ADVERTISEMENT

ಬೀದರ್: ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆ

ಕಮಲನಗರ ತಾಲ್ಲೂಕಿನ ಮದನೂರಿನಲ್ಲಿ ಅಪಾರ ಹಾನಿ; ತಂತಿಗೆ ಜೋತುಬಿದ್ದ ತಗಡಿನ ಶೀಟುಗಳು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 17:26 IST
Last Updated 12 ಏಪ್ರಿಲ್ 2024, 17:26 IST
<div class="paragraphs"><p>ಬೀದರ್ ಜಿಲ್ಲೆಯಲ್ಲಿ ಭಾರಿ ಮಳೆ</p></div>

ಬೀದರ್ ಜಿಲ್ಲೆಯಲ್ಲಿ ಭಾರಿ ಮಳೆ

   

ಬೀದರ್: ಜಿಲ್ಲೆಯ ಹಲವೆಡೆ ಶುಕ್ರವಾರವೂ ಮಳೆಯಾಗಿದ್ದು, ವಾತಾವರಣ ಸಂಪೂರ್ಣ ತಂಪಾಯಿತು.

ಬಿರುಗಾಳಿಯಿಂದ ಕೂಡಿದ ಗುಡುಗು ಸಹಿತ ಮಳೆ ಅವಾಂತರವೂ ಸೃಷ್ಟಿಸಿದೆ. ಕಮಲನಗರ ತಾಲ್ಲೂಕಿನಲ್ಲಿ ಹಲವೆಡೆ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಕಮಲನಗರ–ಮದನೂರ, ಮದನೂರ–ಖತಗಾಂವ ರಸ್ತೆ ಸಂಪರ್ಕ ಕಡಿದು ಹೋಗಿದೆ. ಬಸ್‌ ಸಂಚಾರ ಸ್ಥಗಿತಗೊಂಡಿದ್ದು, ಅನೇಕರು ಕಮಲನಗರಕ್ಕೆ ಹಿಂತಿರುಗಿದರು.

ADVERTISEMENT

ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಗೆ ತೋಟಗಾರಿಕೆ ಬೆಳೆಗಳಿಗೂ ಹಾನಿಯಾಗಿದೆ. ಮದನೂರಿನಲ್ಲಿ ಅನೇಕ ಮನೆಯ ತಗಡಿನ ಶೀಟುಗಳು ಹಾರಿ ಹೋಗಿದ್ದು, ವಿದ್ಯುತ್‌ ತಂತಿಗಳ ಮಧ್ಯೆ ಬಿದ್ದಿವೆ. ಇದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಔರಾದ್ ಪಟ್ಟಣ ಸೇರಿದಂತೆ ತಾಲ್ಲೂಕಿನ ಸಂತಪುರ, ಚಿಂತಾಕಿ, ವಡಗಾಂವ್ ಹೋಬಳಿಗಳಲ್ಲೂ ವರ್ಷಧಾರೆಯಾಗಿದೆ. ಇನ್ನು, ಬೀದರ್‌ ನಗರ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಶುಕ್ರವಾರ ರಾತ್ರಿ 9.30ರಿಂದ 10.30ರ ತನಕ ಎಡೆಬಿಡದೆ ಬಿರುಸಿನ ಮಳೆಯಾಗಿದೆ. ಜಿಲ್ಲೆಯ‌ ಬಸವಕಲ್ಯಾಣ, ಹುಲಸೂರ, ಹುಮನಾಬಾದ್ನಲ್ಲಿ ಸಂಜೆ ಶುರುವಾದ ಮಳೆ, ರಾತ್ರಿ ತನಕ ಸುರಿದಿದೆ.

ಗುರುವಾರವೂ ಜಿಲ್ಲೆಯಲ್ಲಿ ಮಳೆಯಾಗಿತ್ತು. ಶುಕ್ರವಾರ ಮೋಡ ಕವಿದ ವಾತಾವರಣ ಇತ್ತು. ಸೂರ್ಯ ದಿನವಿಡೀ ಮೋಡಗಳ ನಡುವೆ ಕಣ್ಣಾಮುಚ್ಚಾಲೆ ಆಡುತ್ತಿದ್ದ. ಸಂಜೆ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಿದೆ. ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿದೆ. ಇನ್ನೂ ಎರಡ್ಮೂರು ದಿನಗಳವರೆಗೆ ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಸವಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯ ಮೇಲೂ ಮಳೆಯ ಪರಿಣಾಮ ಉಂಟಾಯಿತು. ಬಿರುಗಾಳಿಯೊಂದಿಗೆ ಮಳೆ ಹನಿಗಳು ಬೀಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದವರು ಅಲ್ಲಿಂದ ನಿರ್ಗಮಿಸಲು ಆರಂಭಿಸಿದರು. ಮುಖಂಡರು ಭಾಷಣಗಳನ್ನು ಸಂಕ್ಷಿಪ್ತವಾಗಿ ಮೊಟಕುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.