ADVERTISEMENT

ಕರ್ನಾಟಕ ಏಕೀಕರಣ ಹೋರಾಟದ ರೂವಾರಿ; ಹಾವನೂರು ವರದಿ ಸುಟ್ಟು ಹಾಕಿ ಆಕ್ರೋಶ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ಜನವರಿ 2026, 2:39 IST
Last Updated 18 ಜನವರಿ 2026, 2:39 IST
ರಾಜ್ಯಮಟ್ಟದ ದ್ವಿತೀಯ ರೈತ ಸಮ್ಮೇಳನದಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ, ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರೊಂದಿಗೆ ಭೀಮಣ್ಣ ಖಂಡ್ರೆ ಚರ್ಚೆಯಲ್ಲಿ ತೊಡಗಿರುವುದು
ರಾಜ್ಯಮಟ್ಟದ ದ್ವಿತೀಯ ರೈತ ಸಮ್ಮೇಳನದಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ, ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರೊಂದಿಗೆ ಭೀಮಣ್ಣ ಖಂಡ್ರೆ ಚರ್ಚೆಯಲ್ಲಿ ತೊಡಗಿರುವುದು   

ಬೀದರ್‌: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರೂ ಆದ ಮಾಜಿಸಚಿವ ಭೀಮಣ್ಣ ಖಂಡ್ರೆಯವರ ಇಡೀ ವ್ಯಕ್ತಿತ್ವವನ್ನು ವರ್ಣಿಸಲು ಈ ಮೇಲಿನ ಸಾಲು ಸಾಕು.

ಸಮಾಜವಾದಿ ವಿಚಾರಧಾರೆಯ ಜಯಪ್ರಕಾಶ ನಾರಾಯಣ, ರಾಮ ಮನೋಹರ್ ಲೋಹಿಯಾ, ಅಶೋಕ್‌ ಮೆಹ್ತಾ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದ ಖಂಡ್ರೆಯವರು ಅದನ್ನೇ ಮೈಗೂಡಿಸಿಕೊಂಡಿದ್ದರು. ಜೀವನದುದ್ದಕ್ಕೂ ಅದರಂತೆ ಬದುಕಿ ತೋರಿಸಿದರು.

ಯೌವನಾವಸ್ಥೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರೇರಣೆಗೊಂಡಿದ್ದ ಅವರು, ಅಂದಿನ ಹೈದರಾಬಾದ್‌ ಕರ್ನಾಟಕದ ರಜಾಕಾರರ ದೌರ್ಜನ್ಯದ ವಿರುದ್ಧ ಸೆಟೆದು ನಿಂತು, ಹೋರಾಟದಲ್ಲಿ ದುಮುಕಿದರು.

ADVERTISEMENT

ಅದೇ ಅವರಿಗೆ ಆನಂತರ ಪ್ರಜಾ ಸಮಾಜವಾದಿ ಪಕ್ಷದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. 1953ರಲ್ಲಿ ಭಾಲ್ಕಿ ಪುರಸಭೆಯ ಮೊದಲ ಚುನಾಯಿತ ಅಧ್ಯಕ್ಷರಾಗಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡರು. ಆನಂತರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದರು. 1962, 1967, 1978 ಹಾಗೂ 1983ರಲ್ಲಿ ಭಾಲ್ಕಿ ಕ್ಷೇತ್ರದಲ್ಲಿ ನಾಲ್ಕು ಸಲ ಶಾಸಕರಾಗಿ ಆಯ್ಕೆಯಾದರು. 1988 ಮತ್ತು 1994ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ಕೆಲಸ ನಿರ್ವಹಿಸಿದರು.

1992ರಿಂದ 1994ರಲ್ಲಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕೆಲಸ ಮಾಡಿದರು. ಆನಂತರ ಅವರು ಸಕ್ರೀಯ ರಾಜಕಾರಣದಿಂದ ಹಿಂದೆ ಸರಿದು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜವಾಬ್ದಾರಿ ವಹಿಸಿಕೊಂಡು, ನಾಡಿನಾದ್ಯಂತ ಸಂಚರಿಸಿ ಮಹಾಸಭೆಗೆ ಮೊದಲ ಬಾರಿಗೆ ಸದಸ್ಯತ್ವ ಅಭಿಯಾನ ಆರಂಭಿಸಿ ಬಲಪಡಿಸಿದರು. ಬೆಂಗಳೂರಿನ ಅರಮನೆ ರಸ್ತೆಯಲ್ಲಿ ಮಹಾಸಭೆಯ ಕಚೇರಿ ಆರಂಭಿಸಿ, ರಾಜಧಾನಿಯಲ್ಲಿ ಸಂಘಟನೆಯ ಚಟುವಟಿಕೆಗಳಿಗೆ ಇಂಬು ಕೊಟ್ಟರು.

ನಾಡಿಗೆ ಪರಿಚಯಿಸಿದ ಘಟನೆಗಳು...

ದೇವರಾಜ ಅರಸು ಅವರ ಕಾಲದಲ್ಲಿ ನಡೆದ ಎರಡು ಘಟನೆಗಳು ಭೀಮಣ್ಣ ಖಂಡ್ರೆ ಅವರನ್ನು ಇಡೀ ನಾಡಿಗೆ ಪರಿಚಯಿಸಿತು. ಮಳೆಗಾಲ ಆರಂಭಗೊಂಡರೂ ಸರ್ಕಾರ ರೈತರಿಗೆ ಬೀಜ ವಿತರಿಸಿರಲಿಲ್ಲ. ಈ ವಿಷಯ ಗೊತ್ತಾದ ನಂತರ ಬೀಜ ಸಂಗ್ರಹಿಸಿದ ಗೋದಾಮುಗಳ ಬೀಗ ಒಡೆದು, ರೈತರಿಗೆ ವಿತರಿಸಿದರು. ಇದಕ್ಕಾಗಿ ಅವರ ಬಂಧನವಾಯಿತು. ಆದರೆ, ಇಡೀ ರೈತ ಕುಲ ಅವರ ಪರ ನಿಂತಿದ್ದರಿಂದ ಸರ್ಕಾರ ತಲೆಬಾಗಬೇಕಾಯಿತು.

ಇನ್ನೊಂದು ಪ್ರಮುಖ ಘಟನೆಯೆಂದರೆ ವಿಧಾನಸಭೆಯಲ್ಲಿಯೇ ಹಾವನೂರು ವರದಿಯನ್ನು ವಿರೋಧಿಸಿ, ಅದರ ಕರಡು ಪ್ರತಿಗಳನ್ನು ಹರಿದು, ಅಲ್ಲಿಯೇ ಸುಟ್ಟು ಹಾಕಿದರು. ಹಿಂದುಳಿದವರಿಗೆ ಜಾತಿ ಆಧರಿಸಿ ಮೀಸಲಾತಿ ಕೊಡುವುದು ಸರಿಯಲ್ಲ. ಅವರ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮೀಸಲಾತಿ ಕೊಡಬೇಕೆನ್ನುವುದು ಖಂಡ್ರೆಯವರ ಬಲವಾದ ವಾದವಾಗಿತ್ತು. ಸದನದಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಕುರ್ಚಿ ಮೇಲೆ ಕುಳಿತು ಗಮನ ಸೆಳೆದಿದ್ದರು.

ಲಿಂಗೈಕ್ಯ ಚ‌ನ್ನಬಸವ ಪಟ್ಟದ್ದೇವರು, ಜಯದೇವಿತಾಯಿ ಲಿಗಾಡೆ, ಪ್ರಭುರಾವ ಕಂಬಳಿವಾಲೆ ಅವರೊಂದಿಗೆ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪಾಲ್ಗೊಂಡು ಪ್ರಮುಖ ಪಾತ್ರ ವಹಿಸಿದ್ದರು. ಮರಾಠಿ ಭಾಷಿಕರು ಭಾಲ್ಕಿ ಸೇರಿದಂತೆ ಬೀದರ್‌ ಜಿಲ್ಲೆಯ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಹೋರಾಟ ಆರಂಭಿಸಿದ್ದರು. ಇದಕ್ಕೆ ಪ್ರತಿಯಾಗಿ ಹೋರಾಟ ಆರಂಭಿಸಿ, ಭಾಲ್ಕಿಯನ್ನು ಕರ್ನಾಟಕದಲ್ಲಿಯೇ ಉಳಿಯುವಂತೆ ಮಾಡಿದ್ದರು. ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯ ಕಟ್ಟುವುದರಲ್ಲೂ ಮುಖ್ಯ ಪಾತ್ರ ವಹಿಸಿದ ಅವರು, ಬಿಎಸ್‌ಎಸ್‌ಕೆ ಹಾಗೂ ಎಂಜಿಎಸ್‌ಎಸ್‌ಕೆ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು.

‘ಬಸವಣ್ಣನವರಂತೆ ಬದುಕಬೇಕು, ಸಂಕಷ್ಟ ಎದುರಾದಾಗ ಛತ್ರಪತಿ ಶಿವಾಜಿ ಮಹಾರಾಜರಂತೆ ಹೋರಾಟ ನಡೆಸಬೇಕು’ ಎಂದು ಎಲ್ಲ ಸಭೆ, ಸಮಾರಂಭಗಳಲ್ಲಿ ಗಟ್ಟಿ ದನಿಯಲ್ಲಿ ಹೇಳುತ್ತಿದ್ದರು. ಸಾತ್ವಿಕ ಬದುಕು ಮೈಗೂಡಿಸಿಕೊಂಡಿದ್ದ ಅವರು ತುಂಬು ಜೀವನ ನಡೆಸಿ, ಈಗ ಇಹಲೋಕ ತ್ಯಜಿಸಿದ್ದಾರೆ.

‘ಮಿತ ಆಹಾರ ಸೇವನೆ, ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿದ್ದ ಭೀಮಣ್ಣ ಖಂಡ್ರೆ ಅವರು ನೇರ, ನಿಷ್ಠುರ ಹಾಗೂ ಸ್ವಾಭಿಮಾನದ ವ್ಯಕ್ತಿಯಾಗಿದ್ದರು. ಯಾವುದೇ ಜನಪರ ಹೋರಾಟವಿದ್ದರೂ ಸದಾ ಮುಂಚೂಣಿಯಲ್ಲಿರುತ್ತಿದ್ದರು. ರಜಾಕಾರರ ವಿರುದ್ಧದ ಹೋರಾಟ, ಕರ್ನಾಟಕ ಏಕೀಕರಣ, ಬೀಜ ಆಂದೋಲನ, ಹಾವನೂರು ವರದಿ ಅನುಷ್ಠಾನ ವಿರುದ್ಧದ ಹೋರಾಟದ ಮೂಲಕ ನಾಡಿಗೆ ಪರಿಚಯವಾದರು. ರಾಜಿ ಮಾಡಿಕೊಂಡು ರಾಜಕೀಯ ಮಾಡಿಕೊಳ್ಳುವ ಸ್ವಭಾವ ಅವರದಾಗಿರಲಿಲ್ಲ. ಎಲ್ಲರನ್ನೂ ಪ್ರೀತಿ ಗೌರವಾದರಗಳಿಂದ ಕಾಣುತ್ತಿದ್ದರು. ಪತ್ನಿ ಹಾಗೂ ಮಕ್ಕಳಿಗೂ ಬಹುವಚನ ಬಳಸಿ ಮಾತನಾಡುತ್ತಿದ್ದರು. ಇದರಿಂದ ಅವರ ವ್ಯಕ್ತಿತ್ವ ಮನಗಾಣಬಹುದು’ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲ ನಿವೃತ್ತ ಪ್ರಾಚಾರ್ಯ ವಿಠ್ಠಲದಾಸ್‌ ಪ್ಯಾಗೆ, ಮುಖಂಡ ಬಸವರಾಜ ಬುಳ್ಳಾ ಅವರು.

2009ರಲ್ಲಿ ಬೆಂಗಳೂರಿನಲ್ಲಿ ನಡೆದ ವೀರಶೈವ ಲಿಂಗಾಯತ ಭವನದ ಉದ್ಘಾಟನಾ ಸಮಾರಂಭದಲ್ಲಿ ನಾಡಿನ ಸ್ವಾಮೀಜಿಗಳು ರಾಜಕೀಯ ಮುಖಂಡರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಭೀಮಣ್ಣ ಖಂಡ್ರೆ
ಕಾರ್ಯಕ್ರಮವೊಂದರಲ್ಲಿ ತಂದೆ–ಮಗನ ಚರ್ಚೆ
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಅವರ ಪರ ಪ್ರಚಾರ ಕೈಗೊಂಡಿದ್ದ ಭೀಮಣ್ಣ ಖಂಡ್ರೆ
ವೀರಶೈವ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗೆ ಒತ್ತಾಯಿಸಿ ಸೋನಿಯಾ ಗಾಂಧಿ ಬಳಿ ನಿಯೋಗ ಕರೆದೊಯ್ದು ಭೇಟಿ ಮಾಡಿಸಿದ್ದ ಭೀಮಣ್ಣ ಖಂಡ್ರೆ
ಭೀಮಣ್ಣ ಖಂಡ್ರೆಯವರು ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಕಟ್ಟಾ ಶಿಷ್ಯರಾಗಿದ್ದರು. ಗುರುವಿನ ನೆಚ್ಚಿನ ಶಿಷ್ಯರಾಗಿ ಸಮಾಜೋಧಾರ್ಮಿಕ ಕೆಲಸ ಮಾಡಿದ್ದರು.
–ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷ ಬಸವಕಲ್ಯಾಣ ಅನುಭವ ಮಂಟಪ
ಭೀಮಣ್ಣ ಖಂಡ್ರೆಯವರು ಲಿಂಗಾಯತ ಸಮಾಜ ಹಾಗೂ ಈ ನಾಡಿಗೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಅವರು ಭೌತಿಕ ಇಲ್ಲವಾದರೂ ಅವರ ಕೆಲಸದಿಂದ ಸದಾ ಜೀವಂತವಾಗಿರುತ್ತಾರೆ
–ಗುರುಬಸವ ಪಟ್ಟದ್ದೇವರು ಪೀಠಾಧಿಪತಿ ಭಾಲ್ಕಿ ಹಿರೇಮಠ ಸಂಸ್ಥಾನ
ಭೀಮಣ್ಣ ಖಂಡ್ರೆಯವರು ಅವರ ಕೆಲಸಗಳ ಮೂಲಕ ಸಮಾಜದಲ್ಲಿ ಚಿರಸ್ಥಾಯಿಯಾಗಿದ್ದಾರೆ. ನಾಡು ನುಡಿಗಾಗಿ ಸಲ್ಲಿಸಿದ ಅವರ ಸೇವೆ ಸದಾ ಸ್ಮರಣೀಯ.
–ಶಿವಾನಂದ ಸ್ವಾಮೀಜಿ ಪೀಠಾಧಿಪತಿ ಗುರುಬಸವೇಶ್ವರ ಸಂಸ್ಥಾನ ಮಠ ಹುಲಸೂರು
ಭೀಮಣ್ಣ ಖಂಡ್ರೆ ಹಾಗೂ ಅವರ ಕುಟುಂಬದ ಕೊಡುಗೆ ಈ ನಾಡಿಗೆ ಬಹಳ ದೊಡ್ಡದಿದೆ. ಅವರ ಋಣ ಸಮಾಜ ಎಂದಿಗೂ ಮರೆಯಲಾರದು.
–ತಡೋಳಾ ರಾಜೇಶ್ವರ ಶಿವಾಚಾರ್ಯರು

ಅನುಭವ ಮಂಟಪಕ್ಕೆ ಹೆಗಲು ಕೊಟ್ಟರು 80ರ ದಶಕದಲ್ಲಿ ಬಸವಕಲ್ಯಾಣದಲ್ಲಿ ಅನುಭವ ಮಂಟಪದ ನಿರ್ಮಾಣದಲ್ಲಿ ಭೀಮಣ್ಣ ಖಂಡ್ರೆ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದರು. ಪಟ್ಟದ್ದೇವರ ಕಟ್ಟಾ ಶಿಷ್ಯರಾಗಿದ್ದ ಅವರು ಅವರ ನಡೆ ನುಡಿಯಿಂದ ಬಹಳ ಪ್ರಭಾವಿತರಾಗಿದ್ದರು. ಕನ್ನಡದ ಮಠವೆಂದೇ ಗುರುತಿಸಿಕೊಂಡಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ಎಲ್ಲಾ ಕೆಲಸಗಳಿಗೆ ಒತ್ತಾಸೆಯಾಗಿ ನಿಂತು ಗಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕನ್ನಡ ಉಳಿಸಿ ಬೆಳೆಸುವ ಕೆಲಸ ಮಾಡಿದ್ದರು. ಈಗ ಹಳೆಯ ಅನುಭವ ಮಂಟಪದ ಮಗ್ಗುಲಲ್ಲಿ ರಾಜ್ಯ ಸರ್ಕಾರವು ₹ 750 ಕೋಟಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಿಸುತ್ತಿದೆ. 

ಗಾಂಧಿ ಕುಟುಂಬಕ್ಕೆ ಪರಮಾಪ್ತರು ಮಾಜಿಪ್ರ ಧಾನಿ ಇಂದಿರಾ ಗಾಂಧಿ ಅವರು ಜಾರಿಗೆ ತಂದಿದ್ದ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಅಭಿಯಾನವನ್ನು ಬೀದರ್‌ ಜಿಲ್ಲೆಯಲ್ಲಿ ಯಶಸ್ಸುಗೊಳಿಸಲು ಟೊಂಕ ಕಟ್ಟಿ ನಿಂತುಕೊಂಡು ಕೆಲಸ ಮಾಡಿದವರು ಭೀಮಣ್ಣ ಖಂಡ್ರೆ. ಈ ವಿಷಯ ಅರಿತ ಇಂದಿರಾ ಗಾಂಧಿ ಹಾಗೂ ಅವರ ಮಗ ಸಂಜಯ್‌ ಗಾಂಧಿ ಅವರು ಭೀಮಣ್ಣ ಖಂಡ್ರೆಯವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದರು. ಗಾಂಧಿ ಕುಟುಂಬಕ್ಕೆ ಆರಂಭದಿಂದಲೂ ನಿಷ್ಠರಾಗಿದ್ದ ಅವರು ಆನಂತರ ರಾಜೀವ್ ಗಾಂಧಿ ಸೋನಿಯಾ ಗಾಂಧಿ ರಾಹುಲ್‌ ಗಾಂಧಿ ಅವರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು. ಈ ಎಲ್ಲ ನಾಯಕರನ್ನು ಭಾಲ್ಕಿಗೆ ಕರೆಸಿದ್ದು ವಿಶೇಷ.

ತಂದೆ ನಾಲ್ಕು ಸಲ ಮಕ್ಕಳು ಆರು ಸಲ ಭಾಲ್ಕಿ ವಿಧಾನಸಭಾ ಕ್ಷೇತ್ರದ ಮೇಲೆ ಭೀಮಣ್ಣ ಖಂಡ್ರೆ ಕುಟುಂಬ ಆರಂಭದಿಂದಲೂ ಹಿಡಿತ ಸಾಧಿಸಿದೆ. ಭೀಮಣ್ಣ ಖಂಡ್ರೆಯವರು ಕ್ಷೇತ್ರವನ್ನು ನಾಲ್ಕು ಸಲ ಪ್ರತಿನಿಧಿಸಿದರೆ ಇವರ ಹಿರಿಯ ಮಗ ದಿವಂಗತ ವಿಜಯಕುಮಾರ್‌ ಖಂಡ್ರೆ ಎರಡು ಸಲ ಹಾಗೂ ಪರಿಸರ ಅರಣ್ಯ ಸಚಿವರೂ ಆದ ಈಶ್ವರ ಬಿ. ಖಂಡ್ರೆ ನಾಲ್ಕನೇ ಸಲ ಚುನಾಯಿತರಾಗಿದ್ದಾರೆ. ಕಿರಿಯ ಮಗ ಅಮರಕುಮಾರ್‌ ಖಂಡ್ರೆ ಡಿಸಿಸಿ ಬ್ಯಾಂಕಿನ ಚುಕ್ಕಾಣಿ ಹಿಡಿದಿದ್ದಾರೆ. ಇವರ ಮೊಮ್ಮಗ ಸಾಗರ್ ಖಂಡ್ರೆ ಬೀದರ್‌ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗೆ ಭಾಲ್ಕಿ ಹಾಗೂ ಬೀದರ್‌ ಜಿಲ್ಲೆಯ ಮೇಲೆ ಹತೋಟಿ ಸಾಧಿಸಿದ್ದು ಗಾಢವಾದ ಪ್ರಭಾವ ಹೊಂದಿದ್ದಾರೆ.

ಸ್ವತಂತ್ರ ಧರ್ಮದ ಮಾನ್ಯತೆಗೆ ಹೋರಾಟ ವೀರಶೈವ ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕವಾಗಿ ಸ್ವತಂತ್ರ ಧರ್ಮದ ಮಾನ್ಯತೆ ಸಿಗಲು ಶ್ರಮಿಸಿದವರಲ್ಲಿ ಮುಂಚೂಣಿಯಲ್ಲಿದ್ದವರು ಭೀಮಣ್ಣ ಖಂಡ್ರೆ ಕೂಡ ಒಬ್ಬರು. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ನಿಯೋಗ ತೆಗೆದುಕೊಂಡು ಹೋಗಿ ಸೋನಿಯಾ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಬಸವ ಪರಂಪರೆಯ ವಿರಕ್ತ ಮಠಾಧೀಶರು ಹಾಗೂ ಪಂಚಾಚಾರ್ಯರ ನಡುವೆ ಸಮನ್ವಯ ಸಾಧಿಸಿ ಸಮಾಜವನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದರು.

ನಾಲ್ಕು ಭಾಷೆಗಳ ಮೇಲೆ ಹಿಡಿತ ಭಾಲ್ಕಿ ಹಿರೇಮಠದಿಂದ ಕನ್ನಡ ಶಿಕ್ಷಣ ಶರಣತ್ವದ ದೀಕ್ಷೆ ಪಡೆದಿದ್ದ ಭೀಮಣ್ಣ ಖಂಡ್ರೆ ಅವರು ಉರ್ದು ಪಾರಸಿ ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಚೆನ್ನಾಗಿ ಅರಿತಿದ್ದರು. ಬಿಎ ಎಲ್‌ಎಲ್‌ಬಿ ಪದವಿ ಪೂರೈಸಿದ್ದ ಅವರು ಕೆಲಕಾಲ ವಕೀಲರಾಗಿಯೂ ಸೇವೆ ಸಲ್ಲಿಸಿದರು. ರೈತ ಚಳವಳಿ ರಾಜಕೀಯ ಸಹಕಾರ ರಂಗಕ್ಕೆ ಪದಾರ್ಪಣೆ ಮಾಡಿದ ನಂತರ ವಕೀಲಿ ವೃತ್ತಿಯಿಂದ ದೂರ ಉಳಿದಿದ್ದರು. ಆದರೆ ಕಾನೂನು ವಿಷಯದಲ್ಲಿ ಪರಾಂಗತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.