
ಕಮಲನಗರ: ‘ಶಿವಯೋಗಿ ಲಿಂ.ನಿರಂಜನ ಸ್ವಾಮೀಜಿಯವರು ಸ್ವತ: ಶಾರೀರಿಕವಾಗಿ ಅಂಗವೈಕಲ್ಯ ಲೆಕ್ಕಿಸದೆ ಸಾವಿರಾರು ಜನರಿಗೆ ಆಯುರ್ವೇದ ಔಷಧ ನೀಡಿ ರೋಗ ಗುಣಮುಖರನ್ನಾಗಿ ಮಾಡುವ ಮೂಲಕ ಬಡವರ ಬಂಧುಗಳಾಗಿ ಸರ್ವರ ಬದುಕು ಹಸುನಗೊಳಿಸಿದ ಬಡವರ ಆಶಾಕಿರಣಗಳಾಗಿದ್ದರು’ ಎಂದು ಕೊಡಂಗಲ್-ಭಾತಂಬ್ರ ನಿರಂಜನ ಸಂಸ್ಥಾನ ಮಠದ ಶಿವಯೋಗಿಶ್ವರ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸೋನಾಳ ಗ್ರಾಮದ ವಿರಕ್ತ ಮಠದ ಲಿಂ.ನಿರಂಜನ ಸ್ವಾಮಿಗಳ 16ನೇ ಪುಣ್ಯಸ್ಮರಣೋತ್ಸವ, ರಥೋತ್ಸವ ಮತ್ತು ರಾಜ್ಯ ಮಟ್ಟದ ನಿರಂಜನ ಪ್ರಭು ಪ್ರಶಸ್ತಿ ಸಮಾರಂಭದ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆಯುರ್ವೇದವು ದೇಹ, ಮನಸ್ಸು ಮತ್ತು ಆತ್ಮದ ಸಮಗ್ರ ಆರೋಗ್ಯಕ್ಕೆ ಒತ್ತು ನೀಡುವ ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾಗಿದ್ದು, ಇದು ರೋಗ ತಡೆಗಟ್ಟುವಿಕೆ, ದೀರ್ಘಾಯುಷ್ಯ ಮತ್ತು ವ್ಯಕ್ತಿಗತ ಚಿಕಿತ್ಸೆಗೆ ಮಹತ್ವ ನೀಡುತ್ತದೆ. ಇದು ಪಂಚಭೂತಗಳು, ದೋಷಗಳು, ಜೀವನಶೈಲಿ ಮಾರ್ಪಾಡು, ಗಿಡಮೂಲಿಕೆಗಳು, ಯೋಗ, ಧ್ಯಾನ ಮತ್ತು ಪಂಚಕರ್ಮಗಳಂತಹ ಶುದ್ಧಿಕರಣ ಚಿಕಿತ್ಸೆಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ’ ಎಂದು ಹೇಳಿದರು.
ಕಲಬುರಗಿಯ ಹಿಂಗುಲಾಂಬಿಕ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿ ನಿರ್ಮಲಾ ಕೆಳಮನಿ ಮಾತನಾಡಿ, ‘ಪ್ರತಿಯೊಬ್ಬರೂ ನಿತ್ಯ ಬಿಸಿನೀರು ಸೇವನೆ, ಅಗತ್ಯ ಯೋಗ ಮತ್ತು ವ್ಯಾಯಾಮ ಜೀವನದ ದಿನಚರಿಯಾಗಬೇಕು. ನಿಸರ್ಗದಲ್ಲಿ ದೊರಕುವ ಔಷಧಗಳು ಸರ್ವ ಋತುವಿನಲ್ಲಿ ಕಾಣಿಸಿಕೊಳ್ಳುವ ರೋಗ ಗುಣಪಡಿಸುವ ದಿವ್ಯ ಔಷಧಿಗಳಾಗಿವೆ. ಲಿಂ.ನಿರಂಜನ ಶ್ರೀಗಳು ಚತುರ್ವಿಧ ದಾಸೋಹಿಗಳಾಗಿದ್ದು, ಕಲ್ಯಾಣ ನಾಡಿನ ಮಠಾಧೀಶರಲ್ಲಿ ಪ್ರಮುಖರಾಗಿದ್ದರು’ ಎಂದು ಹೇಳಿದರು.
ಹುಲಸೂರ ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಕುಟುಂಬದ ಆರೋಗ್ಯ ಚೆನ್ನಾಗಿದ್ದರೆ, ಮಾತ್ರ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಸಾಧ್ಯ. ಬಸವ ತತ್ವವನ್ನು ತಮ್ಮ ಬದುಕಿನ ಉಸಿರಾಗಿಸಿಕೊಂಡ ಲಿಂ.ನಿರಂಜನ ಸ್ವಾಮಿಗಳು ಗ್ರಾಮಗಳಲ್ಲಿ ಸಂಚಾರ ಕೈಗೊಂಡು ಧರ್ಮ, ಆಚಾರ, ವಿಚಾರ ಮತ್ತು ಆರೋಗ್ಯದ ಬಗ್ಗೆ ಭಕ್ತರಿಗೆ ಉಪದೇಶ ನೀಡುತ್ತಿದ್ದರು. ಅಂಗವಿಕಲರಾಗಿದ್ದರೂ, ಜ್ಞಾನ ದಾಸೋಹಿಗಳಾಗಿ ಸೋನಾಳ ಮತ್ತು ಹೂವಿನಶಿಗ್ಲಿ ಪ್ರದೇಶಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ ನಿರ್ಗತಿಕ ಮಕ್ಕಳ ಸೇವೆ ಮಾಡಿದ ಮಹಾನ ತಪಸ್ವಿಗಳು’ ಎಂದು ಹೇಳಿದರು.
ರಾಜ್ಯ ಮಟ್ಟದ ನಿರಂಜನ ಪ್ರಭು ಪ್ರಶಸ್ತಿ ಪ್ರಧಾನ: ರಾಜ್ಯ ಮಟ್ಟದ ನಿರಂಜನ ಪ್ರಭು ಪ್ರಶಸ್ತಿಗೆ ಆಯ್ಕೆಯಾದ ಕಲಬುರಗಿಯ ಹಿಂಗುಲಾಂಬಿಕ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿ ನಿರ್ಮಲಾ ಕೆಳಮನಿ ಅವರನ್ನು ಸತ್ಕರಿಸಲಾಯಿತು.
11 ಜನರಿಂದ ತುಲಾಭಾರ ಸೇವೆ: ಸೋನಾಳ ವಿರಕ್ತಮಠದ ಪೀಠಾಧ್ಯಕ್ಷ ಚೆನ್ನವೀರ ಸ್ವಾಮಿಜಿ ಅವರಿಗೆ ರಾಜಕುಮಾರ ಅಲಬಿದೆ, ಈಶ್ವರ ಚಿಂಚೋಳೆ, ಭೀಮಸೇನ ಸಿಂದೆ, ಸಿದ್ರಾಮ ಶೇಟಕಾರ, ಶಿವರಾಜ ಬೋಳಶೆಟ್ಟಿ, ವಿಶಾಲ ಸಮಗೆ, ಗೋಪಾಳರಾವ ಪಾಟೀಲ, ಜ್ಯೋತಿ ಪಾಟೀಲ, ದಯಾನಂದ ಬಿರಾದಾರ, ರಮೇಶ ಶಂಕ್ರಪ್ಪಾ, ಗುಣವಂತ ಬಿರಾದಾರ ತುಲಾಭಾರ ಸೇವೆಗೈದರು.
ಶಿವಣಿ-ಹಲಬರ್ಗಾ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ, ರಾಣೇಬೆನ್ನೂರ ವಿರಕ್ತ ಮಠದ ಶಿವಯೋಗೀಶ್ವರ ಸ್ವಾಮಿ, ನವಲಗುಂದಾ ಸಂಸ್ಥಾನ ಗವಿಮಠದ ಬಸವಲಿಂಗ ಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಭೀಮಸೇನ ಸಿಂಧೆ, ಗ್ರಾ.ಪಂ.ಅಧ್ಯಕ್ಷೆ ಮಹಾದೇವಿ ಮೇತ್ರೆ, ವಿಷ್ಣುದಾಸ ಸಿಂಧೆ, ಶ್ರೀಕಾಂತ ಹಣಮಶೇಟ್ಟೆ, ಮಲ್ಲಿಕಾರ್ಜುನ ಗವಾಯಿ ಹಾಗೂ ಇನ್ನಿತರರು ಹಾಜರಿದ್ದರು.
ಪ್ರೇಮಕುಮಾರ ಘಾಳೆ ಸ್ವಾಗತಿಸಿದರು. ಶಿವಲಿಂಗ ಶಾಸ್ತ್ರಿ ನಿರೂಪಿಸಿದರು. ನಾಗರಾಜ ಕರಿಸೋಮನಗೌಡ್ರು ವಂದಿಸಿದರು. ಲೋಕೇಶ ಧನರಾಜ ಹಣಮಶೇಟ್ಟೆ ಪ್ರಸಾದ ಸೇವೆಗೈದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.