ಬೀದರ್: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದ ಪರಿಸರ, ಅರಣ್ಯ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಸದ್ಯದ ಮಟ್ಟಿಗೆ ಹಿನ್ನಡೆ ಉಂಟಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ಚರ್ಚೆಗಳು ಶುರುವಾದಾಗಿನಿಂದಲೂ ಈಶ್ವರ ಖಂಡ್ರೆಯವರ ಹೆಸರು ಮುಂಚೂಣಿಯಲ್ಲಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಖಂಡ್ರೆ ಅವರ ಬಗ್ಗೆ ಒಲವು ತೋರಿಸಿ, ಪಕ್ಷದ ವರಿಷ್ಠರಿಗೆ ಇವರ ಹೆಸರು ಸೂಚಿಸಿದ್ದರು. ಖಂಡ್ರೆ ಅವರು ಕೆಪಿಸಿಸಿ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿತ್ತು. ಆದರೆ, ಬೀದರ್ ಜಿಲ್ಲಾ ಕಾಂಗ್ರೆಸ್‌ನಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಬಿರುಸಿನ ಚಟುವಟಿಕೆಗಳಿಂದ ಅವರಿಗೆ ಹಿನ್ನಡೆ ಉಂಟಾಗಿದೆ. ಈಗ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಹೆಸರು ಮುಂಚೂಣಿಗೆ ಬಂದಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಬೀದರ್ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಸಮಾಧಾನಿತ ಮುಖಂಡರು ಇತ್ತೀಚೆಗೆ ಬೀದರ್ ಹಾಗೂ ಬೆಂಗಳೂರಿನಲ್ಲಿ ಸಭೆ ನಡೆಸಿ, ಸಚಿವ ಈಶ್ವರ ಬಿ. ಖಂಡ್ರೆ ವಿರುದ್ಧ ಪಕ್ಷದ ಹಿರಿಯ ಮುಖಂಡರಿಗೆ ದೂರು ನೀಡಿದ್ದೇ ಇದಕ್ಕೆ ಮುಖ್ಯ ಕಾರಣ ಎಂದು ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಿಸಲಾಗುತ್ತಿದೆ.
ಮಾಜಿಸಚಿವರೂ ಆದ ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ್ ಹುಮನಾಬಾದ್, ಮಾಜಿ ವಿಧಾನ ಪರಿಷತ್ ಸದಸ್ಯರೂ ಹಾಗೂ ಪಕ್ಷದ ಮುಖಂಡರಾದ ಅರವಿಂದಕುಮಾರ ಅರಳಿ, ಪುಂಡಲೀಕರಾವ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಮೂಲಗೆ ಸೇರಿದಂತೆ ಇತರೆ ಮುಖಂಡರ ನೇತೃತ್ವದಲ್ಲಿ ಸಭೆ ಸೇರಿ, ಈಶ್ವರ ಬಿ. ಖಂಡ್ರೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರು ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಿಗಿಂತ ಬಿಜೆಪಿ ಶಾಸಕರು, ಮುಖಂಡರ ಮಾತಿಗೆ ಮನ್ನಣೆ ನೀಡಲಾಗುತ್ತಿದೆ. ಪಕ್ಷಕ್ಕಾಗಿ ಶ್ರಮಿಸಿದವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದರು.
ಕಾಂಗ್ರೆಸ್ ಶಾಸಕರ ಅಹವಾಲು ಆಲಿಸಲು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ರಾಜಶೇಖರ ಪಾಟೀಲ್ ಹುಮನಾಬಾದ್, ಅರವಿಂದಕುಮಾರ ಅರಳಿ ಅವರು ವಿಮಾನ ನಿಲ್ದಾಣದಲ್ಲೇ ಭೇಟಿ ಮಾಡಿ, ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ದೂರು ಕೊಟ್ಟಿದ್ದರು.
ಇನ್ನು, ಸುರ್ಜೇವಾಲಾ ಅವರು ರಾಜಶೇಖರ ಪಾಟೀಲ್ ಹುಮನಾಬಾದ್ ಅವರೊಟ್ಟಿಗೆ ಸಭೆ ನಡೆಸಿ, ‘ಪಕ್ಷದ ಮೇಲಿನ ಕಾಳಜಿ, ಕಾರ್ಯಕರ್ತರ ನೋವಿನ ಅರಿವಾಗಿದೆ. ಎಲ್ಲವೂ ಸರಿಪಡಿಸಲಾಗುವುದು. ಆದರೆ, ಬಹಿರಂಗವಾಗಿ ಮಾಧ್ಯಮಗಳ ಎದುರು ಹೋಗಿ ಹೇಳಿಕೆ ನೀಡದಂತೆ ಸಲಹೆ ಮಾಡಿದ್ದಾರೆ’ ಎಂದು ಗೊತ್ತಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗಮನಕ್ಕೂ ವಿಷಯ ತರಲಾಗಿದ್ದು, ಅದನ್ನವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಈ ಸಂಬಂಧ ಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ಖಂಡ್ರೆ ಹೆಸರೇಕೆ ಮುಂಚೂಣಿಯಲ್ಲಿ?
ಈಶ್ವರ ಬಿ. ಖಂಡ್ರೆ ಅವರು ಎರಡನೇ ಸಲ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಉತ್ತಮ ವಾಕ್‌ಚಾತುರ್ಯ ಹೊಂದಿದ್ದಾರೆ. ಕನ್ನಡ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಮೇಲೆ ಹಿಡಿತ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿರುವ ಅವರು ರಾಜ್ಯದಲ್ಲಿರುವ ಮಠ–ಮಾನ್ಯಗಳು ಮಠಾಧೀಶರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಅರಣ್ಯ–ಪರಿಸರ ಖಾತೆಯ ಜವಾಬ್ದಾರಿ ಹೊತ್ತು ಚುರುಕಿನಿಂದ ಕೆಲಸ ಮಾಡಿ ಪಕ್ಷದ ಗಮನ ಸೆಳೆದಿದ್ದರು. ಈ ಎಲ್ಲ ಕಾರಣಗಳಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಅವರ ಹೆಸರು ಮುಂಚೂಣಿಯಲ್ಲಿತ್ತು. ಹಿಂದುಳಿದ ಬೀದರ್ ಜಿಲ್ಲೆಗೆ ಈ ಸಲ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿಯುವುದು ಗ್ಯಾರಂಟಿ ಎಂದೇ ಕಾಂಗ್ರೆಸ್‌ನವರು ಅತಿ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದರು. ಈಗ ಅದೇ ಪಕ್ಷದ ಹಲವು ಮುಖಂಡರು ಪಕ್ಷದ ವರಿಷ್ಠರಿಗೆ ಖಂಡ್ರೆ ವಿರುದ್ಧ ದೂರು ಸಲ್ಲಿಸಿರುವ ಕಾರಣ ಲೆಕ್ಕಾಚಾರ ಉಲ್ಟಾ ಆಗಿದೆ. ಈಗ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗುವುದು ಅಷ್ಟು ಸುಲಭವಲ್ಲ ಎಂದು ಸ್ವತಃ ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ.
ಅವಕಾಶ ಕೈಚೆಲ್ಲಿದರೆ?
ಬೀದರ್ ಜಿಲ್ಲೆಯ ಅಸಮಾಧಾನಿತ ಕಾಂಗ್ರೆಸ್ ಮುಖಂಡರು ಸಭೆ ಸೇರುವ ವಿಷಯ ಗೊತ್ತಿದ್ದರೂ ಸಚಿವ ಈಶ್ವರ ಬಿ. ಖಂಡ್ರೆಯವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅವರ ಮನವೊಲಿಸುವ ಕೆಲಸ ಮಾಡಲಿಲ್ಲ. ಅಸಮಾಧಾನಿತ ಮುಖಂಡರ ಪೈಕಿ ಕೆಲವರನ್ನು ಸಂಪರ್ಕಿಸಲು ವಿಫಲ ಯತ್ನ ನಡೆಸಿರುವುದು ಬಿಟ್ಟರೆ ಬೇರೇನೂ ಆಗಲಿಲ್ಲ. ಹೀಗಾಗಿ ಅಸಮಾಧಾನಿತರು ಸಭೆಗಳ ಮೇಲೆ ಸಭೆ ನಡೆಸಿ ವರಿಷ್ಠರಿಗೆ ದೂರು ಸಲ್ಲಿಸಿದರು. ಆರಂಭದಲ್ಲೇ ಅವರ ಮನವೊಲಿಸಿ ಸರಿಪಡಿಸುವ ಅವಕಾಶ ಇತ್ತು. ಆದರೆ ಸಚಿವರು ಕೈಚೆಲ್ಲಿದರು ಎಂದು ಹೆಸರು ಹೇಳಲಿಚ್ಛಿಸದ ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.