ಹುಲಸೂರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದು ನಮೂದಿಸಿ ಹಾಗೂ ಉಪಜಾತಿಯ ಕಾಲಂನಲ್ಲಿ ತಮ್ಮ ಉಪಪಂಗಡವನ್ನು ದಾಖಲಿಸುವಂತೆ ಲಿಂಗಾಯತ ಪರ ಸಂಘಟನೆಗಳ ಮುಖಂಡರು ಮನವಿ ಮಾಡಿದರು.
ಪಟ್ಟಣದಲ್ಲಿ ಗುರುವಾರ ಬಸವಪರ ಸಂಘಟನೆಗಳ ಮುಖಂಡರಿಂದ ಪತ್ರಿಕಾಗೋಷ್ಠಿ ನಡೆಸಿ, ‘ಜಾತಿ ಗಣತಿಗೆ ಬಂದ ಅಧಿಕಾರಿಗಳು ತಾವು ಕೊಟ್ಟ ಮಾಹಿತಿಯಂತೆ ನಮೂದಿಸದೆ ಇದ್ದಲ್ಲಿ ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿ. ಅದೇ ರೀತಿ ತಮ್ಮ ಸಮೀಕ್ಷೆಯ ಒಂದು ಫೋಟೊ ತೆಗೆದು ಮೊಬೈಲ್‌ನಲ್ಲಿ ಇಟ್ಟುಕೊಳ್ಳಿ. ಸಮೀಕ್ಷೆ ಅಧಿಕಾರಿಗಳ ಹೆಸರು, ಅವರ ಸಂಪರ್ಕ ಸಂಖ್ಯೆ ತೆಗೆದುಕೊಳ್ಳಿ’ ಎಂದು ಸಲಹೆ ನೀಡಿದರು.
ಬಸವ ಕೇಂದ್ರ ತಾಲ್ಲೂಕು ಅಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿ, ‘ರಾಜಕೀಯ ಪಕ್ಷಗಳ ಕೆಲವು ಮುಖಂಡರು ಹಾಗೂ ಮಠಾಧೀಶರು ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು. ಆದರೆ, ಅವರು ತಮ್ಮ ಸ್ವಾರ್ಥಕ್ಕೆ ಧರ್ಮ, ಜಾತಿ ಜನರನ್ನು ದಾರಿ ತಪ್ಪಿಸುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಅದಕ್ಕೆ ಕಿವಿಗೊಡದೆ ಗಟ್ಟಿಯಾಗಿ ಧರ್ಮ ಇದ್ದಲ್ಲಿ ಲಿಂಗಾಯತ ಹಾಗೂ ಉಪಜಾತಿ ಕಾಲಂನಲ್ಲಿ ತಮ್ಮ ವಂಶಾವಳಿಯ ಜಾತಿ ನಮೂದಿಸಬೇಕು’ ಎಂದು ತಿಳಿಸಿದರು.
ರಾಷ್ಟ್ರೀಯ ಬಸವದಳದ ಬಸವಕಲ್ಯಾಣ ತಾಲ್ಲೂಕ ಅಧ್ಯಕ್ಷ ರವೀಂದ್ರ ಕೊಳೆಕರ ಮಾತನಾಡಿ, ‘ಲಿಂಗಾಯತ ಧರ್ಮ ಸ್ಥಾಪನೆಯಾಗಿದ್ದೇ 12ನೇ ಶತಮಾನದಲ್ಲಿ. ಆದರೆ, ದಾಖಲಾತಿಯಲ್ಲಿನ ಸಮಸ್ಯೆಯಿಂದಾಗಿ ಅದು ಇನ್ನೂ ನನೆಗುದಿಗೆ ಬಿದ್ದಿದೆ. ಹಿಂದೂ ಎಂಬುದೇ ಧರ್ಮವಲ್ಲ. ಕಾನೂನು ಬದ್ಧಗೊಂಡು ಲಿಂಗಾಯತ ಸ್ವತಂತ್ರ ಧರ್ಮ ಆದಾಗ ಮಾತ್ರ ನಾವು ಎಲ್ಲ ಸವಲತ್ತು ಪಡೆದುಕೊಳ್ಳಬಹುದು. ಕಾರಣ ಧರ್ಮದ ಕಾಲಂನಲ್ಲಿ ಕಡ್ಡಾಯವಾಗಿ ಲಿಂಗಾಯತ ಎಂದಷ್ಟೇ ಬರೆಯಿಸಿ’ ಎಂದು ಹೇಳಿದರು.
ಲಿಂಗಾಯತ ಧರ್ಮ ಪ್ರಚಾರಕ ಶಿವಲಿಂಗಯ್ಯ ಕನ್ನಾಡೆ ಮಾತನಾಡಿದರು. ಬಸವ ಕೇಂದ್ರದ ಖಜಾಂಚಿ ಸನಮುಖ ಪಾಟೀಲ, ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ರಾಜಕುಮಾರ ತೊಂಡಾರೆ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಪ್ರವೀಣ ಕಾಡಾದಿ, ದತ್ತಣ್ಣ ರಾಘೊ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.