ADVERTISEMENT

ಬೀದರ್| ರಾಷ್ಟ್ರ ರಕ್ಷಣೆಗೆ ಲಿಂಗಾಯತ ಚಳವಳಿಯ ಹುಟ್ಟು: ಜೆ.ಎಸ್. ಪಾಟೀಲ

​ಪ್ರಜಾವಾಣಿ ವಾರ್ತೆ
Published 24 ಮೇ 2025, 13:49 IST
Last Updated 24 ಮೇ 2025, 13:49 IST
ವಚನ ವಿಜಯೋತ್ಸವ ಪಥ ಸಂಚಲನದಲ್ಲಿ ಶರಣ–ಶರಣೆಯರು ಹೆಜ್ಜೆ ಹಾಕಿದರು
ವಚನ ವಿಜಯೋತ್ಸವ ಪಥ ಸಂಚಲನದಲ್ಲಿ ಶರಣ–ಶರಣೆಯರು ಹೆಜ್ಜೆ ಹಾಕಿದರು   

ಬೀದರ್: ‘ಲಿಂಗಾಯತ ಚಳವಳಿ ಹುಟ್ಟಿದ್ದು ರಾಷ್ಟ್ರ ರಕ್ಷಣೆಗಾಗಿ. ಲಿಂಗಾಯತರು ರಾಷ್ಟ್ರೀಯ ವಾದಿಗಳು. ನಿಜವಾದ ದೇಶಭಕ್ತರು’ ಎಂದು ವಿಜಯಪುರದ ಶರಣ ತತ್ವ ಚಿಂತಕ ಜೆ.ಎಸ್. ಪಾಟೀಲ ಹೇಳಿದರು.

ನಗರದ ಬಸವಗಿರಿಯಲ್ಲಿ ಅಕ್ಕ ಅನ್ನಪೂರ್ಣತಾಯಿ ಪ್ರಥಮ ಸ್ಮರಣೊತ್ಸವದ ಎರಡನೇ ದಿನವಾದ ಶನಿವಾರ ನಡೆದ ಸಮವಸ್ತ್ರಧಾರಿ 770 ಶರಣ-ಶರಣೆಯರಿಂದ ಅಕ್ಕನ ಯೋಗಾಂಗ ತ್ರಿವಿಧಿ ಪಠಣ ಕಾರ್ಯಕ್ರಮದಲ್ಲಿ ‘ಲಿಂಗಾಯತ ಚಳವಳಿ ಐತಿಹಾಸಿಕ ಹಿನ್ನೆಲೆ’ ಕುರಿತು ಅವರು ಮಾತನಾಡಿದರು.

ಲಿಂಗಾಯತ ಸಂಸ್ಕೃತಿ ನಾಶಕ್ಕೆ ಹಲವು ವರ್ಷಗಳಿಂದ ಹುನ್ನಾರ ನಡೆದಿದೆ. ಲಿಂಗಾಯತರು ಎಚ್ಚೆತ್ತುಕೊಳ್ಳಬೇಕು. ಲಿಂಗಾಯತರು ಸಾಂಸ್ಕೃತಿಕ ದಬ್ಬಾಳಿಕೆಗಳಿಗೆ ಬಲಿಯಾಗಬಾರದು. ಅಸತ್ಯದ ವಿರುದ್ಧ ಹೊರಾಟ ನಡೆಸಬೇಕು ಎಂದು ತಿಳಿಸಿದರು.

ADVERTISEMENT

ಸಂಸ್ಕೃತಿಯ ಅರಿವಿಲ್ಲದಿದ್ದರೆ ಅನ್ಯ ಸಂಸ್ಕೃತಿಯ ದಾಸರಾಗಬೇಕಾಗುತ್ತದೆ. ಲಿಂಗಾಯತರು ತಮ್ಮ ಸಂಸ್ಕೃತಿ ಹಾಗೂ ಇತಿಹಾಸವನ್ನು ಅರಿಯಬೇಕು. ಲಿಂಗಾಯತರು ಉತ್ಕೃಷ್ಟ ಸಂಸ್ಕೃತಿಯ ವಾರಸುದಾರರು. ಇಷ್ಟಲಿಂಗ ಲಿಂಗಾಯತರ ದೇವರು. ಶೋಷಣಾ ಕೇಂದ್ರಗಳಿಂದ ದೂರವಿದ್ದು, ಶೋಷಣೆ ರಹಿತವಾದ ಇಷ್ಟಲಿಂಗವನ್ನು ಪೂಜಿಸಬೇಕು ಎಂದರು.

ಬಸವಣ್ಣ ಬಾರದಿದ್ದರೆ ನಾವೆಲ್ಲ ಶೋಷಿತರಾಗುತ್ತಿದ್ದೇವು. ನಡು ಬೀದಿಯಲ್ಲಿ ಓಡಾಡುವ ಹಾಗಿರಲಿಲ್ಲ. ಅಂದಿನ ಸಮಾಜದ ಸ್ಥಿತಿಗತಿಗಳನ್ನು ಗಮನಿಸಿದ ಬಸವಣ್ಣ ಸರ್ವ ಶೋಷಣಾ ಮುಕ್ತ ಸಮಾಜ ಕಟ್ಟಲು ಹೋರಾಟ ಆರಂಭಿಸಿದರು. ಜಾತಿಯತೆಯನ್ನು ಹೋಗಲಾಡಿಸಿದರು. ಅವರ ಕಾಯಕ-ದಾಸೋಹ ತತ್ವ ಜಗದಲ್ಲಿ ಹೊಸ ಗಾಳಿ ಬೀಸಿತು ಎಂದು ತಿಳಿಸಿದರು.

ಹೈಕೋರ್ಟ್ ವಕೀಲ ಸಂತೋಷ ಎಸ್. ನಾಗರಾಳೆ ಮಾತನಾಡಿ, ಅಕ್ಕ ಅವರದ್ದು ಅದ್ಭುತ ವ್ಯಕ್ತಿತ್ವ. ಯಾವಾಗಲೂ ನಗುತ್ತಲಿದ್ದರು. ಆನಂದ ಭಾವ ಅವರಲ್ಲಿತ್ತು. ಅನಾರೋಗ್ಯದ ಕಷ್ಟವಿದ್ದರೂ, ಹಸನ್ಮುಖಿಯಾಗಿರುತ್ತಿದ್ದರು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಅಕ್ಕನವರು ಬಸವತತ್ವ ‍ಪ್ರಚಾರಕ್ಕೆ ಸಮರ್ಪಿಸಿಕೊಂಡಿದ್ದರು ಎಂದರು.

‘ಅನ್ನಪೂರ್ಣ’ ಯೋಜನೆಗೆ ಚಾಲನೆ ನೀಡಿದ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಹೆಸರಲ್ಲಿ ಹಸಿದವರಿಗೆ ಉಣ್ಣಿಸಲು ಅನ್ನಪೂರ್ಣ ಯೋಜನೆ ಆರಂಭಿಸಿರುವುದು ಸಂತೋಷದ ವಿಷಯ. ಇದೊಂದು ಮಾನವೀಯ ಕಾರ್ಯ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ, ವಚನಶ್ರುತಿ ಮಾತನಾಡಿದರು. ಅಶ್ವಿನಿ ರಾಜಕುಮಾರ ಚಿಟ್ಟಾ ವಚನ ಸಂಗೀತ ನಡೆಸಿಕೊಟ್ಟರು. ಆಳಂದದ ಕೋರಣೇಶ್ವರ ಸ್ವಾಮೀಜಿ ಸಮ್ಮುಖ, ನೀಲಮ್ಮನ ಬಳಗದ ನೀಲಮ್ಮ ರೂಗನ್ ಅಧ್ಯಕ್ಷತೆ ವಹಿಸಿದ್ದರು. ಖೇಳಗಿಯ ಶಿವಲಿಂಗ ಸ್ವಾಮೀಜಿ, ಕಲಬುರಗಿಯ ಮಾತೆ ಪ್ರಭುಶ್ರೀ, ನಿಡವಂಚಾದ ಮಾತೆ ಮೈತ್ರಾದೇವಿ, ಬೀದರ್‌ನ ಶರಣಮ್ಮ ತಾಯಿ, ಅಲಿಯಾಬಾದ್‍ನ ಲಲಿತಾ ತಾಯಿ, ಅಕ್ಕ ಮಹಾದೇವಿ, ಕಮಲಾಬಾಯಿ ತಾಯಿ ಉಪಸ್ಥಿತರಿದ್ದರು.

ಬೀದರ್‌ನ ಬಸವಗಿರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲ ಸಂತೋಷ ಎಸ್. ನಾಗರಾಳೆ ಮಾತನಾಡಿದರು

‘ಕರುಳಬಳ್ಳಿ ನಿರ್ಗಮನದಿಂದ ಶೂನ್ಯ’

ಗದಗ ಶ್ರೀ ಇಳಕಲ್ ಶ್ರೀ ಮಾತಾಜಿ ಅಕ್ಕನವರು ಬಸವ ಕರುಳ ಬಳ್ಳಿಗಳು. ಅವರ ನಿರ್ಗಮನದಿಂದ ಒಂದು ರೀತಿಯ ಶೂನ್ಯ ಆವರಿಸಿದೆ. ಅವರ ಅಗಲಿಕೆಯ ನೋವು ಸಹಿಸಲು ಶರಣರ ವಚನಗಳೇ ಬೇಕು. ವಚನಗಳು ಜನ್ಮದ ಬುತ್ತಿ’ ಎಂದು ಬಸವಕಲ್ಯಾಣದ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ ಹೇಳಿದರು. ಶುಕ್ರವಾರ ರಾತ್ರಿ ನಡೆದ ಅಕ್ಕ ಅನ್ನಪೂರ್ಣತಾಯಿ ಪ್ರಥಮ ಸ್ಮರಣೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಚನ್ನಬಸವಾನಂದ ಸ್ವಾಮೀಜಿ ಉದ್ಘಾಟಿಸಿ ಅಕ್ಕನವರ ಸಾಧನೆ ದೊಡ್ಡದು. ಅವರ ಗರಡಿಯಲ್ಲಿ ಬೆಳೆದವರಲ್ಲಿ ಅರ್ಪಣಾ ಭಾವ ಇದೆ ಎಂದು ತಿಳಿಸಿದರು. ಕದಳಿಶ್ರೀ ಹಾಗೂ ಬಸವಶ್ರೀ ವಚನ ನೃತ್ಯ ಪ್ರದರ್ಶಿಸಿದರು. ಭಾತಂಬ್ರಾದ ಶಿವಯೋಗೀಶ್ವರ ಸ್ವಾಮೀಜಿ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಮುಖಂಡ ಜೈರಾಜ ಖಂಡ್ರೆ ಮತ್ತಿತರರು ಹಾಜರಿದ್ದರು.

ವಚನ ವಿಜಯೋತ್ಸವ ಪಥ ಸಂಚಲನ

ವಚನ ವಿಜಯೋತ್ಸವ ಪಥ ಸಂಚಲನವು ಜಿಟಿಜಿಟಿ ಮಳೆಯಲ್ಲಿ ಸಂಭ್ರಮದಿಂದ ನಡೆಯಿತು. ಪಾಪನಾಶ ಗೇಟ್‍ನಿಂದ ಆರಂಭಗೊಂಡ ಪಥ ಸಂಚಲನವು ಪಾಪನಾಶ ದೇಗುಲದ ಮೂಲಕ ಹಾದು ಬಸವಗಿರಿಗೆ ತಲುಪಿತು. ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಅವರ ನೇತೃತ್ವದಲ್ಲಿ ಶರಣ- ಶರಣೆಯರು ತಲೆ ಮೇಲೆ ವಚನ ಸಾಹಿತ್ಯ ಹೊತ್ತು ಭಕ್ತಿಯಿಂದ ಹೆಜ್ಜೆ ಹಾಕಿದರು. ಅಲಂಕೃತ ಆಟೊಗಳ ಮೇಲೆ ಬಸವಣ್ಣ ಅಕ್ಕ ಮಹಾದೇವಿ ಮಡಿವಾಳ ಮಾಚಿದೇವ ಅಲ್ಲಮಪ್ರಭು ದೇವರು ಮೋಳಿಗೆ ಮಾರಯ್ಯ ಹರಳಯ್ಯ ಕಲ್ಯಾಣಮ್ಮ ನೂಲಿಯ ಚಂದಯ್ಯ ಮೊದಲಾದವರ ಭಾವಚಿತ್ರಗಳನ್ನು ಇಡಲಾಗಿತ್ತು. ಪ್ರಭುದೇವ ಸ್ವಾಮೀಜಿ ಸ್ವತಃ ತಲೆ ಮೇಲೆ ಲಿಂಗಾಯತ ಧರ್ಮಗ್ರಂಥ ಗುರುವಚನ ಹೊತ್ತು ನಡೆದರು. ಪಥ ಸಂಚಲನಕ್ಕೆ ಧಾರವಾಡದ ಬಸವಾನಂದ ಸ್ವಾಮೀಜಿ ವಚನ ಪಠಿಸಿ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.