ಖಟಕಚಿಂಚೋಳಿ ಗ್ರಾಮದ ರೈತ ನಾಗಪ್ಪ ತಮ್ಮ ಹೊಲದಲ್ಲಿ ಬೆಳೆದ ತರಕಾರಿ ಬೆಳೆಯೊಂದಿಗೆ
ಖಟಕಚಿಂಚೋಳಿ: ಇಲ್ಲಿನ ನಾಗಪ್ಪ ಎಂಬ ರೈತ ತಮ್ಮ ಮೂರು ಎಕರೆ ಪ್ರದೇಶದಲ್ಲಿ ಬಗೆ ಬಗೆಯ ತರಕಾರಿ ಬೆಳೆದು ಯಶಸ್ಸು ಕಂಡಿದ್ದಾರೆ.
ಕಳೆದ ಐದು ವರ್ಷಗಳಿಂದ ತಮ್ಮ ಮೂರು ಎಕರೆ ಪ್ರದೇಶದಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಹವಾಮಾನಕ್ಕೆ ಅನುಗುಣವಾಗಿ ವಿವಿಧ ತರಕಾರಿಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಂಡಿದ್ದಾರೆ.
ಸದ್ಯ ತಮ್ಮ ಮೂರು ಎಕರೆ ಪ್ರದೇಶದಲ್ಲಿ ಈರುಳ್ಳಿ, ಮೆಂತೆ, ಕೊತ್ತಂಬರಿ, ಟೊಮೆಟೊ, ಬದನೆಕಾಯಿ ಬೆಳೆದಿದ್ದಾರೆ. ಹೀಗೆ ಸಮಯಕ್ಕೆ ಅನುಸಾರವಾಗಿ ಬೆಳೆಗಳನ್ನು ಬೆಳೆದು ಲಾಭ ಕಂಡುಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
'ಪ್ರತಿ ವರ್ಷ ನಾನು ಮೂರು ಎಕರೆ ಹೊಲಕ್ಕೆ ಭೂಮಿ ಹದ ಮಾಡುವುದು, ಬೀಜ, ರಸಗೊಬ್ಬರ ಸೇರಿದಂತೆ ಇನ್ನಿತರ ಖರ್ಚು ಸೇರಿ ಸುಮಾರು ₹ 1.5 ಲಕ್ಷ ಖರ್ಚು ಮಾಡುತ್ತಾನೆ. ಅದಕ್ಕೆ ತಕ್ಕಂತೆ ಸಮಯಕ್ಕೆ ಅನುಸಾರವಾಗಿ ಕಳೆ ತೆಗೆಯುವುದು, ಔಷಧ ಸಿಂಪಡಣೆ ಮಾಡುತ್ತೇನೆ. ಹೀಗಾಗಿ ಇಳುವರಿ ಚೆನ್ನಾಗಿ ಬರುತ್ತಿದೆ. ಇದರಿಂದ ವಾರ್ಷಿಕ 3 ಲಕ್ಷ ಆದಾಯ ಪಡೆಯುತ್ತಿದ್ದೇನೆ' ಎಂದು ರೈತ ಸಂತಸ ವ್ಯಕ್ತಪಡಿಸುತ್ತಾರೆ.
‘ನಾನು ದಿನ ಬೆಳಿಗ್ಗೆ ಸುತ್ತ ಮುತ್ತಲಿನ ಹಳ್ಳಿಗಳ ಮನೆಗಳಿಗೆ ಹೋಗಿ ಉದ್ದು, ಹೆಸರು, ತೊಗರಿ ಸೇರಿದಂತೆ ಇನ್ನಿತರ ಧಾನ್ಯಗಳನ್ನು ಖರೀದಿಸುತ್ತೇನೆ. ಮಧ್ಯಾಹ್ನದಿಂದ ರಾತ್ರಿವರೆಗೆ ಹೊಲದಲ್ಲಿಯೇ ಕಾಲ ಕಳೆಯುತ್ತೇನೆ. ವಾರಕ್ಕೊಮ್ಮೆ ಹಳ್ಳಿಗಳಿಂದ ಖರೀದಿಸಿದ ಬೆಳೆಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತೇನೆ. ಇದರಿಂದ ಮಾರುಕಟ್ಟೆಯಲ್ಲಿ ಬೆಳೆಗಳ ಧಾರಣೆಯು ಗೊತ್ತಾಗುತ್ತದೆ’ ಎನ್ನುತ್ತಾರೆ.
‘ನಿರಂತರ ಪ್ರಯತ್ನ ಹಾಗೂ ತಾಳ್ಮೆಯಿಂದ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಖಂಡಿತ ಲಾಭ ಸಿಗುತ್ತದೆ. ಹವಾಮಾನಕ್ಕೆ ಅನುಗುಣವಾಗಿ ತರಕಾರಿಗಳನ್ನು ಬೆಳೆಯಬೇಕು. ಅಂದಾಗ ಮಾತ್ರ ಹೆಚ್ಚಿನ ಆದಾಯ ದೊರೆಯುತ್ತದೆ’ ಎಂದು ಹೇಳುತ್ತಾರೆ ನಾಗಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.