ಬೀದರ್: ಪ್ರಸಕ್ತ ಸಾಲಿನ ಕಲಬುರಗಿ ವಿಭಾಗಮಟ್ಟದ 14/17 ವಯೋಮಿತಿ ಒಳಗಿನ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಟೂರ್ನಿಯಲ್ಲಿ ಕೊಪ್ಪಳ ಜಿಲ್ಲೆ ಪಾರಮ್ಯ ಮೆರೆದಿದೆ.
ಬಾಲಕ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿದ ಕೊಪ್ಪಳದ ತಂಡ ಅಂತಿಮ ಹಣಾಹಣಿಯಲ್ಲಿ ಗೆಲುವಿನ ನಗೆ ಬೀರಿದೆ.
ಕೊಪ್ಪಳದ ಬಾಲಕಿಯರ ತಂಡವು ಫೈನಲ್‌ನಲ್ಲಿ ರಾಯಚೂರು ಜಿಲ್ಲಾ ತಂಡವನ್ನು ಮಣಿಸಿದರೆ, ಬಾಲಕರ ವಿಭಾಗದಲ್ಲಿ ಕೊಪ್ಪಳವು ವಿಜಯನಗರ ಜಿಲ್ಲೆಯನ್ನು ಸೋಲಿಸಿ ಗೆಲುವಿಗೆ ಮುತ್ತಿಕ್ಕಿತು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಟೂರ್ನಿಯಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ತಂಡಗಳು ಪಾಲ್ಗೊಂಡಿದ್ದವು. ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆ, ಸಾಮರ್ಥ್ಯ ಒರೆಗೆ ಹಚ್ಚಿದರು. ಮೋಡ ಮುಸುಕಿದ ವಾತಾವರಣದಲ್ಲಿ ಕ್ರೀಡಾಪಟುಗಳು ಪಂದ್ಯದಲ್ಲಿ ಜಯ ಗಳಿಸಲು ತೀವ್ರ ಕಸರತ್ತು ನಡೆಸಿದರು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಟೂರ್ನಿ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಟೂರ್ನಿ ಏರ್ಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.