ADVERTISEMENT

ಚಿಟಗುಪ್ಪ ಇಂದಿರಾ ಕ್ಯಾಂಟೀನ್‌ಗಿಲ್ಲ ಉದ್ಘಾಟನೆ ಭಾಗ್ಯ

ಗುಂಡು ಅತಿವಾಳ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 6:21 IST
Last Updated 2 ಜನವರಿ 2026, 6:21 IST
ಚಿಟಗುಪ್ಪ ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್‌
ಚಿಟಗುಪ್ಪ ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್‌   

ಚಿಟಗುಪ್ಪ(ಹುಮನಾಬಾದ್): ಪಟ್ಟಣದ ಇಂದಿರಾ ಕ್ಯಾಂಟೀನ್ ಕಟ್ಟಡದ ಕಾಮಗಾರಿ ಮುಗಿದು‌ 5–6 ತಿಂಗಳು ಕಳೆದಿವೆ. ಆದರೆ ಈವರೆಗೂ ಕ್ಯಾಂಟೀನ್‌ಗೆ ಉದ್ಘಾಟನೆ ಭಾಗ್ಯ ದೊರೆತಿಲ್ಲ.

ಸರ್ಕಾರವು, ಹಸಿವು ಮುಕ್ತ ಕರ್ನಾಟಕದ ಗುರಿಯೊಂದಿಗೆ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಆರಂಭಿಸಿದೆ. ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಯಾರೂ ಹಸುವಿನಿಂದ ಬಳಲಬಾರದು ಎಂಬ ಕಾರಣಕ್ಕೆ ನಗರ ಪ್ರದೇಶದ ಜನರಿಗೆ ಕೈಗೆಟುಕುವ ದರದಲ್ಲಿ ಆಹಾರ ನೀಡುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿದೆ. ಆದರೆ ಈವರೆಗೂ ಕ್ಯಾಂಟೀನ್‌ಗೆ ಉದ್ಘಾಟನೆ ಭಾಗ್ಯ ಸಿಗದಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

ಚಿಟಗುಪ್ಪ ಪಟ್ಟಣದ ಪುರಸಭೆ ಆವಣದಲ್ಲಿನ ತಹಶೀಲ್ದಾರ್‌ ಕಚೇರಿ ಎದುರು ಇಂದಿರಾ ಕ್ಯಾಂಟೀನ್ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಆದರೆ ಕಾಮಗಾರಿ ಮುಗಿದಿದ್ದರೂ, ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ಕ್ಯಾಂಟೀನ್ ಮಾತ್ರ ಇನ್ನೂ ಆರಂಭ ಮಾಡಿಲ್ಲ. ವೈಯಕ್ತಿಕ ಕೆಲಸ ಕಾರ್ಯಗಳಿಗಾಗಿ ಭೇಟಿ ನೀಡುವ ಗ್ರಾಮೀಣ ಜನರು, ಕೂಲಿ ಕಾರ್ಮಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಕ್ಯಾಂಟೀನ್‌ ಆರಂಭವಾಗುವುದನ್ನು ಎದುರು ನೋಡುತ್ತಿದ್ದಾರೆ.

ADVERTISEMENT

ಸದ್ಯ ಇಂದಿರಾ ಕ್ಯಾಂಟೀನ್‌ ಇರುವ ಸ್ಥಳವು ಆಯಕಟ್ಟಿನಲ್ಲಿದ್ದು, ತಹಶೀಲ್ದಾರ್‌ ಕಚೇರಿ ಹಾಗೂ ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬರುವ ರೋಗಿಗಳು ಹಾಗೂ ಅವರೊಂದಿಗೆ ಬರುವವರಿಗೆ ಅನುಕೂಲವಾಗಿದೆ. ಆದರೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಕ್ಯಾಂಟೀನ್ ಆರಂಭವಾಗಿಲ್ಲ. ಹೀಗಾಗಿ ಕಟ್ಟಡದ ಆವರಣದಲ್ಲಿ ನಾಯಿ, ಹಂದಿಗಳು ಓಡಾಡುತ್ತಿವೆ. ಜೊತೆಗೆ ಕಟ್ಟಡದ ಮುಂಭಾಗವು ಕಾರು, ಬೈಕ್‌ ಸೇರಿದಂತೆ ಇನ್ನಿತರ ವಾಹನಗಳಿಗೆ ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಟ್ಟಿದೆ. ಇನ್ನಷ್ಟು ದಿನಗಳು ಕಳೆದರೆ ದೂಳು ಹಿಡಿಯುತ್ತದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ವಿವಿಧ ಸರ್ಕಾರಿ ಕಾರ್ಯಗಳನ್ನು ಕೆಲಸ- ಮಾಡಿಸಿಕೊಳ್ಳಲು ಬರುವ ಜನರು, ದಿನಗೂಲಿ ಸೇರಿದಂತೆ ಇನ್ನಿತರ ಕೆಲಸ ಮಾಡಲು ನಗರಕ್ಕೆ ಬರುವ ಜನ ದುಬಾರಿ ಹಣ ಕೊಟ್ಟು ಆಹಾರ ಸೇವಿಸುವಂತಹ ಪರಿಸ್ಥಿತಿ ಬಂದಿದೆ.‌ ಕೆಲವರಿಗೆ ದುಬಾರಿ ಹಣ ನೀಡಿ ಹೋಟೆಲ್‌ಗಳಲ್ಲಿ ಆಹಾರ ಸೇವಿಸಲಾಗುವುದಿಲ್ಲ. ಈ ಕಾರಣದಿಂದಲೇ ಬಡವರು, ಕಾರ್ಮಿಕರು ಹಸಿವಿನಿಂದ ಬಳಬಾರದು ಎಂಬ ಸದುದ್ದೇಶದಿಂದ ಸರ್ಕಾರವು, ಇಂದಿರಾ ಕ್ಯಾಂಟೀನ್ ಆರಂಭಿಸಿದೆ. ಚಿಟಗುಪ್ಪ ತಾಲ್ಲೂಕು ಕೇಂದ್ರದಲ್ಲಿ ಒಂದೊಂದೇ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣವಾಗಿದೆ.‌ ಈ ಕಟ್ಟಡದ ಎದುರುಗಡೆ ಸಮುದಾಯ ಆರೋಗ್ಯ ಕೇಂದ್ರ, ತಹಶೀಲ್ದಾರ್‌, ಪುರಸಭೆ‌ ಕಚೇರಿ ಸೇರಿದಂತೆ ಶಾಲಾ ಕಾಲೇಜುಗಳಿವೆ. ಕ್ಯಾಂಟೀನ್ ಆರಂಭಿಸಿದರೆ ನೂರಾರು ಜನರಿಗೆ ಅನುಕೂಲವಾಗಲಿದ್ದು, ಶೀಘ್ರ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಟ್ಟಡದ ಕಾಮಗಾರಿ ಮುಗಿದಿದ್ದು ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದು 15 ದಿನಗಳಲ್ಲಿ ಕ್ಯಾಂಟೀನ್ ಆರಂಭಿಸಲಾಗುವುದು

-ಸತೀಶ ಗುಡ್ಡೆ ಪುರಸಭೆ ಮುಖ್ಯಾಧಿಕಾರಿ ಚಿಟಗುಪ್ಪ

-

ಇಂದಿರಾ ಕ್ಯಾಂಟೀನ್ ಪಕ್ಕದಲ್ಲೇ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಹಶೀಲ್ದಾರ್‌ ಕಚೇರಿ ಇದೆ. ಈ ಕಚೇರಿಗಳಿಗೆ ಬರುವ ಜನರಿಗೆ ಆಹಾರ ಸೇವಿಸಲು ಅನುಕೂಲವಾಗಲಿದೆ. ಸಂಬಂಧಪಟ್ಟ ಮೇಲಾಧಿಕಾರಿಗಳು ತಕ್ಷಣ ಕ್ಯಾಂಟಿನ್ ಆರಂಭಿಸಬೇಕು

-ವೀರೇಶ ತುಗಾಂವ ಮುಖಂಡ ಚಿಟಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.