ADVERTISEMENT

ಬೀದರ್ | ಜನಿವಾರಕ್ಕಾಗಿ ಪರೀಕ್ಷೆಗೆ ನಿರಾಕರಣೆ: ಮಕ್ಕಳ ಆಯೋಗದ ಸದಸ್ಯ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 10:21 IST
Last Updated 18 ಏಪ್ರಿಲ್ 2025, 10:21 IST
   

ಬೀದರ್‌: ಜನಿವಾರ ಧರಿಸಿದ ಕಾರಣಕ್ಕಾಗಿ ಕೆ–ಸಿಇಟಿ ಪರೀಕ್ಷಾ ಕೇಂದ್ರದೊಳಗೆ ತೆರಳಲು ಅವಕಾಶ ಕೊಡದ ಕಾರಣ ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿ ಸುಚಿವ್ರತ್‌ ಅವರ ಚೌಬಾರದಲ್ಲಿರುವ ನಿವಾಸಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಶುಕ್ರವಾರ ಭೇಟಿ ನೀಡಿದರು.

ಸುಚಿವ್ರತ್‌ ಹಾಗೂ ಅವರ ಪೋಷಕರಿಗೆ ಧೈರ್ಯ ತುಂಬಿದ ಕೋಸಂಬೆ ಅವರು, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನ್ಯಾಯ ಒದಗಿಸುವ ಭರವಸೆ ನೀಡಿದರು.

‘ಭಾರತ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಸಮಾನತೆಯ ಹಕ್ಕಿನಡಿಯಲ್ಲಿ ಬರುವ ಕಲಂ 15ರಲ್ಲಿ ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವುದು ನಿಷೇಧಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ನವೆಂಬರ್ 20, 1989ರಲ್ಲಿ ಅಂಗೀಕಾರವಾದಂತೆ ಭಾರತ ಸರ್ಕಾರವು 1992 ಡಿಸೆಂಬರ್ 11ರಂದು ಸಹಿ ಮಾಡಿರುವಂತೆ ಪರಿಚ್ಛೇದ 14ರ ಅಡಿ ಆತ್ಮಸಾಕ್ಷಿ ಹಾಗೂ ಧರ್ಮದ ಅನುಸರಣೆಯ ಧಾರ್ಮಿಕ ಹಕ್ಕಿನ ಉಲ್ಲಂಘನೆ ಇದು. ಜನಿವಾರ ಕಾರಣಕ್ಕಾಗಿ ಪರೀಕ್ಷಾ ಕೇಂದ್ರದೊಳಗೆ ತೆರಳಲು ಬಿಡದೇ ಸಾಯಿಸ್ಫೂರ್ತಿ ಕಾಲೇಜಿನ ಸಿಬ್ಬಂದಿ ಪ್ರಮಾದ ಎಸಗಿದ್ದಾರೆ. ಅವರ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಬೇಕು. ಈ ಸಂಬಂಧ ಸಂಬಂಧಿಸಿದವರೊಂದಿಗೆ ಚರ್ಚಿಸುವೆ’ ಎಂದು ತಿಳಿಸಿದರು.

ಸುಚಿವ್ರತ್‌ ಅವರು ಗುರುವಾರ ಬೆಳಿಗ್ಗೆ 10.30ಕ್ಕೆ ಕೆ–ಸಿಇಟಿ ಗಣಿತ ವಿಷಯದ ಪರೀಕ್ಷೆ ಬರೆಯಲು ಗುಂಪಾ ಸಮೀಪದ ಸಾಯಿಸ್ಫೂರ್ತಿ ಕಾಲೇಜಿಗೆ ಹೋಗಿದ್ದರು. ‘ಜನಿವಾರ ತೆಗೆದು ಕೇಂದ್ರದೊಳಗೆ ಹೋಗಬೇಕು. ಇಲ್ಲವಾದರೆ ಒಳಗೆ ಬಿಡುವುದಿಲ್ಲ’ ಎಂದು ಅಲ್ಲಿನ ಸಿಬ್ಬಂದಿ ತಾಕೀತು ಮಾಡಿದರು. ಇದರಿಂದ ಮನನೊಂದ ಸುಚಿವ್ರತ್‌ ಮನೆಗೆ ಹಿಂತಿರುಗಿದ್ದರು.

‘ಜನಿವಾರ ಕಳಚಿ ಪರೀಕ್ಷೆ ಬರೆಯಲು ತಾಕೀತು; ಮನನೊಂದು ಮನೆಗೆ ಹಿಂತಿರುಗಿದ ವಿದ್ಯಾರ್ಥಿ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಶುಕ್ರವಾರ (ಏ.18) ವರದಿ ಪ್ರಕಟಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವ್ಯಾಪಕವಾಗಿ ಹರಡಿ, ಎಲ್ಲೆಡೆ ಭಾರಿ ಚರ್ಚೆ ಹುಟ್ಟು ಹಾಕಿತ್ತು.

ಖಂಡನೆ: ಬಿಜೆಪಿ ಮುಖಂಡ ಈಶ್ವರ ಸಿಂಗ್‌ ಠಾಕೂರ್‌ ಅವರು ಸುಚಿವ್ರತ್‌ ಅವರ ಮನೆಗೆ ಭೇಟಿ ನೀಡಿ, ಧೈರ್ಯ ತುಂಬಿದರು. ನ್ಯಾಯ ಕೊಡಿಸುವ ಭರವಸೆ ನೀಡಿ, ಘಟನೆಯನ್ನು ಖಂಡಿಸಿದರು.

ತನಿಖೆ ನಡೆಸಿ ಶಿಸ್ತು ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ
‘ಜನಿವಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸದ ಪ್ರಕರಣದ ತನಿಖೆಯನ್ನು ಉಪವಿಭಾಗಾಧಿಕಾರಿ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಿ, ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಬೇಕು. 24 ಗಂಟೆಯೊಳಗೆ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ನಿರ್ದೇಶನ ನೀಡಿದ್ದಾರೆ. ‘ಬೀದರ್‌ನ ಚೌಬಾರ ನಿವಾಸಿ ಸುಚಿವ್ರತ್‌ ಅವರು ಕೆ–ಸಿಇಟಿ ಗಣಿತ ವಿಷಯದ ಪರೀಕ್ಷೆ ಬರೆಯಲು ಸಾಯಿ ಸ್ಫೂರ್ತಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದರು. ಜನಿವಾರ ತೆಗೆದಿಡದ ಹೊರತು ಪರೀಕ್ಷಾ ಕೊಠಡಿಗೆ ಬಿಡುವುದಿಲ್ಲ ಎಂದು ಸಿಬ್ಬಂದಿ ತಡೆ ಒಡ್ಡಿದ್ದಾರೆ. ಆ ವಿದ್ಯಾರ್ಥಿ ಪರೀಕ್ಷೆ ಬರೆಯದೇ ಮನನೊಂದು ಮನೆಗೆ ತೆರಳಿದ್ದಾನೆ. ಆ ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯವೇ ನಾಶವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.