ಹುಲಸೂರ: ಪ್ರತಿ ಮನೆಗೂ ನಳಗಳ ಮೂಲಕ ನೀರು ಪೂರೈಸುವ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿಗೆ ಪಟ್ಟಣದ ರಸ್ತೆಗಳು ಹಾಳಾಗಿವೆ. ಪೈಪ್‌ಲೈನ್ ಅಳವಡಿಸಲು ಕಾಂಕ್ರೀಟ್ ರಸ್ತೆಗಳನ್ನು ಅಗೆದು, ಅದನ್ನು ಪುನರ್ ನಿರ್ಮಾಣ ಮಾಡದೆ ಹಾಗೇ ಬಿಡಲಾಗುತ್ತಿದ್ದು, ಇದರಿಂದ ಜನ ಓಡಾಡುವುದೇ ಕಷ್ಟವಾಗಿದೆ.
ಹುಲಸೂರ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಜೆಜೆಎಂ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕೂ ಮುನ್ನ ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಗಳನ್ನು ಅಗೆದು ಹದಗೆಡಿಸಲಾಗಿದೆ. ಬೃಹತ್ ಕಟ್ಟಡ ನಿರ್ಮಾಣ ಯಂತ್ರಗಳಿಂದ ಅಗೆದು, ಮುಚ್ಚುತ್ತಿರುವುದರಿಂದ ದೀರ್ಘ ಕಾಲ ಬಾಳಿಕ ಬರಬೇಕಾದ ರಸ್ತೆಗಳು ವರ್ಷ ತುಂಬುವ ಮುನ್ನ ಸಂಚಾರದ ಯೋಗ್ಯತೆ ಕಳೆದುಕೊಳ್ಳುತ್ತಿವೆ.
ಜೆಜೆಎಂ ಪೈಪ್‌ಲೈನ್ ಅಳವಡಿಸುವಾಗ ನಿಯಮ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಗುತ್ತಿಗೆದಾರರು ಅನುಸರಿಸುತ್ತಿಲ್ಲ. ಇದು ತಿಳಿದಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಪಟ್ಟಣ ನಿವಾಸಿಗಳು ಆರೋಪಿಸಿದ್ದಾರೆ.
ರಸ್ತೆಯ ಎರಡು ಬದಿಗಳಲ್ಲಿರುವ ಮನೆಗಳ ಮುಂದೆ ಪೈಪ್‌ಲೈನ್ ಅಳವಡಿಸಿ ಪ್ರತಿ ಮನೆಗೆ ಪ್ರತ್ಯೇಕ ನಳ ಅಳವಡಿಸಿ ನೀರು ಪೂರೈಕೆ ಮಾಡಬೇಕು ಎಂಬುದು ಯೋಜನೆಯ ಉದ್ದೇಶ. ಕಾಂಕ್ರಿಟ್ ರಸ್ತೆಯ ಒಂದು ಬದಿಯನ್ನು ಯಂತ್ರದಿಂದ ಕತ್ತರಿಸಿ, ಪೈಪ್‌ಲೈನ್ ಅಳವಡಿಸಿದ ಬಳಿಕ ಸುರಕ್ಷಿತವಾಗಿ ಕಾಂಕ್ರೀಟ್‌ನಿಂದ ರಸ್ತೆಯನ್ನು ಸರಿಪಡಿಸಬೇಕು. ಆದರೆ ಕಾಮಗಾರಿಯ ಗುತ್ತಿಗೆದಾರರು ಬೃಹತ್ ಕಟ್ಟಡ ನಿರ್ಮಾಣ ಯಂತ್ರಗಳಿಂದ ಅಗೆಯುತ್ತಿದ್ದಾರೆ ಇದರಿಂದ ಸಂಪೂರ್ಣ ರಸ್ತೆಯೇ ಹಾಳಾಗಿವೆ. ಅಲ್ಲದೆ ಕೆಲಕಡೆ ಆ ಗುಂಡಿ ಮುಚ್ಚಲು ಕೇವಲ ಸಿಮೆಂಟ್ ಮಿಶ್ರಿತ ಕಲ್ಲು ಬಳಸುತ್ತಿದ್ದಾರೆ. ಮಳೆ ಬಂದಾಗ ಕೊಚ್ಚಿಕೊಂಡು ಹೋಗಿ ರಸ್ತೆಯ ಮೇಲೆ ನೀರು ನಿಂತು ಚರಂಡಿ ಶೇಖರಣೆಯಾಗಿ, ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂಬುದು ಸ್ಥಳೀಯರ ಆರೋಪ. ಕೋಟ್ಯಂತರ ವೆಚ್ಚದ ಕಾಮಗಾರಿಯನ್ನು ಈ ರೀತಿ ಅವೈಜ್ಞಾನಿಕವಾಗಿ ನಡೆಸುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ರಸ್ತೆ ದುಸ್ಥಿತಿಯಲ್ಲಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳದಿರುವುದು ಇತ್ತ ವಾಹನ ಸವಾರರಿಗೆ, ಸ್ಥಳೀಯ ನಿವಾಸಿಗಳಿಗೆ ಅಸಮಾಧಾನ ಉಂಟು ಮಾಡಿದೆ.
ಡೆಂಗಿ ಭೀತಿ: ‘ಕಾಮಗಾರಿಗಾಗಿ ಅಗೆದಿರುವ ರಸ್ತೆಯಲ್ಲಿ ನೀರು ನಿಂತಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಗ್ರಾಮಸ್ಥರಿಗೆ ಡೆಂಗಿ ಭಯ ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯರು ದೂರಿದರು.
ವಾಹನ ಸವಾರರ ಪರದಾಟ ಮಳೆ ಬಂದರೆ ರಸ್ತೆಯಲ್ಲಿ ಹರಿಯುವ ನೀರು ಬಹುತೇಕ ಪಟ್ಟಣದ ಎಲ್ಲಕಡೆ ರಸ್ತೆ ಮಧ್ಯದಲ್ಲಿಯೇ ದೊಡ್ಡ ಗುಂಡಿ
ಪಟ್ಟಣದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ನಿವಾಸಿಗಳಿಗೆ ತೊಂದರೆ ಆಗದಂತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೂ ಸೂಚಿಸಿದ್ದೇನೆದೀಪಾರಾಣಿ ಭೋಸ್ಲೆ ಗ್ರಾ.ಪಂ ಅಧ್ಯಕ್ಷೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ರಸ್ತೆ ನಡುವೆ ನೀರು ನಿಲ್ಲುತ್ತಿದ್ದು ಕೂಡಲೇ ಸಮಸ್ಯೆ ಬಗೆಹರಿಸಲಾಗುವುದುಶಿವರಾಜ ಪಲ್ಲರಿ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಳಾದ ರಸ್ತೆ ನಡುವೆ ಓಡಾಡುವಂತಾಗಿದೆ. ಕೆಲವರು ಕೈ ಕಾಲು ಮುರಿದುಕೊಂಡಿದ್ದಾರೆ. ಕೂಡಲೇ ಗುತ್ತಿಗೆದಾರರು ರಸ್ತೆ ಸುಧಾರಣೆ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದುಲತಾ ಹಾರಕೂಡೆ ಜಿ.ಪಂ. ಮಾಜಿ ಸದಸ್ಯೆ ಈಗಾಗಲೇ ಈ ವಿಷಯದ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದ್ದು ಕೂಡಲೇ ತಗ್ಗು ಗುಂಡಿಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದ್ದಾರೆಮಹಾದೇವ ಜಮ್ಮು ತಾ.ಪಂ. ಇಒ ಹುಲಸೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.