
ಹುಲಸೂರ: ‘ಮಾತೃಶಕ್ತಿಯಿಂದ ಬೆಳೆದ ಭಾರತ ದೇಶಕ್ಕೆ ನಾವು ಭಾರತಮಾತೆ ಎಂದು ಗೌರವಿಸುತ್ತೇವೆ. ಅಂತಹ ಭಾರತೀಯ ಸಂಸ್ಕೃತಿಯನ್ನು, ಉಳಿಸಿ ಬೆಳೆಸಿ ದೇಶದ ಗೌರವ ಕಾಪಾಡಿಕೊಂಡು ಹೋಗುವುದು ಮತ್ತು ರಾಷ್ಟ್ರ ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ’ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಕಾರ್ಯದರ್ಶಿ ಗೋಪಾಲ ನಾಗರಕಟ್ಟೆ ಹೇಳಿದರು.
ಪಟ್ಟಣದಲ್ಲಿ ಹಿಂದೂ ಆಯೋಜನಾ ಸಮಿತಿ ಸಹಯೋಗದಲ್ಲಿ ಮಂಗಳವಾರ ಸಂಜೆ ನಡೆದ ಹಿಂದೂ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು
‘ಹಿಂದೂ ಧರ್ಮದ ರಕ್ಷಣೆ ಪ್ರತಿಯೊಬ್ಬ ಹಿಂದುವಿನ ಜವಾಬ್ದಾರಿ. ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದ್ದು, ಅದರ ಸಂರಕ್ಷಣೆಯಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ’ ಎಂದರು.
ಹಿಂದೂ ಧರ್ಮ, ಹಿಂದೂಗಳ ಮೇಲೆ ದಾಳಿ ಹೆಚ್ಚಾಗುತ್ತಿದ್ದು ಇದೇ ರೀತಿ ಮುಂದುವರಿದರೆ ಭವಿಷ್ಯದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗುವ ಸಾಧ್ಯತೆ ಇದೆ. ಲವ್ ಜಿಹಾದ್ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಹಿಂದು ಸಮಾಜವನ್ನು ವಿಭಜಿಸಲು ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ಪ್ರತಿಯಾಗಿ ಸಮಸ್ತ ಹಿಂದೂಗಳು ಜಾಗೃತರಾಗಿ ಒಂದಾಗಿ ಮುನ್ನಡೆಯಬೇಕು ಎಂದರು.
ಸಾನ್ನಿಧ್ಯವಹಿಸಿದ್ದ ಶಿವಾನಂದ ಸ್ವಾಮೀಜಿ, ‘ಯೋಗ ಭೂಮಿ ಭಾರತದಲ್ಲಿ ಹಿಂದೂ ಧರ್ಮದ ಆಚರಣೆ ಅನಾದಿ ಕಾಲದಿಂದ ಇದೆ. ನಮ್ಮ ಆಚರಣೆ, ಪದ್ಧತಿಗಳನ್ನು ಪಾಲಿಸಬೇಕು. ಕೀಳರಿಮೆ ಬಿಟ್ಟು, ಒಂದಾಗಿ ಬಾಳಬೇಕು’ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸಂಜಯ ಪಟವಾರಿ, ಸಾವಿತ್ರಿ ಸಲಗರ, ಓಂಕಾರ ಪಟ್ನೇ, ಚಂದ್ರಕಾಂತ ದೇಟ್ನೇ, ಸೂರ್ಯಕಾಂತ ಚೆಲ್ಲಾಬಟ್ಟೆ, ರಾಮ ಸಾಗಾವೆ, ಸಂಜು ಮೂಲಗೆ ,ಬಾಲಾಜಿ ಗೌಡಗಾಂವೆ ಸಂಗಮೇಶ ಕುಡಂಬಲೆ ಬಾಳು ಕಾಡಾದಿ, ಬಾಬುರಾವ್ ಗೌಡಗಾಂವೆ, ರಣಜೀತ ಗಾಯಕವಾಡಸೇರಿ ವಿವಿಧ ಗ್ರಾಮಗಳಿಂದ ಹಿಂದೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಈ ವೇಳೆ ಜಗದೀಶ ದೇಟ್ನೇ ಸ್ವಾಗತಿಸಿ, ಮೌನೇಶ ಪಾಂಚಾಳ ನಿರೂಪಿಸಿದರು.
ಅದ್ದೂರಿ ಶೋಭಾಯಾತ್ರೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಹಿಂದೂ ಸಮ್ಮೇಳನ ಆಯೋಜನೆ ಸಮಿತಿ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು.
ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಗಡಿಗೌಡಗಾಂವ ಹಾವಗಿಲಿಂಗೇಶ್ವರ ಮಠದ ಶಾಂತವೀರ ಸ್ವಾಮೀಜಿ, ಸೇವಾನಗರ ಶಿವಶಕ್ತಿ ಧಾಮದ ಗೋವಿಂದರಾವ ಮಹಾರಾಜ ಸೇರಿ ಸಮಿತಿ ಅಧ್ಯಕ್ಷ ಸುನೀಲ ಕಾಡಾದಿ ನೇತೃತ್ವದಲ್ಲಿ ಆರ್‌ಎಸ್‌ಎಸ್ ಪ್ರಮುಖರು, ಸಮಿತಿ ಪ್ರಮುಖರು, ಸಂಘಟನೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಗೋ ಪೂಜೆ ಮಾಡಿ, ಶೋಭಾಯಾತ್ರೆಗೆ ಚಾಲನೆ ನೀಡಿದರು.
ಅನೀಲ ಭೂಸಾರೆ, ಲತಾ ಹಾರಕೂಡೆ, ಸುಧೀರ ಕಾಡಾದಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ರೂಪವತಿ ಜಾಧವ್ ಸೇರಿ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.