ADVERTISEMENT

50 ದಿನಗಳಲ್ಲಿ ಬೆಳೆ: ಪದವೀಧರ ಯುವ ರೈತನ ಕೈಹಿಡಿದ ಹೀರೆಕಾಯಿ

₹ 25 ಸಾವಿರ ಖರ್ಚು

​ಪ್ರಜಾವಾಣಿ ವಾರ್ತೆ
Published 7 ಮೇ 2022, 3:08 IST
Last Updated 7 ಮೇ 2022, 3:08 IST
ರೈತ ರವಿ ತಮ್ಮ ಹೊಲದಲ್ಲಿ ಬೆಳೆದ ಹೀರೆಕಾಯಿ ಬೆಳೆಯೊಂದಿಗೆ
ರೈತ ರವಿ ತಮ್ಮ ಹೊಲದಲ್ಲಿ ಬೆಳೆದ ಹೀರೆಕಾಯಿ ಬೆಳೆಯೊಂದಿಗೆ   

ಖಟಕಚಿಂಚೋಳಿ: ಸಮೀಪದ ಮಲ್ಕಾಪುರ ವಾಡಿ ಗ್ರಾಮದ ಯುವ ರೈತ ರವಿ ಪ್ರಭುನೋರ್ ಒಂದೂವರೆ ಎಕರೆ ಪ್ರದೇಶದಲ್ಲಿ ಹೀರೆಕಾಯಿ ಬೆಳೆದು ಉತ್ತಮ ಇಳುವರಿ ಪಡೆದಿದ್ದಾರೆ.

ಪದವೀಧರ ರವಿ ಅವರು ಸೂಕ್ತ ಕೆಲಸ ಸಿಗದ ಕಾರಣ ಕೃಷಿಯತ್ತ ಮುಖ ಮಾಡಿದ್ದಾರೆ. ಹಿರಿಯರು ಬೆಳೆಯುತ್ತಿದ್ದ ಬೆಳೆಗಳ ಜತೆಗೆ ತೋಟಗಾರಿಕೆ ಬೆಳೆಗಳನ್ನು ಬೆಳೆದು ಯಶಸ್ಸು ಕಾಣುತ್ತಿದ್ದಾರೆ.

ಕೇವಲ 50 ದಿನಗಳಲ್ಲಿ ಹೀರೆಕಾಯಿ ಬೆಳೆ ಇಳುವರಿ ಬಂದಿದೆ. ಹೊಲ ಹದ ಮಾಡುವುದು, ಬಿತ್ತನೆ ಬೀಜ, ರಸಗೊಬ್ಬರ ಔಷಧಿ ಸಿಂಪಡಣೆ ಸೇರಿ ಸುಮಾರು ₹ 25 ಸಾವಿರ ಖರ್ಚಾಗಿದೆ.

ADVERTISEMENT

ಸದ್ಯ ಮಾರುಕಟ್ಟೆಯಲ್ಲಿ ಹೀರೆಕಾಯಿ ಪ್ರತಿ ಕ್ವಿಂಟಲ್‌ಗೆ ₹ 2500 ದಿಂದ ₹ 3000 ಮಾರಾಟ ಆಗುತ್ತಿದೆ. ಹೀಗಾಗಿ ಖರ್ಚಾಗಿರುವ ಹಣಕ್ಕಿಂತ ದುಪ್ಪಟ್ಟು ಆದಾಯ ಸಿಗುತ್ತಿದೆ ಎಂದು ರೈತ ರವಿ ಸಂತಸ ವ್ಯಕ್ತಪಡಿಸುತ್ತಾರೆ. ಹಿರಿಯ ರಿಂದ ಬಳುವಳಿಯಾಗಿ ಬಂದ ಹದಿನೈದು ಎಕರೆ ಪ್ರದೇಶದಲ್ಲಿ ಹೀರೆಕಾಯಿ ಜತೆ ಕಬ್ಬು, ಈರುಳ್ಳಿ ಹಾಗೂ ಬದನೆಕಾಯಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಗ್ರಾಮದ ಇನ್ನಿತರ ರೈತರ ಜಮೀನು ಲಾವಣಿ ಮಾಡಿ ಮುಂಗಾರು, ಹಿಂಗಾರು ಬೆಳೆಗಳನ್ನು ಬೆಳೆಯಲಾಗುತ್ತಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರಸ್ತುತ ದಿನಗಳಲ್ಲಿ ಯುವಕರು ಪದವಿ ಮುಗಿಸಿಕೊಂಡು ನಗರಗಳಿಗೆ ಕೆಲಸ ಅರಸಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಪದವಿಗೆ ತಕ್ಕಂತೆ ಉದ್ಯೋಗ ಸಿಗದಿದ್ದಾಗ ನಿರುದ್ಯೋಗಿಗಳಾಗಿ ಅಲೆದಾಡುತ್ತಾರೆ. ಅಂತಹ ಸಾವಿರಾರು ನಿರುದ್ಯೋಗಿ ಯುವಕರಿಗೆ ರವಿ ಮಾದರಿಯಾಗಿದ್ದಾರೆ’ ಎಂದು ಪ್ರಭು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.