ಬೀದರ್: ತಾಲ್ಲೂಕಿನ ಚೌಳಿ ಗ್ರಾಮದ ರೈತ ಶಿವಶರಣಪ್ಪ ಬೋರಂಚೆ ಅವರು ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಹೊರಬಂದು, ಜೈವಿಕ ಕೃಷಿ ಕೇಂದ್ರದ ಮಾರ್ಗದರ್ಶನದಲ್ಲಿ ನಿಂಬೆ ಬೆಳೆದು ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದಾರೆ.
ಹಾಗೆ ನೋಡಿದರೆ ಇವರ ಜಮೀನು ಒಂದು ರೀತಿಯಲ್ಲಿ ಮಡ್ಡಿಯಂತಿದೆ. ಕಲ್ಲುಗಳೇ ಜಾಸ್ತಿಯಿರುವ ಹೊಲ. ಕನಿಷ್ಠ ಫಲವತ್ತತೆಯೂ ಇಲ್ಲ. ಆದರೆ, ಅದಕ್ಕೆ ಎದೆಗುಂದದೆ ನಿಂಬೆ ಬೆಳೆದು ಈಗ ಕೈತುಂಬ ಕಾಸು ಗಳಿಸುತ್ತಿದ್ದಾರೆ.
ಒಟ್ಟು ಎರಡು ಎಕರೆಯಲ್ಲಿ ನಿಂಬೆ ಸಸಿಗಳನ್ನು ಬೆಳೆಸಿದ್ದಾರೆ. ಅವುಗಳು ಉತ್ತಮ ರೀತಿಯಲ್ಲಿ ಬೆಳೆದಿದ್ದು, ನಿತ್ಯ ಕನಿಷ್ಠ 12ರಿಂದ 15 ಕೆಜಿ ನಿಂಬೆ ಬರುತ್ತದೆ. ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಬೇಸಿಗೆಯಲ್ಲಿ ಹೆಚ್ಚಿನ ಬೆಲೆ ಇದ್ದದ್ದರಿಂದ ಹೆಚ್ಚು ಆದಾಯ ಗಳಿಸಿದ್ದಾರೆ. ನಿತ್ಯವೂ ಆದಾಯ ಬರುತ್ತಿರುವುದರಿಂದ ಸಂತಸದಲ್ಲಿ ಇದ್ದಾರೆ.
ನಿಂಬೆ ಸಸಿಗಳ ನಡುವೆ ಕೊತ್ತಂಬರಿ ಬೆಳೆಸಿದ್ದಾರೆ. ನುಗ್ಗೆ ಸಸಿಗಳನ್ನು ಬೆಳೆಸಲು ಮುಂದಾಗಿದ್ದಾರೆ. ಮೂರು ಎಕರೆ ಪ್ರದೇಶದಲ್ಲಿ ಸೋಯಾ, ತೊಗರಿ ಬೆಳೆದಿದ್ದಾರೆ. ಭವಿಷ್ಯದಲ್ಲಿ ಅಲ್ಲೂ ಕೂಡ ನಿಂಬೆ ಸಸಿಗಳನ್ನು ಬೆಳೆಸುವ ಯೋಜನೆ ಹಾಕಿಕೊಂಡಿದ್ದಾರೆ.
ಇವರ ಗದ್ದೆ ಸುತ್ತ ಜಿಂಕೆ, ಕೃಷ್ಣಮೃಗಗಳ ಕಾಟ ಹೆಚ್ಚಿದೆ. ಆದರೆ, ನಿಂಬೆ ಗಿಡಗಳಿಗೆ ಮುಳ್ಳು ಇರುವುದರಿಂದ ಪ್ರಾಣಿ, ಪಕ್ಷಿಗಳು ಇದರತ್ತ ಸುಳಿಯುತ್ತಿಲ್ಲ. ಆದರೂ ಕೂಡ ಹೊಲದ ಸುತ್ತಲೂ ತಂತಿಬೇಲಿ ಹಾಕಿಸಿದ್ದಾರೆ.
ಅಂದಹಾಗೆ, ಶಿವಶರಣಪ್ಪ ಬೋರಂಚೆ ಅವರೇ ಹೇಳುವ ಪ್ರಕಾರ, 2018–19ರಲ್ಲಿ ಮೊದಲ ಬಾರಿಗೆ ನಿಂಬೆ ಸಸಿಗಳನ್ನು ನಾಟಿ ಮಾಡಿದ್ದರು. ಆದರೆ, ಇಳುವರಿ ಬರದ ಕಾರಣ ಸತತವಾಗಿ ನಷ್ಟ ಅನುಭವಿಸುತ್ತ ಬಂದರು. 2024ನೇ ಸಾಲಿನ ಕೊನೆಯಲ್ಲಿ ಎಲ್ಲ ನಿಂಬೆ ಸಸಿಗಳನ್ನು ತೆಗೆದು, ಬೇರೆ ಬೆಳೆ ಬೆಳೆಯಲು ಮುಂದಾಗಿದ್ದರು.
ಕೆಲಸದ ನಿಮಿತ್ತ ತೋಟಗಾರಿಕೆ ಜೈವಿಕ ಕೇಂದ್ರಕ್ಕೆ ಭೇಟಿ ನೀಡಿದಾಗ, ಅಲ್ಲಿನ ಸಹಾಯಕ ನಿರ್ದೇಶಕ ನೀಲಾಂಜನ್ ಅವರು, ‘ಒಂದು ಸಲ ಮಣ್ಣು, ನೀರಿನ ಪರೀಕ್ಷೆ ಮಾಡೋಣ. ಆನಂತರ ಮುಂದುವರೆಯಿರಿ’ ಎಂದು ಸಲಹೆ ಮಾಡಿದರು.
‘ಮಣ್ಣಿನಲ್ಲಿ ಫಲವತ್ತತೆ ಕಡಿಮೆ ಇದೆ. ಜಿಪ್ಸಂ, ಸೊಡೊನೊಮಸ್, ಟ್ರೈಕೊಡರ್ಮಾ ಹಾಕಲು ಸಲಹೆ ಮಾಡಿದರು. ಅದರೊಂದಿಗೆ ಬೇವಿನ ಎಣ್ಣೆ, ಕೋಳಿ ಮೊಟ್ಟೆ ರಸ, ಬೆಲ್ಲ, ಸಿಹಿ ಎಣ್ಣೆ ಬೆರೆಸಿ, ಗಿಡಗಳಿಗೆ ಸಿಂಪಡಿಸಿದೆ. ಇದರಿಂದ ರಸಹೀರುವ ಕೀಟಗಳ ನಿಯಂತ್ರಣವಾಯಿತು. ಇಳುವರಿಯೂ ಜಾಸ್ತಿ ಆಯಿತು. ಈಗ ಬಹಳ ಖುಷಿಯಾಗಿದ್ದೇನೆ’ ಎಂದು ಶಿವಶರಣಪ್ಪ ಬೋರಂಚೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸತತವಾಗಿ ರಾಸಾಯನಿಕ ಗೊಬ್ಬರ ಬಳಸಿದ ಪರಿಣಾಮ ಜಮೀನಿನ ಮಣ್ಣು ಸತ್ವ ಕಳೆದುಕೊಂಡಿತ್ತು. ಜೀವಾಣುಗಳಾದ ಟ್ರೈಕೋಡರ್ಮಾ, ಸೊಡೊನೊಮಸ್, ಎಎಮ್‌ಸಿ, ಬೆವೇರಿಯಾ ಬೇಸಿಯಾನ ಮಣ್ಣಿನಲ್ಲಿ ಹಾಕಿದ್ದರಿಂದ ಫಲವತ್ತತೆ ಹೆಚ್ಚಾಯಿತು. ಸಸಿಗಳ ಮೇಲೆ ಬೆಲ್ಲದ ನೀರು ಚಿಮುಕಿಸಿದ ಪರಿಣಾಮ ಜೇನು ಹುಳುಗಳು ಆಕರ್ಷಣೆಯಾಗಿ ಪರಾಗಸ್ಪರ್ಶಕ್ಕೆ ಸಹಾಯವಾಯಿತು. ಹೀಗೆ ಮಾಡುವುದರಿಂದ ಹೆಚ್ಚು ಫಸಲು ಬರುತ್ತದೆ’ ಎಂದು ಬೀದರ್ ತೋಟಗಾರಿಕೆ ಜೈವಿಕ ಕೇಂದ್ರ ಸಹಾಯಕ ನಿರ್ದೇಶಕ ನೀಲಾಂಜನ್ ಹೇಳಿದರು.
ನಿಂಬೆ ಕೃಷಿ ಒಂದು ರೀತಿಯಲ್ಲಿ ಎಟಿಎಮ್ ಇದ್ದಂತೆ. ವರ್ಷವಿಡೀ ನಿಂಬೆ ಮಾರಾಟ ಮಾಡಬಹುದು. ನಿತ್ಯ ಆದಾಯ ತಂದುಕೊಡುತ್ತದೆ. ರೈತರು ಕೃಷಿಯೊಂದಿಗೆ ತೋಟಗಾರಿಕೆ ಬೆಳೆ ಬೆಳೆಸುವುದು ಸೂಕ್ತ.ನಿಲಾಂಜನ್, ಸಹಾಯಕ ನಿರ್ದೇಶಕ ತೋಟಗಾರಿಕೆ ಜೈವಿಕ ಕೇಂದ್ರ ಬೀದರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.