ADVERTISEMENT

ಬೀದರ್: ₹500 ಲಂಚದ ಆಸೆಗೆ ಜೈಲು ಪಾಲಾದ ಎಸ್‌ಡಿಎ!

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 15:37 IST
Last Updated 1 ಆಗಸ್ಟ್ 2024, 15:37 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೀದರ್: ಸಹಾಯ ಧನದ ಚೆಕ್ ನೀಡಲು ಫಲಾನುಭವಿಯಿಂದ ₹500 ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದ ಬಸವಕಲ್ಯಾಣ ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ಜಯಶ್ರೀ ಬಸವರಾಜ ಅವರಿಗೆ ಇಲ್ಲಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ವಿಶೇಷ ನ್ಯಾಯಾಧೀಶರ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಲಂಚ ನಿಷೇಧ ಕಾಯ್ದೆಯ ಕಲಂ 13(2) ಅಡಿ 1 ವರ್ಷ ಜೈಲು ಹಾಗೂ ₹5 ಸಾವಿರ ದಂಡ, ಕಲಂ 7ರ ಅಡಿ 6 ತಿಂಗಳು ಜೈಲು ಹಾಗೂ ₹5 ಸಾವಿರ ದಂಡ ವಿಧಿಸಿದ್ದಾರೆ. ದಂಡ ಭರಿಸಲು ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಬುಧವಾರ ಆದೇಶ ನೀಡಿದ್ದಾರೆ.

ADVERTISEMENT

ಬಸವಕಲ್ಯಾಣ ತಾಲ್ಲೂಕಿನ ಭೋಸಗಾ ಗ್ರಾಮದ ಲಲಿತಾಬಾಯಿ ಪುರುಷೋತ್ತಮ ಅವರಿಗೆ ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆಯಡಿ ₹10 ಸಾವಿರ ಸಹಾಯ ಧನ ಮಂಜೂರಾತಿ ಹಾಗೂ ಚೆಕ್ ನೀಡಿಕೆಗೆ ₹500 ಲಂಚಕ್ಕೆ ಬೇಡಿಕೆಯಿಟ್ಟಿದ್ದ ಜಯಶ್ರೀ 2013ರ ಜನವರಿ 30ರಂದು ಫಲಾನುಭವಿಯಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.

ಅಂದಿನ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ ಆರ್.ಎಸ್.ಜಹಗೀರದಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಕರ್ನಾಟಕ ಲೋಕಾಯುಕ್ತದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ್ ಶ್ರೀಮಾಳೆ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.