ADVERTISEMENT

ಕಮಲನಗರ: ನಿರಂತರ ಮಳೆಗೆ ಅಂದಾಜು 3000 ಹೆಕ್ಟೇರ್‌ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 6:47 IST
Last Updated 20 ಆಗಸ್ಟ್ 2025, 6:47 IST
ಕಮಲನಗರ ತಾಲ್ಲೂಕಿನ ದಾಬಕಾ ಗ್ರಾಮದ ನಾಡತಹಶೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ರೈತರು ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು 
ಕಮಲನಗರ ತಾಲ್ಲೂಕಿನ ದಾಬಕಾ ಗ್ರಾಮದ ನಾಡತಹಶೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ರೈತರು ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು    

ಕಮಲನಗರ: ‘ತಾಲ್ಲೂಕಿನಾದ್ಯಂತ ಕಳೆದ ನಾಲ್ಕು ದಿವಸಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದ್ದು, ರೈತರ ಬೆಳೆಗಳಿಗೆ ಮಳೆ ನೀರು ನುಗ್ಗಿ ಅಂದಾಜು 3000 ಹೆಕ್ಟೇರ್‌ ಬೆಳೆ ಹಾನಿಯಾಗಿದೆ’ ಎಂದು ತಹಶೀಲ್ದಾರ್‌ ಅಮಿತಕುಮಾರ ಕುಲಕರ್ಣಿ ತಿಳಿಸಿದ್ದಾರೆ.

ಅಕನಾಪೂರ ಗ್ರಾಮದ ಹೊರವಲಯದಲ್ಲಿರುವ ಕೆರೆ ತುಂಬಿದ್ದು, ಅದು ಒಡೆಯುವ ಭೀತಿಯಿಂದಾಗಿ ನಂದಿ ಬೀಜಲಗಾಂವ ಗ್ರಾಮದಲ್ಲಿಯ 30 ರಿಂದ 40 ಮನೆಗಳ ಕುಟುಂಬಗಳಿಗೆ ಸರ್ಕಾರಿ ಶಾಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗಂಜಿ ಕೇಂದ್ರ ಸ್ಥಾಪಿಸಿ ತಾತ್ಕಾಲಿಕವಾಗಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಮನೆಗಳಿಗೆ ಹಾನಿ : ಕಮಲನಗರ ತಾಲ್ಲೂಕಿನಾದ್ಯಂತ ಸುರಿದ ಮಳೆಗೆ ಸುಮಾರು 38ಕ್ಕೂ ಹೆಚ್ಚು ಮನೆ ಗೋಡೆಗಳು ಕುಸಿತವಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ADVERTISEMENT

ಪರಿಹಾರಕ್ಕೆ ರೈತರ ಒತ್ತಾಯ: ತಾಲ್ಲೂಕಿನ ದಾಬಕಾ ವಲಯದಲ್ಲಿ ಬೆಳೆ ಹಾನಿ ಜಂಟಿ ಸಮೀಕ್ಷೆ, ಪರಿಹಾರ ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರು ಮಂಗಳವಾರ ನಾಡತಹಶೀಲ್ದಾರ್‌ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಕಂದಾಯ ನಿರೀಕ್ಷಕ ಸಂಜೀವ ರಾಠೋಡ ಅವರಿಗೆ ಸಲ್ಲಿಸಿದರು.

ದಾಬಕಾ ವಲಯದಲ್ಲಿ ಕಳೆದ ನಾಲ್ಕು ದಿವಸಗಳಿಂದ ಸುರಿಯುತ್ತಿರುವ ಮಳೆಗೆ ರೈತ ಸಮೂಹ ನಲುಗಿ ಹೋಗಿದೆ. ತಾಲ್ಲೂಕಿನಲ್ಲಿಯೇ ದಾಬಕಾದಲ್ಲಿ 309 ಮಿಮೀ ದಾಖಲೆ ಮಳೆ ಸುರಿದಿದೆ. ರೈತರ ಹೊಲಗಳಲ್ಲಿ ಹುಲುಸಾಗಿ ಬೆಳೆದ ಬೆಳೆಗಳು ಜಲಾವೃತಗೊಂಡು ನಾಶವಾಗಿವೆ. ಕೂಡಲೇ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಪ್ರತಿ ಎಕರೆಗೆ ₹40 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

‘2025-26ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ರೈತರ ಬೆಳೆ ಸಂಪೂರ್ಣವಾಗಿ ನಾಶಗೊಂಡಿದ್ದು, ವಿಮಾ ಕಂಪನಿಯಿಂದ ಶೇ 100ರಷ್ಟು ಪರಿಹಾರ ಹಾಗೂ ಮೃತ ಜಾನುವಾರಗಳ ರೈತರಿಗೂ ಕೂಡಾ ಸೂಕ್ತ ಪರಿಹಾರ ಬಿಡುಗಡೆ ಮಾಡಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಕೃಷಿ ಅಧಿಕಾರಿ ಆನಂದ ಅವರಿಗೂ ಮನವಿ ಪತ್ರ ಸಲ್ಲಿಸಿದ್ದಾರೆ. ರೈತರಾದ ಸಂತೋಷ ಜಾಧವ, ಅಂಕೋಶ ವಾಡೇಕರ, ರಾಜಕುಮಾರ ಶೇಳಕೆ, ದಿಗಂಬರ ವಾಡೇಕರ್, ಮಾರುತಿ ಮಚಕುರಿ, ಶಿವರಾಜ ಬಿರಾದಾರ ಹಾಗೂ ಇನ್ನಿತರರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.