲೂಕು ಆಡಳಿತ ಮಾತ್ರ ಮೌನವಹಿಸಿದೆ ಎಂಬ ಪ್ರಶ್ನೆ ಸಾರ್ವಜನಿಕರಿಗೆ ಕಾಡುತ್ತಿದೆ ಎಂದು ಭಾರತೀಯ ದಲಿತ ಪ್ಯಾಂಥರ್ ಮುಖಂಡ ಗಣಪತಿ ಅಷ್ಟೋರೆ ಹೇಳಿದರು.

ತಾಲ್ಲೂಕಿನಾದ್ಯಂತ ಮುಖ್ಯ ರಸ್ತೆಯಲ್ಲೇ ಭಾರಿ ಪ್ರಮಾಣದಲ್ಲಿ ಮರಳು ಇಟ್ಟುಕೊಂಡು ವ್ಯಾಪಾರ ವಹಿವಾಟು ನಡೆಯುತ್ತದೆ. ಆದರೆ ತಾಲ್ಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಇಲಾಖೆಯ ಅಧಿಕಾರಿಗಳು ಮಾತ್ರ ಮೌನವಹಿಸಿ ಸರ್ಕಾರಕ್ಕೆ ನಷ್ಟ ಮಾಡುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಮರಳು ಅಕ್ರಮ ಸಾಗಣಿ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಮಾಹಿತಿ ಪಡೆಯಲು ತಹಶೀಲ್ದಾರ್ ಮಂಜುನಾಥ ಪಂಚಾಳ ಅವರಿಗೆ ಕರೆ ಮಾಡಿದರೆ ಅವರು ಸ್ವೀಕರಿಸಲಿಲ್ಲ.

ಈಚೆಗೆ ಅಧಿಕ ಮರಳು ತುಂಬಿರುವ ಸುಮಾರು 10 ವಾಹನಗಳ ವಿರುದ್ಧ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಓವರ್ ಲೋಡ್ ವಾಹನಗಳು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು
–ಮಡೋಳಪ್ಪ, ಡಿವೈಎಸ್ಪಿ ಹುಮನಾಬಾದ್ 
ಮರಳು ಅಕ್ರಮ ಸಾಗಣಿ ಆರೋಪ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಮಾಡಿ ಕ್ರಮ ಕೈಗೊಳ್ಳಲಾಗುವುದು
–ಅಂಜುಂ ತಬಸುಮ್, ತಹಶೀಲ್ದಾರ್ 
ಕಳೆದ ಮೂರು ತಿಂಗಳಲ್ಲಿ 15 ಓವರ್ ಲೋಡ್ ಮರಳು ವಾಹನಗಳ ಮೇಲೆ ಕ್ರಮ ಕೈಗೊಂಡು ಸುಮಾರು ₹5.75 ಲಕ್ಷ  ದಂಡ ವಿಧಿಸಲಾಗಿದೆ. ವಾ‌ಹನಗಳ ಪರಿಶೀಲನೆ ನಡೆಸಲಾಗುತ್ತಿದೆ.‌ ಮುಂದೆಯೂ ಕ್ರಮ ಕೈಗೊಳ್ಳಲಾಗುವುದು 
–ಮಹಮ್ಮದ್ ಜಾಫರ್ ಸಾದಿಕ್, ಆರ್‌ಟಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.