ADVERTISEMENT

ಬೀದರ್‌ ಜಿಲ್ಲೆಯಾದ್ಯಂತ ನಾಲ್ಕನೇ ದಿನವೂ ಮುಂದುವರೆದ ಮಳೆ; ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 8:04 IST
Last Updated 26 ಜುಲೈ 2025, 8:04 IST
   

ಬೀದರ್‌: ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಸತತ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ನಾಲ್ಕನೇ ದಿನವಾದ ಶನಿವಾರವೂ ಮಳೆ ಸುರಿಯುತ್ತಿದೆ. ನಿರಂತರವಾಗಿ ಜಿಟಿಜಿಟಿ ಮಳೆಯಾಗುತ್ತಿದ್ದು, ನಡು ನಡುವೆ ಜೋರಾಗಿ ಬೀಳುತ್ತಿದೆ. ಶನಿವಾರ ಬೆಳಕು ಹರಿಯುತ್ತಿದ್ದಂತೆ ಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆಯಾಯಿತು. ಬಳಿಕ ಜಿಟಿಜಿಟಿಯಾಗಿ ಮುಂದುವರೆದಿದೆ.

ದೈನಂದಿನ ಕೆಲಸ, ಶಾಲಾ–ಕಾಲೇಜುಗಳಿಗೆ ಹೋಗುವವರು ಕೊಡೆ ಹಿಡಿದು, ರೇನ್‌ ಕೋಟ್‌ ಧರಿಸಿಕೊಂಡು ಮಳೆಯಲ್ಲೇ ಹೆಜ್ಜೆ ಹಾಕಿದರು. ಎಪಿಎಂಸಿ, ಗಾಂಧಿ ಗಂಜ್‌ನಲ್ಲಿ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿತು. ಬೀದಿ ಬದಿ ವ್ಯಾಪಾರಿಗಳು ಸಮಸ್ಯೆ ಎದುರಿಸಿದರು.

ADVERTISEMENT

ಸತತ ಮಳೆಗೆ ಹಲವು ತಗ್ಗುಪ್ರದೇಶಗಳು, ಗದ್ದೆಗಳಲ್ಲಿ ಅಪಾರ ಮಳೆ ನೀರು ಸಂಗ್ರಹಗೊಂಡಿದೆ. ನಗರದ ಹಾರೂರಗೇರಿ, ಬೊಮ್ಮಗೊಂಡೇಶ್ವರ ವೃತ್ತ, ಚಿದ್ರಿ ರಸ್ತೆಯಲ್ಲಿ ನೀರು ಸಂಗ್ರಹಗೊಂಡಿದ್ದು, ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸುತ್ತಿವೆ. ಇನ್ನೂ ಬಹುತೇಕ ಒಳ ರಸ್ತೆಗಳಲ್ಲಿ ಆಳುದ್ದದ ಗುಂಡಿಗಳು ಬಿದ್ದಿದ್ದು, ಜನ ಸಮಸ್ಯೆ ಎದುರಿಸುತ್ತಿದ್ದಾರೆ. ಸತತ ಮಳೆಗೆ ಶುಕ್ರವಾರ ಔರಾದ್‌ ತಾಲ್ಲೂಕಿನಲ್ಲಿ 4, ಕಮಲನಗರ ತಾಲ್ಲೂಕಿನಲ್ಲಿ ಒಂದು ಮನೆಗೆ ಹಾನಿ ಉಂಟಾಗಿತ್ತು.

‘ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ. ಕೃಷಿ ಇಲಾಖೆಯವರು ಸಮೀಕ್ಷೆ ನಡೆಸುತ್ತಿದ್ದಾರೆ. ಸಮೀಕ್ಷೆ ಪೂರ್ಣಗೊಂಡ ನಂತರ ಎಲ್ಲೆಲ್ಲಿ ಎಷ್ಟು ಬೆಳೆ ಹಾನಿಯಾಗಿದೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಲಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.