ADVERTISEMENT

ಜೆಡಿಎಸ್ ಸ್ಪರ್ಧೆ: ಬದಲಾಗುವ ಲೆಕ್ಕಾಚಾರ

ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ ಚಟುವಟಿಕೆ ಚುರುಕು

ಮಾಣಿಕ ಆರ್ ಭುರೆ
Published 15 ಫೆಬ್ರುವರಿ 2021, 6:21 IST
Last Updated 15 ಫೆಬ್ರುವರಿ 2021, 6:21 IST
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ   

ಬಸವಕಲ್ಯಾಣ: ‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಯಲ್ಲಿ ಜೆಡಿಎಸ್ ಕೂಡ ಸ್ಪರ್ಧಿಸಲಿದೆ’ ಎಂದು ಬೆಂಗಳೂರಿನಲ್ಲಿ ಭಾನುವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದ್ದು
ಈ ಕಾರಣ ಇಲ್ಲಿನ ಚುನಾವಣಾ ಲೆಕ್ಕಾಚಾರ ಬದಲಾಗುವ ಸಾಧ್ಯತೆ ವ್ಯಕ್ತವಾಗುತ್ತಿದೆ.

ಈ ಕ್ಷೇತ್ರವನ್ನು ಜನತಾ ಪರಿವಾರದ ಭದ್ರಕೋಟೆ ಎಂದೇ ಗುರುತಿಸಲಾಗುತ್ತದೆ. ಆದರೆ, ಕುಮಾರಸ್ವಾಮಿ ಅವರೇ ಈ ಮೊದಲು ಉಪ ಚುನಾವಣೆ ನಡೆಯಲಿರುವ ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದಿದ್ದರು. ಇತ್ತೀಚಿಗೆ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರೂ ಇದನ್ನೇ ಹೇಳಿದ್ದರು. ಈ ಮಧ್ಯೆ ಜೆಡಿಎಸ್‌ನವರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಲಿದ್ದಾರೆ ಎಂಬ ಊಹಾಪೋಹವೂ ಹರಡಿತ್ತು. ಹೀಗಾಗಿ ಈ ಪಕ್ಷದ ಆಕಾಂಕ್ಷಿಗಳು ಸುಮ್ಮನಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಇಲ್ಲಿ ಜೆಡಿಎಸ್ ಆಸ್ತಿತ್ವ ಉಳಿಯಲಿಕ್ಕಿಲ್ಲ. ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲೂ ಇದರ ಪರಿಣಾಮ ಆಗಬಲ್ಲದು. ಆದ್ದರಿಂದ ಹೇಗಾದರೂ ಮಾಡಿ ಅಭ್ಯರ್ಥಿ ಕಣಕ್ಕಿಳಿಸುವಂತೆ ಪಕ್ಷದ ವರಿಷ್ಠರ ಮನವೊಲಿಸಲು ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರು ಹಾಗೂ ಕೆಲ ಪದಾಧಿಕಾರಿಗಳು ಸತತ ಪ್ರಯತ್ನದಲ್ಲಿದ್ದರು.

ADVERTISEMENT

‘ಈ ಮಧ್ಯೆ ಪಕ್ಷದ ನಿರ್ಣಯಕ್ಕೆ ಬೇಸತ್ತು ಕೆಲ ಕಾರ್ಯಕರ್ತರು ಹಾಗೂ ಆಕಾಂಕ್ಷಿಗಳು ಅನ್ಯ ಪಕ್ಷದೆಡೆಗೆ ಮುಖ ಮಾಡುವಂತಾಯಿತು. ಇದರಿಂದಾಗಿಯೇ ಕುಮಾರಸ್ವಾಮಿ ಅವರು ಅಭ್ಯರ್ಥಿ ನಿಲ್ಲಿಸದಿರುವ ತಮ್ಮ ನಿರ್ಣಯವನ್ನು ಬದಲಾಯಿಸಿರ ಬಹುದು. ಅಲ್ಲದೆ ಅವರೇ ಸ್ಪಷ್ಟಪಡಿಸಿ ರುವಂತೆ ಮಸ್ಕಿ, ಬಸವಕಲ್ಯಾಣ ಮತ್ತು ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜೆಡಿಎಸ್ ದೂರ ಉಳಿಯುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿದ್ದರಿಂದ ಸ್ಪರ್ಧೆಗೆ ಮನಸ್ಸು ಮಾಡಿರಬೇಕು‌’ ಎಂದು ಮೂಲಗಳು ತಿಳಿಸಿವೆ.

‘ಈ ನಿರ್ಣಯದಿಂದ ಅನ್ಯ ಪಕ್ಷಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಸಹಜ. ಈ ಕ್ಷೇತ್ರದಲ್ಲಿ ಎಂಟು ಚುನಾವಣೆಗಳಲ್ಲಿ ಒಂದು ಸಲ ಮಾತ್ರ ಕಾಂಗ್ರೆಸ್ ಹಾಗೂ ಒಂದು ಸಲ ಬಿಜೆಪಿ ಗೆದ್ದಿದೆ. ಮೂರು ಬಾರಿ ಜೆಡಿಎಸ್ ಹಾಗೂ ಇತರೆ ಸಲ ಜನತಾ ಪರಿವಾರದ ಅಭ್ಯರ್ಥಿ ಗೆದ್ದಿದ್ದಾರೆ. ಕಳೆದ ಚುನಾವಣೆಯಲ್ಲೂ ಈ ಪಕ್ಷದಿಂದ ಸ್ಪರ್ಧಿಸಿದ್ದ ಪಿ.ಜಿ.ಆರ್.ಸಿಂಧ್ಯ ಅವರು ಮೂರನೇ ಸ್ಥಾನದಲ್ಲಿದ್ದರೂ 30 ಸಾವಿರಕ್ಕಿಂತ ಅಧಿಕ ಮತ ಪಡೆದಿದ್ದರು. ಉಪ ಚುನಾವಣೆಯಲ್ಲೂ ಈ ಪಕ್ಷ ತೀವ್ರ ಸ್ಪರ್ಧೆ ಒಡ್ಡುವುದು ನಿಶ್ಚಿತ’ ಎಂದು ಪಕ್ಷದ ಶಬ್ಬೀರ ಪಾಶಾ ಮುಜಾವರ್ ಹೇಳಿದ್ದಾರೆ.

‘ಸೋಲು- ಗೆಲುವು ಮುಖ್ಯವಲ್ಲ. ಪಕ್ಷದ ಆಸ್ತಿತ್ವದ ಉಳಿವಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಅಗತ್ಯವಾಗಿದೆ. ಪಕ್ಷದ ಅಭ್ಯರ್ಥಿ ಕಣಕ್ಕೆ ಇಳಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಪ್ರಕಟಿಸಿದ್ದರಿಂದ ಕಾರ್ಯಕರ್ತರಲ್ಲಿ ಹೊಸ ಜೀವ ಬಂದಂತಾಗಿದೆ’ ಎಂದು ಪಕ್ಷದ ತಾಲ್ಲೂಕು ವಕ್ತಾರ ಆಕಾಶ ಖಂಡಾಳೆ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.