ಬಗದಲ್ (ಜನವಾಡ): ಕನಕದಾಸರು ತನಗೆ ದೊರೆತಿದ್ದ ಚಿನ್ನವನ್ನು ಜನ ಕಲ್ಯಾಣಕ್ಕೆ ಬಳಸಲು ರಾಜನಿಗೆ ಕೊಟ್ಟಿದ್ದರು ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು.
ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕನಕದಾಸರ ನೂತನ ಮೂರ್ತಿ ಅನಾವರಣ ಹಾಗೂ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
78 ಹಳ್ಳಿಗಳ ಪಾಳೆಗಾರರಾಗಿದ್ದ ಕನಕದಾಸರಿಗೆ ಏಳು ರಂಜಣಗಿ ಬಂಗಾರ ಸಿಕ್ಕಿತ್ತು. ಅವರು ಅದನ್ನು ಮನೆಗೆ ತೆಗೆದುಕೊಂಡು ಹೋಗಲಿಲ್ಲ. ರಾಜನ ಸುಪರ್ದಿಗೆ ಒಪ್ಪಿಸಿದರು. ಅಂದಿನಿಂದ ತಿಮ್ಮಪ್ಪ ನಾಯಕ್ ಆಗಿದ್ದ ಅವರು ಕನಕ ಹೆಸರಿನಿಂದ ಪ್ರಸಿದ್ಧರಾದರು ಎಂದು ತಿಳಿಸಿದರು.
ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಬುದ್ಧ, ಬಸವ, ಕನಕ, ಅಂಬೇಡ್ಕರ್, ವಾಲ್ಮಿಕಿ ಸೇರಿದಂತೆ ಅನೇಕ ಮಹಾ ಪುರುಷರ ಮೂರ್ತಿ ಸ್ಥಾಪನೆಗಷ್ಟೇ ಸೀಮಿತರಾಗದೇ ಅವರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮಾತನಾಡಿ, ಪರಿಶಿಷ್ಟ ಪಂಗಡ ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಾನ್ನಿಧ್ಯ ವಹಿಸಿದ್ದ ತಿಂಥಣಿ ಬ್ರಿಡ್ಜ್‍ನ ಕನಕ ಗುರು ಪೀಠದ ಸಿದ್ಧರಮಾನಂದಪುರಿ ಸ್ವಾಮೀಜಿ ಮಾತನಾಡಿ, ತಮ್ಮನ್ನು ದೇವರಿಗೆ ಸಮರ್ಪಿಸಿಕೊಂಡವರಿಗೆ ದೇವರು ನೆಮ್ಮದಿ ಕೊಡುತ್ತಾನೆ. ಬದುಕಿನಲ್ಲಿ ಆನಂದ ಹಾಗೂ ಮುಕ್ತಿಗಾಗಿ ಕಾಗಿನೆಲೆ ಆದಿಕೇಶವನ ಧ್ಯಾನ ಮಾಡಬೇಕು ಎಂದು ಕನಕದಾಸರು ಹೇಳಿದ್ದಾರೆ ಎಂದು ತಿಳಿಸಿದರು.
ಚಿಕ್ಕಲಿಂಗ ಬೀರದೇವರು, ಉಚ್ಚಾದ ಗೋಪಾಲ್ ಮುತ್ತ್ಯಾ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಅಮೃತರಾವ್ ಚಿಮಕೋಡೆ, ಪಂಡಿತರಾವ್ ಚಿದ್ರಿ, ಮುರಳಿಧರ ಎಕಲಾರಕರ್, ಭಾರತಬಾಯಿ ಶೇರಿಕಾರ್, ಗೀತಾ ಚಿದ್ರಿ, ಎಂ.ಎಸ್. ಕಟಗಿ, ಸಂಜೀವಕುಮಾರ ಅತಿವಾಳೆ, ಮಾಳಪ್ಪ ಅಡಸಾರೆ, ಬಸವರಾಜ ಮಾಳಗೆ, ಸಂತೋಷ ಜೋಳದಾಪಕೆ, ಸಂತೋಷ ವಗ್ಗೆ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.