
ಬೀದರ್: ನಗರದಿಂದ ಸಿದ್ಧೇಶ್ವರ ಮಾರ್ಗವಾಗಿ ಭಾಲ್ಕಿಗೆ ಬಸ್ ಓಡಿಸಬೇಕೆಂಬ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಕೆ. ಕನಕಟ್ಟೆ ಅವರು ಬಸ್ ಸಂಚಾರಕ್ಕೆ ಬುಧವಾರ ನಗರದಲ್ಲಿ ಚಾಲನೆ ನೀಡಿ, ಅವರು ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್ ಪಡೆದು ಸಂಚರಿಸಿದರು.
‘ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬೀದರ್‌ನಿಂದ ಸಿದ್ಧೇಶ್ವರ ಮಾರ್ಗವಾಗಿ ಭಾಲ್ಕಿಗೆ ಬಸ್ ಓಡಿಸಬೇಕು ಎಂದು ಸಿದ್ಧೇಶ್ವರ ಗ್ರಾಮಸ್ಥರು ನನಗೆ ಮನವಿ ಸಲ್ಲಿಸಿದ್ದರು. ವ್ಯಾಜ್ಯ ಪೂರ್ವ ಪ್ರಕರಣ ದಾಖಲಿಸಿಕೊಂಡು, ಈ ಕುರಿತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಅವರ ಗಮನಕ್ಕೆ ತಂದಿದ್ದೆ. ಎರಡು ಗಂಟೆಗಳಲ್ಲೇ ಬೀದರ್-ಭಾಲ್ಕಿ ವಯಾ ಸಿದ್ಧೇಶ್ವರ ಹೊಸ ಬಸ್ ವ್ಯವಸ್ಥೆ ಮಾಡಿದ್ದಾರೆ’ ಎಂದು ಎಸ್.ಕೆ. ಕನಕಟ್ಟೆ ತಿಳಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್, ಕರ್ನಾಟಕ ಲೋಕಾಯುಕ್ತದ ವಿಶೇಷ ಸಾರ್ವಜನಿಕ ಅಭಿಯೋಜಕ ಕೇಶವರಾವ್ ಶ್ರೀಮಾಳೆ, ಗಣೇಶ ಮೂಕಡೆ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.