ADVERTISEMENT

ಮುಂದಿನ ವಾರ ಕೆಡಿಪಿ ಸಭೆ ಕರೆಯಿರಿ: ಶಾಸಕ ಈಶ್ವರ ಖಂಡ್ರೆ

ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲಗೆ ಪತ್ರ ಬರೆದ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:36 IST
Last Updated 18 ಮೇ 2022, 4:36 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಭಾಲ್ಕಿ: ಬೀದರ್ ಜಿಲ್ಲೆಯ ಸಮಸ್ಯೆ ಮತ್ತು ಕಲ್ಯಾಣ ಕರ್ನಾಟಕ ಭಾಗದ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಲು ಮುಂದಿನ ವಾರದೊಳಗೆ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಕರೆಯುವಂತೆ ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಪತ್ರ ಬರೆದಿರುವ ಅವರು,‘ಜಿಲ್ಲೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ತಾವು ತಮ್ಮ ಅಧ್ಯಕ್ಷತೆಯಲ್ಲಿ ಈ ಹಿಂದೆ ಮೇ 3 ರಂದು ಬಸವ ಜಯಂತಿ ದಿನದಂದು ಸಭೆ ಕರೆದಿದ್ದೀರಿ. ಸಭೆಯಲ್ಲಿ ಭಾಗವಹಿಸಲು ನಾನು ಕೂಡ ಬೀದರ್‌ಗೆ ಆಗಮಿಸಿದ್ದೆ. ಆದರೆ ಸಭೆಯನ್ನು ಏಕಾಏಕಿ ಮುಂದೂಡಲಾಯಿತು. ಈಗ ಮೇ 17 ರಂದು ಕರೆದ ಸಭೆಯ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಲಿಲ್ಲ. 16 ರಂದು ರಾತ್ರಿ 10 ಗಂಟೆಗೆ ಸಭೆ ಇರುವ ಬಗ್ಗೆ ಗಮನಕ್ಕೆ ಬಂದಿದೆ’ ಎಂದು ಹೇಳಿದ್ದಾರೆ.

ದಿಢೀರ್ ಕರೆದಿರುವ ಸಭೆಯಲ್ಲಿ ಬೀದರ್ ಜಿಲ್ಲೆಯ ಸಮಸ್ಯೆ ಮತ್ತು ಯೋಜನಗೆಗಳ ಬಗ್ಗೆ ಚರ್ಚಿಸಲು ಆಗುವುದಿಲ್ಲ. ಜಿಲ್ಲೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಬಜೆಟ್‍ನಲ್ಲಿ ಹಂಚಿಕೆ ಮಾಡಲಾದ ಹಣವೂ ಪೂರ್ಣ ವೆಚ್ಚವಾಗುತ್ತಿಲ್ಲ. ಜಿಲ್ಲೆಯ ಹಲವು ಯೋಜನೆಗಳಿಗೆ ತಾಂತ್ರಿಕ ಅನುಮೋದನೆ ದೊರೆತಿದ್ದರೂ ಆಡಳಿತಾತ್ಮಕ ಅನುಮೋದನೆ ದೊರೆಯಲು ವಿಳಂಬವಾಗುತ್ತಿದೆ. ಇದರ ಜತೆಗೆ ಹಲವು ಯೋಜನೆಗಳಿಗೆ ಡಿಪಿಆರ್ ಕೂಡ ಆಗುತ್ತಿಲ್ಲ. ಈ ಎಲ್ಲದರ ಬಗ್ಗೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಸುವ ತುರ್ತು ಅಗತ್ಯವಿದೆ ಎಂದಿದ್ದಾರೆ. ಜಿಲ್ಲೆಯ ಕಬ್ಬು ಬೆಳೆಗಾರ ಕೃಷಿಕರು ಕಬ್ಬಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಇದರ ಜತೆಗೆ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿರುವ ರೈತರಿಗೆ ಬಾಕಿ ಹಣ ದೊರೆತಿಲ್ಲ. ಸರ್ಕಾರದ ವತಿಯಿಂದ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿಲ್ಲ. ಇದು ಹಿಂದುಳಿದ ಜಿಲ್ಲೆಯ ರೈತರಿಗೆ ಮಾಡಿರುವ ಘೋರ ಅನ್ಯಾಯವಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಜಿಲ್ಲೆಯ ಹಲವು ಕಡೆಗಳಲ್ಲಿ ತತ್ವಾರ ಆಗುತ್ತದೆ. ಕಳೆದ ಸಾಲಿನಲ್ಲಿ ಹೆಚ್ಚಿನ ಮಳೆ ಆಗಿದ್ದರೂ, ಸಮರ್ಪಕವಾಗಿ ಜಲಮೂಲ ನಿರ್ವಹಣೆ ಆಗದ ಕಾರಣ ಅಂತರ್ಜಲ ಮಟ್ಟವೂ ಹೆಚ್ಚಳವಾಗಿಲ್ಲ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.