ಬೀದರ್: ‘ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕರಾಮುವಿ) ಕಲಿಕಾರ್ಥಿ ಸಹಾಯ ಕೇಂದ್ರ ಸ್ಥಾಪಿಸಲು ಪ್ರಯತ್ನಿಸಲಾಗುವುದು’ ಎಂದು ಕರಾಮುವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.
‘ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ’ ಎಂಬ ಧೈಯ ವಾಕ್ಯದೊಂದಿಗೆ ದೂರ ಶಿಕ್ಷಣ ನೀಡುವ ರಾಜ್ಯದ ಏಕೈಕ ವಿಶ್ವವಿದ್ಯಾಲಯ ನಮ್ಮದು. ರಾಜ್ಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯದಾದ್ಯಂತ 38 ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿವೆ. 10 ಬಿಇಡಿ ಕಲಿಕಾರ್ಥಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ₹5.05 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ವಿವರಿಸಿದರು.
ರಾಜ್ಯದ ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಅಲ್ಪಸಂಖ್ಯಾತ ಇಲಾಖೆಯು ವಿಶ್ವವಿದ್ಯಾಲಯಕ್ಕೆ ₹5.05 ಕೋಟಿ ಅನುದಾನ ನೀಡಿದೆ. 79 ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ವಿವಿಯಲ್ಲಿ ಓದಿದ ಅನೇಕರು ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಶೇ 10ರಷ್ಟು ಬೋಧನಾ ಶುಲ್ಕ ವಿನಾಯಿತಿ ನೀಡಲಾಗಿದೆ. ಹಾಲಿ ಮತ್ತು ಮಾಜಿ ಸೈನಿಕರ ಮಕ್ಕಳಿಗೂ ಅಷ್ಟೇ ವಿನಾಯಿತಿ ಕೊಡಲಾಗಿದೆ. ಆಟೊ ಚಾಲಕರಿಗೆ ಹಾಗೂ ಅವರ ಮಕ್ಕಳಿಗೂ ಈ ಸೌಲಭ್ಯ ಇದೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಶುಲ್ಕ ಪಾವತಿ ಯೋಜನೆಯಡಿ ಉಚಿತವಾಗಿ ಪ್ರವೇಶಾತಿ ಪಡೆಯಬಹುದು ಎಂದು ತಿಳಿಸಿದರು.
ಯುಜಿಸಿ ನಿಯಮದ ಪ್ರಕಾರ, ಎರಡು ಶೈಕ್ಷಣಿಕ ಕಾರ‍್ಯಕ್ರಮಗಳನ್ನು ಏಕಕಾಲದಲ್ಲಿ ಅಧ್ಯಯನ ಮಾಡಲು ಅವಕಾಶವಿದೆ. ಒಂದು ಭೌತಿಕ ಕ್ರಮದಲ್ಲಿ, ಮತ್ತೊಂದು ದೂರ ಶಿಕ್ಷಣದ ಮೂಲಕ ಪದವಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಪ್ರಾದೇಶಿಕ ನಿರ್ದೇಶಕ ನಾಗೇಶ ಎಂ. ಅವರ ಮೊಬೈಲ್ ಸಂಖ್ಯೆ: 9986696487 ಸಂಪರ್ಕಿಸಬಹುದು ಎಂದು ಹೇಳಿದರು.
ಕರಾಮುವಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ನಾಗೇಶ ಎಂ., ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸಂಗಮೆಶ ಹಿರೇಮಠ, ಯಾದಗಿರಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಹಣಮಂತ ಆರ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.