ADVERTISEMENT

ಕನ್ನಡದ ಜೀವಂತಿಕೆಗೆ ಎಲ್ಲರೂ ಶ್ರಮಿಸಲಿ–ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 13:19 IST
Last Updated 14 ಜುಲೈ 2024, 13:19 IST
   

ಬೀದರ್‌: ‘ಕನ್ನಡ ಭಾಷೆ ಜೀವಂತವಾಗಿ ಉಳಿಯಲು ಎಲ್ಲರೂ ಕೂಡಿ ಶ್ರಮಿಸಬೇಕಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾನುವಾರ ಕನ್ನಡ ಅನುಷ್ಠಾನದ ಕುರಿತು ಜಿಲ್ಲೆಯ ವಿವಿಧ ಕನ್ನಡ ಸಂಘಟನೆಗಳ ಮುಖಂಡರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡದ ಬೆಳವಣಿಗೆ ಯಾರೋ ಒಬ್ಬರಿಂದ ಸಾಧ್ಯವಿಲ್ಲ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ಕಾರಣಕ್ಕಾಗಿಯೇ ನಿಮ್ಮ ಸಲಹೆಗಳನ್ನು ಪಡೆಯಲು ಇಲ್ಲಿಗೆ ಬಂದು ಸಭೆ ನಡೆಸುತ್ತಿರುವೆ. ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಕನ್ನಡ ಪರ ಸಂಘಟನೆಗಳು ಕನ್ನಡದ ಜೀವಂತಿಕೆಗೆ ಕೆಲಸ ಮಾಡುತ್ತಿವೆ. ಸರ್ಕಾರದ ಯಾವುದೇ ಅನುದಾನ ಪಡೆಯದೇ ಕನ್ನಡ ಬೆಳವಣಿಗೆಗೆ ಶ್ರಮಿಸುತ್ತಿರುವ ಕೆಲ ಸಂಘಟನೆಗಳ ಕಾರ್ಯ ಶ್ಲಾಘನಾರ್ಹವಾದುದು ಎಂದು ಹೇಳಿದರು.

ADVERTISEMENT

ಕನ್ನಡದ ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ ಎಂಬ ದೂರುಗಳಿವೆ. ಏನಾದರೂ ಲೋಪದೋಷಗಳಿದ್ದಲ್ಲಿ ಅದನ್ನು ಗಮನಕ್ಕೆ ತಂದರೆ ಜಿಲ್ಲಾಧಿಕಾರಿಗಳ ಜೊತೆ ನಡೆಯುವ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

‘ಸಿ’ ಮತ್ತು ‘ಡಿ’ ಗ್ರುಪ್‌ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ 80ರಷ್ಟು ಉದ್ಯೋಗಗಳು ಸಿಗಬೇಕಿದೆ. ಸರೋಜಿನಿ ಮಹಿಷಿ ವರದಿ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕು ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ ಮಾತನಾಡಿ, ಕನ್ನಡದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರಾಧಿಕಾರದ ಅಧ್ಯಕ್ಷರು ಪ್ರತಿ ಜಿಲ್ಲೆಗೆ ಭೇಟಿ ಕೊಟ್ಟು ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವವರ ಸಭೆಗಳನ್ನು ನಡೆಸಿ, ಸಲಹೆಗಳನ್ನು ಪಡೆಯುತ್ತಿದ್ದಾರೆ. ಲೋಪಗಳೇನಾದರೂ ಇದ್ದರೆ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಕನ್ನಡ ನಾಮಫಲಕಗಳ ಅಳವಡಿಕೆ ಎಲ್ಲ ಕಡೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಗಡಿ ಭಾಗದ ಬಹಳಷ್ಟು ಕನ್ನಡ ‌ಶಾಲೆಗಳಲ್ಲಿ ಕನ್ನಡ ನಾಮಫಲಕಗಳೇ ಇಲ್ಲ. ಕನ್ನಡ ‌ಶಾಲೆಗಳನ್ನು ಆರಂಭಿಸಲು ಇರುವ ಅನುಮತಿಯ ನಿಯಮಗಳು ಸರಳವಾಗಬೇಕು. ಹೀಗಾದಾಗ ಕನ್ನಡ ಶಾಲೆಗಳನ್ನು ಉಳಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ್ ಸೋನಾರೆ, ಶಿವಕುಮಾರ ಕಟ್ಟೆ, ಎಸ್.ಬಿ‌.ಕುಚಬಾಳ, ಪಾರ್ವತಿ ಸೋನಾರೆ, ಭಾರತಿ ವಸ್ತ್ರದ್‌, ಎಂ. ದೇಶಪಾಂಡೆ, ಸಂತೋಷ ಕುಮಾರ ಜೋಳದಾಪಕೆ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.