
ಬೀದರ್: 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕ ಕುಂಬಾರ ಸಮಾಜ ಅಭಿವೃದ್ಧಿ ನಿಗಮಗೆ ಕನಿಷ್ಠ ₹100 ಕೋಟಿ ಅನುದಾನ ಮೀಸಲಿಡಬೇಕೆಂದು ಜಿಲ್ಲಾ ಕುಂಬಾರ ಸಮಾಜ ಒತ್ತಾಯಿಸಿದೆ.
ಈ ಸಂಬಂಧ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಸಲ್ಲಿಸಿದರು.
ರಾಜ್ಯದಲ್ಲಿ ಸುಮಾರು 25 ಲಕ್ಷ ಜನಸಂಖ್ಯೆ ಇರುವ ಕುಂಬಾರ ಸಮುದಾಯದವರು ಸಮಾಜಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಸಮುದಾಯದ ಅಭಿವೃದ್ಧಿಗಾಗಿ ಹಲವು ಬಾರಿ ಪ್ರತಿಭಟನೆಗಳು ನಡೆಸಿದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಸದ್ಯ 2ಎ ಪ್ರವರ್ಗದಲ್ಲಿ ಇದೆ. ನೂರಕ್ಕೂ ಅಧಿಕ ಜಾತಿಗಳು ಈ ಪಟ್ಟಿಯಲ್ಲಿದ್ದು, ನಮ್ಮ ಜಾತಿಯವರಿಗೆ ಅವಕಾಶಗಳು ಕಡಿಮೆ ಆಗಿದೆ. ಸಮಾಜಕ್ಕೆ ವಿಶೇಷ ಮೀಸಲಾತಿ ಕಲ್ಪಿಸಬೇಕು. ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ಕುಂಬಾರಿಕೆ ವೃತ್ತಿ ಮಾಡುವವರಿಗೆ ಪ್ರೋತ್ಸಾಹಿಸಿ ಅಗತ್ಯ ನೆರವು ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಸಮಾನತೆಗೆ ಆದ್ಯತೆ ನೀಡುವ ನೀವು ಈ ಬಾರಿ ಬಜೆಟ್‌ನಲ್ಲಿ ಹೆಚ್ಚಿನ ಮೊತ್ತವನ್ನು ಮೀಸಲಿಟ್ಟು ಬರುವ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಸಿಎಂಗೆ ಆಗ್ರಹಿಸಿದರು.
ಕರ್ನಾಟಕ ಕುಂಬಾರ ಅಭಿವೃದ್ಧಿ ನಿಗಮಕ್ಕೆ ಪ್ರತಿವರ್ಷ ಕನಿಷ್ಠ ₹100 ಕೋಟಿ ಅನುದಾನ ನೀಡಬೇಕು. ಸಮುದಾಯದವರಿಗೆ ರಾಜಕೀಯ ಸ್ಥಾನ-ಮಾನ ನೀಡಬೇಕು. ಪ್ರತಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸರ್ವಜ್ಞ ಭವನ ನಿರ್ಮಾಣ ಮಾಡಬೇಕು. ಕುಂಬಾರಿಕೆ ಕರಕುಶಲ ಉತ್ಪನ್ನಗಳ ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕು. ಪ್ರತಿ ವರ್ಷ ಕುಂಬಾರ ಸಮಾಜದ ವಿಶೇಷ ಸಾಧಕರಿಗೆ ಸರ್ಕಾರವೇ 'ಸರ್ವಜ್ಞ ಶ್ರೀ' ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕುಂಬಾರ ಸಮಾಜ ಜಿಲ್ಲಾಧ್ಯಕ್ಷ ವಿಠಲ ಕುಂಬಾರ, ಪ್ರಮುಖರಾದ ಬಾಲಾಜಿ ಕುಂಬಾರ, ಉಮೇಶ್ ನೌಬಾದ್, ಶಿವರಾಜ್ ಕಾಳಶೆಟ್ಟಿ, ಪವನ್ ಕೆ.ಆಣದೂರ, ಪಂಢರಿ ಶ್ರೀಮಂಡಲ್, ಮಲ್ಲಿಕಾರ್ಜುನ ಕುಂಬಾರ, ವೀರೇಶ ಬಾಳೂರ ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.