ADVERTISEMENT

ಅನುಭವ ಮಂಟಪವು ಶಿವಾನುಭವ ಮಂಟಪವಲ್ಲ: ಚನ್ನಬಸವಾನಂದ ಸ್ವಾಮೀಜಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 4:58 IST
Last Updated 12 ಅಕ್ಟೋಬರ್ 2025, 4:58 IST
ಬಸವಕಲ್ಯಾಣದಲ್ಲಿ ಶನಿವಾರ ನಡೆದ ಸ್ವಾಭಿಮಾನಿ ಕಲ್ಯಾಣ ಪರ್ವದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ದೀಪ ಬೆಳಗಿಸಿದರು. ಬೆಂಗಳೂರಿನ ಚನ್ನಬಸವಾನಂದ ಸ್ವಾಮೀಜಿ, ರಾಷ್ಟ್ರೀಯ ಬಸವದಳದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ ಉಪಸ್ಥಿತರಿದ್ದರು
ಬಸವಕಲ್ಯಾಣದಲ್ಲಿ ಶನಿವಾರ ನಡೆದ ಸ್ವಾಭಿಮಾನಿ ಕಲ್ಯಾಣ ಪರ್ವದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ದೀಪ ಬೆಳಗಿಸಿದರು. ಬೆಂಗಳೂರಿನ ಚನ್ನಬಸವಾನಂದ ಸ್ವಾಮೀಜಿ, ರಾಷ್ಟ್ರೀಯ ಬಸವದಳದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ ಉಪಸ್ಥಿತರಿದ್ದರು   

ಬಸವಕಲ್ಯಾಣ: ‘ಲಿಂಗಾಯತ ಧರ್ಮವನ್ನು ಶೈವೀಕರಣ ಮಾಡಲಾಗುತ್ತಿದ್ದು, ಬಹಳಷ್ಟು ಮಠಗಳಲ್ಲಿ ಅನುಭವ ಮಂಟಪಕ್ಕೆ ಶಿವಾನುಭವ ಮಂಟಪ ಎಂದು ಹೆಸರಿಸುತ್ತಿರುವುದು ಸರಿಯಲ್ಲ’ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಗರದ ಎಂ.ಎಂ. ಬೇಗ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸ್ವಾಭಿಮಾನಿ ಕಲ್ಯಾಣ ಪರ್ವದ ನೇತೃತ್ವ ವಹಿಸಿಕೊಂಡು ಅವರು ಮಾತನಾಡಿದರು.

‘ಶರಣರನ್ನು ಅನೇಕರು ಶಿವಶರಣರು ಎಂದು ಕರೆಯುತ್ತಾರೆ. ಭಾಲ್ಕಿ ಮಠ ಒಳಗೊಂಡು ಅನೇಕ ಕಡೆಗಳಲ್ಲಿ ಅನುಭವಗೋಷ್ಠಿ ಬದಲಾಗಿ ಶಿವಾನುಭವ ಗೋಷ್ಠಿ ಎಂದು ಆಯೋಜಿಸುತ್ತಾರೆ. ಮಾತೆ ಮಹಾದೇವಿಯವರು ಅದಕ್ಕಾಗಿಯೇ ವಚನಗಳ ತಿದ್ದುಪಡಿ ಕೈಗೊಂಡಿದ್ದರು. ಈಗಲೂ ವಚನಗಳ ಪರಿಷ್ಕರಣಾ ಕಾರ್ಯ ಅಗತ್ಯವಾಗಿದೆ’ ಎಂದು ಹೇಳಿದರು.

ADVERTISEMENT

‘ಬಸವಧರ್ಮ ಪೀಠ ನಗರದಲ್ಲಿ ಆಯೋಜಿಸಿದ್ದ ಕಲ್ಯಾಣ ಪರ್ವಕ್ಕೆ ಪರ್ಯಾಯವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲಿ ಲಿಂಗೈಕ್ಯ ಮಾತೆ ಮಹಾದೇವಿ ಅವರು ಬರೆದ ಗ್ರಂಥಗಳನ್ನು ಬೇರೆಡೆ ಇಡಲಾಗಿದೆ. ಅನೇಕ ವರ್ಷಗಳಿಂದ ಮಾತಾಜಿ ಜೊತೆಯಲ್ಲಿದ್ದ ಅನುಯಾಯಿಗಳನ್ನು ಪೀಠದಿಂದ ಹೊರಗಿಟ್ಟು ಅನ್ಯಾಯ ಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಶಿವಪುರ ಮಾತನಾಡಿ, ‘25 ವರ್ಷಗಳ ಹಿಂದೆ ಒಬ್ಬನೇ ಮಾತೆ ಮಹಾದೇವಿ ಅವರ ಜೊತೆಯಲ್ಲಿದ್ದು, ಜಾಗ ಖರೀದಿಸಿ, ಬಸವ ಮಹಾಮನೆ ಕಟ್ಟಿದೆವು. 108 ಅಡಿ ಎತ್ತರದ ಬಸವಣ್ಣನವರ ಪ್ರತಿಮೆ ನಿರ್ಮಿಸಿದೆವು. ಈಗ ಮಾತಾಜಿಯ ನಿಜವಾದ ಶಿಷ್ಯರನ್ನು ಹೊರಗಿಟ್ಟಿದ್ದು, ಭ್ರಷ್ಟರು ಒಳಗಿದ್ದಾರೆ. ಇದಕ್ಕಾಗಿ ಕಾನೂನು ಪ್ರಕಾರ ಹೋರಾಟ ನಡೆಸುತ್ತಿದ್ದು, ಜಯ ನಮ್ಮದಾಗಲಿದೆ’ ಎಂದು ಹೇಳಿದರು.

ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ, ‘ಬಸವ ಸಂಸ್ಕೃತಿ ಅಭಿಯಾನ ಆಯೋಜಿಸಿದ ಮಠಾಧೀಶರಿಗೆ ಹೊರ ಜಿಲ್ಲೆಗಳಲ್ಲಿ ಶಿಷ್ಯರಿಲ್ಲ. ಮಾತೆ ಮಹಾದೇವಿಯವರ ಅನುಯಾಯಿಗಳು ಎಲ್ಲೆಡೆ ಇದ್ದು ಅವರೇ ಈ ಯಾತ್ರೆ ಯಶಸ್ವಿಗೊಳಿಸಿದರು’ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಚಿಕ್ಕಮಗಳೂರಿನ ಜಯಬಸವಾನಂದ ಸ್ವಾಮೀಜಿ, ಮಾತೆ ಸತ್ಯಾದೇವಿ, ಮಾತೆ ಶಾಂತಾದೇವಿ, ಶಂಕರಲಿಂಗ ಸ್ವಾಮೀಜಿ, ವೀರೇಶ, ಶ್ರೀನಾಥ ಕೋರೆ ಮಾತನಾಡಿದರು.

ಬಾಣೂರು ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಸಚ್ಚಿದಾನಂದ ಚಟ್ನಳ್ಳಿ ಬರೆದ ‘ವಚನ ಪರುಷ’ ಕೃತಿ ಬಿಡುಗಡೆ ಮಾಡಲಾಯಿತು. ಶಿವರಾಜ ಪಾಟೀಲ ಅತಿವಾಳ, ಅಶೋಕ ಬೆಂಡಿಗೇರಿ, ಡಾ.ಮಹೇಶ ಬಿರಾದಾರ, ಅಶೋಕ ಮಾನೂರೆ, ರವಿಕಾಂತ ಬಿರಾದಾರ, ಓಂಪ್ರಕಾಶ ರೊಟ್ಟೆ, ಗಣಪತಿ ದೇಶಮುಖ ಉಪಸ್ಥಿತರಿದ್ದರು.

ಬಸವತತ್ವ ಒಪ್ಪದ ರಂಭಾಪುರಿ ಶ್ರೀಯವರ ದಸರಾ ದರ್ಬಾರ ಬಸವ ನಾಡಿನಲ್ಲಿ ಆಯೋಜಿಸಿದ್ದ ಶಾಸಕ ಶರಣು ಸಲಗರ ಅವರನ್ನು ಸೋಲಿಸುವುದು ಅತ್ಯವಶ್ಯವಾಗಿದೆ
ಬಸವರಾಜ ಪಾಟೀಲ ಶಿವಪುರ ರಾಜ್ಯಾಧ್ಯಕ್ಷ ರಾಷ್ಟ್ರೀಯ ಬಸವದಳ
‘ಬಸವತತ್ವ ಪಾಲನೆಯಿಂದ ಶಾಂತಿ’
ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ ‘ಬಸವಣ್ಣನವರ ತತ್ವಗಳ ಪಾಲನೆಯಾದರೆ ಎಲ್ಲೆಡೆ ಶಾಂತಿ ನೆಲೆಸಬಲ್ಲದು. ಸಮಬಾಳು ಮತ್ತು ಸಮಪಾಲು ಸಿದ್ಧಾಂತ ಅವರದ್ದಾಗಿದ್ದರಿಂದ ಎಲ್ಲರ ಕಲ್ಯಾಣ ನಿಶ್ಚಿತ. ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ತಾಯಿಯವರು ಮಾತೆ ಮಹಾದೇವಿಯವರ ಅಪ್ಪಟ ಶಿಷ್ಯರಾಗಿದ್ದರು. ಬಸವತತ್ವದ ಅನುಯಾಯಿ ಆಗಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.